Advertisement
ಆಲಪ್ಪುಳ ಪುನ್ನಮಾಡ ಹಿನ್ನೀರಿನಲ್ಲಿ ನಡೆಯುವ ನೆಹರೂ ಟ್ರಾಫಿ ದೋಣಿ ಸ್ಪರ್ಧೆಯಿಂದ ಆರಂಭಗೊಂಡು ಕೊಲ್ಲಂ ಪ್ರಸಿಡೆಂಟ್ಸ್ ಟ್ರೋಫಿ ದೋಣಿ ಸ್ಪರ್ಧೆಯವರೆಗಿನ ದೋಣಿ ಸ್ಪರ್ಧೆಗಳನ್ನು ಒಗ್ಗೂಡಿಸಿ ಐಪಿಎಲ್ ಮಾದರಿಯಲ್ಲಿ ಜಲ ಮೇಳಗಳನ್ನು ಲೀಗ್ ಆಧಾರದಲ್ಲಿ ಆಯೋಜಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ತೀರ್ಮಾನಿಸಿದ್ದು, ‘ಕೇರಳ ಬೋಟ್ ರೇಸ್ ಲೀಗ್’ ಎಂಬ ಹೆಸರಿನಲ್ಲಿ ನಡೆಯುವ ಈ ಪಂದ್ಯ ಆಚಾರ ಅನುಷ್ಠಾನಗಳಿಂದೊಡಗೂಡಿದ ಪರಂಪರಾಗತ ದೋಣಿ ಸ್ಪರ್ಧೆಯನ್ನು ಹೊರತುಪಡಿಸಿ ಐದು ಜಿಲ್ಲೆಗಳಲ್ಲಿ ಲೀಗ್ ಆಧಾರದಲ್ಲಿ ಸ್ಪರ್ಧೆ ನಡೆಯಲಿದೆ. 2018ರ ಆಗಸ್ಟ್ 11ರಿಂದ ನವೆಂಬರ್ 1ರ ವರೆಗೆ ಕೇರಳ ಬೋಟ್ ರೇಸ್ ಲೀಗ್ ಆಯೋಜಿಸಲು ಸಚಿವ ಕಡಕಂಪಳ್ಳಿ ಸುರೇಂದ್ರನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದೆ.
ಆಗಸ್ಟ್ 11ರಂದು ಆಲಪ್ಪುಳ ಪುನ್ನಮಡದಲ್ಲಿ ನಡೆಯುವ ನೆಹರೂ ಟ್ರೋಫಿ ದೋಣಿ ಸ್ಪರ್ಧೆಯನ್ನು ಅರ್ಹತಾ ಸ್ಪರ್ಧೆಯನ್ನಾಗಿ ಪರಿಗಣಿಸಿ ಆ ಬಳಿಕ ಲೀಗ್ ಆಧಾರದಲ್ಲಿ ಪಂದ್ಯ ನಡೆಯಲಿದೆ. ಕೇರಳಕ್ಕೆ ಬರುವ ಪ್ರವಾಸಿಗರಿಗೆ ವೀಕ್ಷಿಸಲು ಅವಕಾಶ ಲಭಿಸುವ ರೀತಿಯಲ್ಲಿ ದೋಣಿ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಸ್ಪರ್ಧೆಗಳ ದಿನಾಂಕಗಳನ್ನು ಮೊದಲೇ ಘೋಷಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲಾಗುವುದು. ಆಗಸ್ಟ್ 11 ರಂದು ನೆಹರೂ ಟ್ರೋಫಿ ದೋಣಿ ಸ್ಪರ್ಧೆ (ವಳ್ಳಂಕಳಿ) ಯೊಂದಿಗೆ ಆರಂಭಗೊಂಡು ನವೆಂಬರ 1 ರಂದು ಕೊಲ್ಲಂ ಪ್ರಸಿಡೆಂಟ್ಸ್ ಟ್ರೋಫಿ ಸ್ಪರ್ಧೆಯೊಂದಿಗೆ ದೋಣಿ ಸ್ಪರ್ಧೆ ಸಂಪನ್ನಗೊಳ್ಳಲಿದೆ. ಕೇರಳ ಬೋಟ್ ರೇಸ್ ಲೀಗ್ ನಲ್ಲಿ 12 ಪಂದ್ಯಗಳು ಇರುವುದು. ನೆಹರೂ ಟ್ರೋಫಿ ವಳ್ಳಂಕಳಿಯಲ್ಲಿ (ದೋಣಿ ಸ್ಪರ್ಧೆ) ಸ್ಪರ್ಧಿಸುವ 20 ‘ಚುಂಡನ್’ ದೋಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ 9 ಚುಂಡನ್ ದೋಣಿಗಳನ್ನು ಮುಂದಿನ ಲೀಗ್ ಸ್ಪರ್ಧೆಗೆ ಪರಿಗಣಿಸಲಾಗುವುದು.
