Advertisement

ಕೇರಳದಲ್ಲಿ ದೋಣಿ ದುರಂತ: 17 ಸಾವು

12:39 AM May 08, 2023 | Team Udayavani |

ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ರವಿವಾರ ಭೀಕರ ದೋಣಿ ದುರಂತ ಸಂಭವಿಸಿದೆ. ಪ್ರವಾಸಿ ದೋಣಿಯೊಂದು ಮುಳುಗಿದ ಪರಿಣಾಮ ನಾಲ್ವರು ಮಕ್ಕಳ ಸಹಿತ 17 ಮಂದಿ ಜಲ ಸಮಾಧಿಯಾಗಿದ್ದಾರೆ.

Advertisement

ಡಬಲ್‌ ಡೆಕ್ಕರ್‌ ದೋಣಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಥೂವಲ್‌ ಥೀರಮ್‌ ಎಂಬ ಪ್ರವಾಸಿ ತಾಣದಲ್ಲಿರುವ ಪುರಪುಳ ನದಿಯಲ್ಲಿ ದೋಣಿ ವಿಹಾರ ನಡೆಸಲಾಗುತ್ತಿತ್ತು. ರವಿವಾರ ರಾತ್ರಿ 7 ಗಂಟೆ ವೇಳೆಗೆ ಏಕಾಏಕಿ ದೋಣಿ ಮುಳುಗಿದ್ದು, ಕೂಡಲೇ ಮೀನುಗಾರರು ಹಾಗೂ ಸ್ಥಳೀಯರು ಧಾವಿಸಿ 10 ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾತ್ರಿ ವೇಳೆಗೆ 17 ಮಂದಿಯ ಮೃತದೇಹ ಪತ್ತೆಯಾಗಿವೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಭೀತಿಯಿದೆ ಎಂದು ಸಚಿವ ವಿ. ಅಬ್ದುರೆಹಮಾನ್‌ ತಿಳಿಸಿದ್ದಾರೆ.

ದೋಣಿಯಲ್ಲಿ ಮಿತಿಗಿಂತ ಹೆಚ್ಚು ಜನರಿಗೆ ಪ್ರವೇಶ ಕಲ್ಪಿಸಲಾಗಿತ್ತು. ಅಲ್ಲದೆ ಒಳಗೆ ಸಾಕಷ್ಟು ಜೀವರಕ್ಷಕ ಸಾಧನಗಳು, ಜಾಕೆಟ್‌ಗಳು ಇರಲಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಡಬಲ್‌ ಡೆಕ್ಕರ್‌ ಬೋಟ್‌ನಲ್ಲಿ 2 ಬಾಗಿಲುಗಳು ಇದ್ದರೂ ದೋಣಿ ಮುಳುಗುತ್ತಿದ್ದಂತೆ ಒಂದು ಡೋರ್‌ ಜಾಮ್‌ ಆಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ದುರ್ಘ‌ಟನೆಯ ಕುರಿತು ಪ್ರಧಾನಿ ಮೋದಿ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಜತೆಗೆ ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next