Advertisement
ಸುಂದರ ನೈಸರ್ಗಿಕ ತಾಣಕೂಳೂರಿನಿಂದ ತಣ್ಣೀರುಬಾವಿವರೆಗಿನ ಪ್ರದೇಶದ ಸಂಚಾರ ಎಂಥವರಿಗೂ ಮನಸ್ಸಿಗೆ ಮುದನೀಡಬಲ್ಲುದು. ಒಂದೆಡೆ ತಂಪಾಗಿ ಹರಿಯುತ್ತಿರುವ ಫಲ್ಗುಣಿ ನದಿ, ಇನ್ನೊಂದೆಡೆ ಬೃಹತ್ ಕಂಪೆನಿಗಳು, ಕುರುಚಲು ಗಿಡಗಳ ನಡುವೆ ಸ್ವತ್ಛಂದವಾಗಿ ವಿಹರಿಸುತ್ತಿರುವ ನವಿಲುಗಳು, ಸ್ವಲ್ಪವೇ ಅಂತರದಲ್ಲಿ ಸಮುದ್ರ ಹಾಗೂ ನದಿಯ ಸಂಗಮ ಪ್ರದೇಶ. ಇದರ ನಡುವೆ ಜುಳುಜುಳು ಎಂದು ಪ್ರಶಾಂತವಾಗಿ ಹರಿವ ನೀರ ಮೇಲೆ ವಾಯು ವಿಹಾರ ನಡೆಸಲು ಎಂತಹವರಿಗೂ ಮನಸಾಗದಿರದು. ಮಕ್ಕಳಿಂದ ಹಿಡಿದು ಹಿರಿಯರವರೆಗೂ ದೋಣಿವಿಹಾರವೆಂದರೆ ಆಸಕ್ತಿ ಕೆರಳುತ್ತದೆ. ದೋಣಿ ವಿಹಾರ ಮಾಡುತ್ತಲೇ ಸೂರ್ಯಾಸ್ತಮಾನ ನೋಡುತ್ತಾ, ಮುಸ್ಸಂಜೆಯ ಸವಿಯನ್ನು ಅನುಭವಿಸಬಹುದಾಗಿದೆ.
ಸ್ಥಳೀಯ ಹಿನ್ನೀರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ. ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದುವರೆಗೆ ಹಿಂದಿನ ಸರಕಾರದ ಯೋಜನೆ ಜಾರಿಗೊಳಿಸಿಲ್ಲ. ರಾಜ್ಯದ ಪಣಂಬೂರು ಬೀಚ್, ತಣ್ಣೀರು ಬಾವಿ ಬೀಚ್, ಪಿಲಿಕುಳ ಮತ್ತಿತರ ಪ್ರದೇಶಗಳು ಈಗಾಗಲೇ ಪ್ರವಾಸೋದ್ಯಮದ ಭೂಪಟದಲ್ಲಿ ಗುರುತಿಸಿಕೊಂಡಿದ್ದು, ಸಮೀಪವೇ ಇರುವ ಫಲ್ಗುಣಿ ವಾಯು ವಿಹಾರ ಅಭಿವೃದ್ಧಿ ಯೋಜನೆ ಹಾಗೆಯೇ ಉಳಿದಿರುವುದು ಪ್ರವಾಸಿಗರು ಅಮೂಲ್ಯ ನೈಸರ್ಗಿಕ ತಾಣದ ವಿಹಾರ ಅನುಭವವೊಂದನ್ನು ಕಳೆದುಕೊಳ್ಳುವಂತಾಗಿದೆ.
Related Articles
ಸುರತ್ಕಲ್ ಸಮುದ್ರ ತೀರ, ನದಿಗಳ ಸಹಿತ ಪ್ರಾಕೃತಿಕ ಕೊಡುಗೆ ಅಪಾರವಿದ್ದು, ಸದ್ಬಳಕೆ ಮಾಡಿಕೊಳ್ಳಬೇಕಿದೆ. ಆದರೆ ಸರಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿಲ್ಲ. ಅನುದಾನವೂ ಸಾಕಷ್ಟು ಬರುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ಧನಿದ್ದೇನೆ. ಕೂಳೂರು ಫಲ್ಗುಣಿ ನದಿಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಿ ದೋಣಿ ವಿಹಾರದ ಪ್ರಸ್ತಾವವಾಗಿದ್ದರೆ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಅನುದಾನ ಬಿಡುಗಡೆಯಾಗಿರುವ ಬಗ್ಗೆ ಪಡೆದುಕೊಳ್ಳುತ್ತೇನೆ.
- ಡಾ| ವೈ. ಭರತ್ ಶೆಟ್ಟಿ , ಶಾಸಕ
Advertisement