Related Articles
ಈ ಸ್ಪರ್ಧೆಗೆ ಒಟ್ಟು 15 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಇದಕ್ಕಾಗಿ 10 ಕೋಟಿ ರೂ. ಕಳೆದ ಬಜೆಟ್ ನಲ್ಲಿ ಕಾದಿರಿಸಲಾಗಿದೆ. ಉಳಿದ ಹಣಕ್ಕಾಗಿ ಪ್ರಾಯೋಜಕರನ್ನು ಕಂಡುಕೊಳ್ಳಲಾಗುವುದು ಮತ್ತು ಇತರ ಮೂಲಗಳಿಂದ ಸಂಗ್ರಹಿಸಲಾಗುವುದು. ಲೀಗ್ ಆಧಾರದಲ್ಲಿ ದೋಣಿ ಸ್ಪರ್ಧೆ ನಡೆಯುವುದರಿಂದ ಕೇರಳದ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ಜತೆಗೆ ಪ್ರವಾಸೋದ್ಯಮ ಖಾತೆಗೆ ಆದಾಯವನ್ನು ತಂದುಕೊಡಲಿದೆ ಎಂದು ನಿರೀಕ್ಷಿಸಲಾಗಿದೆ. ದೇಶಿ ಮತ್ತು ವಿದೇಶಿ ಪ್ರವಾಸಿಗರು ದೋಣಿ ಸ್ಪರ್ಧೆ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ನೆರೆಯುವ ಸಾಧ್ಯತೆಯಿದೆ.
Advertisement
ಪ್ರತಿ ಪ್ರದೇಶದಲ್ಲೂ ಜಲೋತ್ಸವ, ಬಹುಮಾನಗಳ ಮಹಾಪೂರಆಲಪ್ಪುಳ ಜಿಲ್ಲೆಯ ಪುನ್ನಮಡ, ಪುಳಿಂಕುನ್ನು, ಕೈನಕರಿ, ಕರುವಾಟ್ಟ, ಮಾವೇಲಿಕ್ಕರ, ಕಾಯಂಕುಳಂ, ಎರ್ನಾಕುಳಂ ಜಿಲ್ಲೆಯ ಪಿರವಂ, ಪುತೋಡ್, ತೃಶ್ಶೂರು ಜಿಲ್ಲೆಯ ಕೊಟ್ಟಪ್ಪುರಂ, ಕೋಟ್ಟಯಂ ಜಿಲ್ಲೆಯ ತಾಳತ್ತಂಗಡಿ, ಕೊಲ್ಲಂ ಜಿಲ್ಲೆಯ ಕಲ್ಲಡ, ಕೊಲ್ಲಂ ಹಿನ್ನೀರುಗಳಲ್ಲಿ ದೋಣಿ ಸ್ಪರ್ಧೆ ನಡೆಯಲಿದೆ. ಪ್ರತಿಯೊಂದು ಪ್ರದೇಶದಲ್ಲೂ ಲೀಗ್ ಆಧಾರದಲ್ಲಿ ಸ್ಪರ್ಧೆಯೊಂದಿಗೆ ‘ಜಲೋತ್ಸವ’ ನಡೆಯಲಿದೆ. ಲೀಗ್ ಸ್ಪರ್ಧೆಗಳಲ್ಲಿ ಅರ್ಹತೆ ಪಡೆಯುವ ಎಲ್ಲ ತಂಡಗಳಿಗೂ, ಒಂದೊಂದು ಹಿನ್ನೀರಿಗೂ ಬೋನಸ್ ಆಗಿ 4 ಲಕ್ಷ ರೂ. ನೀಡಲಾಗುವುದು. ಪ್ರತಿಯೊಂದು ಲೀಗ್ ಸ್ಪರ್ಧೆಯಲ್ಲಿ ಪ್ರಥಮ ಮೂರು ಸ್ಥಾನಗಳಿಸಿದವರಿಗೆ ತಲಾ ಒಂದು ಲಕ್ಷ ರೂ. ಯಿಂದ ಐದು ಲಕ್ಷ ರೂ. ತನಕ ಬಹುಮಾನ ನೀಡಲಾಗುವುದು. ಕೇರಳ ಬೋಟ್ ರೇಸ್ ಲೀಗ್ ನಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ಆರು ಲಕ್ಷ ರೂ.ಯಿಂದ ಹತ್ತು ಲಕ್ಷ ರೂ. ವರೆಗೆ ಬಹುಮಾನ ನೀಡಲಾಗುವುದು. ಎಲ್ಲಾ ಸ್ಪರ್ಧೆಗಳಲ್ಲಿ ಅರ್ಹತೆ ಪಡೆದ ಎಲ್ಲ ದೋಣಿಗಳು ಹೀಟ್ಸ್‌ನಿಂದಲೇ ಭಾಗವಹಿಸಬೇಕು. ದೋಣಿಗೆ ಹುಟ್ಟು ಹಾಕುವವರಲ್ಲಿ ಶೇ.75 ಮಂದಿ ಸ್ಥಳೀಯರೇ ಆಗಿರಬೇಕು ಎಂಬ ನಿಬಂಧನೆಯನ್ನು ಕಡ್ಡಾಯಗೊಳಿಸಲಾಗುವುದು. — ಪ್ರದೀಪ್ ಬೇಕಲ್