Advertisement

ಬೋಟ್‌ ನೆಕ್‌ ಯುವಜನರ ಹೊಸ ಟ್ರೆಂಡ್‌

04:07 PM Jun 14, 2019 | Sriram |

ನೀರೆಗೂ ಸೀರೆಗೂ ಬಹು ಹಿಂದಿನ ಸಂಬಂಧ. ಭಾರತದಲ್ಲಿ ಮಾತ್ರವಲ್ಲದೇ ಪ್ರಾಚೀನ ಈಜಿಪ್ತ್ನಲ್ಲೂ ಸೀರೆಯನ್ನು ಹೋಲುವ ದಿರಿಸುಗಳಿದ್ದವು. ಹಿಂದೊಂದು ಕಾಲದಲ್ಲಿ ಸೀರೆಯ ರವಿಕೆಯನ್ನು ಕತ್ತಿನವರೆಗೂ ಹೊಲಿಸುತ್ತಿದ್ದರು. ಕ್ರಮೇಣ ಮಾಡರ್ನ್ ಫ್ಯಾಷನ್‌ಗಳು ವಿವಿಧ ಪ್ರಯೋಗಗಳನ್ನು ಮಾಡಿ ಹಳೆಯ ಶೈಲಿಯನ್ನು ಮರೆಸಿಬಿಟ್ಟವು. ಆದರೆ, ಈಗ ಫ್ಯಾಷನ್‌ ಜಗತ್ತಿನಲ್ಲಿ ಎಲ್ಲರೂ ಬೋಟ್‌ ನೆಕ್‌ ಹೊಲಿಯುತ್ತಿರುವುದನ್ನು ಕಂಡರೆ “ಓಲ್ಡ… ಇಸ್‌ ಗೋಲ್ಡ…’ ಅನ್ನೋ ಮಾತು ನೆನಪಿಗೆ ಬರುತ್ತಿದೆ.

Advertisement

ಸೀರೆ ಒಂದು ಕಾಲದ ಮಹಿಳೆಯರ ಬಹು ಜನಪ್ರಿಯ ಉಡುಗೆ. ಆದರೆ, ಈ ಕಾಲದಲ್ಲಿ ಅದೊಂದು ಫ್ಯಾಷನ್‌. ಆ್ಯಂಕರ್‌ ಅನುಶ್ರೀ ಸೀರೆ ತೊಟ್ಟು ಹಾಸ್ಯಚಟಾಕಿ ಹಾರಿಸುವುದು ಕಂಡರೆ ನಮಗೂ ಅಂಥ ಬಟ್ಟೆ ತೊಡಬೇಕೆನಿಸುತ್ತದೆ. ದೀಪಿಕಾ ಪಡುಕೋಣೆ ಸಿನಿಮೋತ್ಸವದ ವೇದಿಕೆಯಲ್ಲಿ ಮಾತಾಡಿದ್ದು ಕೇಳುವವರಿಗಿಂತ ಆಕೆಯ ವಸ್ತ್ರ ವಿನ್ಯಾಸ ಹೊಗಳುವವರೇ ಹೆಚ್ಚು. ಕೆಲವೊಂದು ಹಳೆ ಖಾಲಿ ಬಾಟಲಿಗೆ ಹೊಸ ಮದ್ಯ ಸೇರಿಸಿದಂತೆ ಹಿಂದಿನ ಫ್ಯಾಷನ್‌ ಇಂದು ಮತ್ತೆ ಬಂದು ಟ್ರೆಂಡ್‌ಆಗಿದೆ.

ಹೆಣ್ಣುಮಕ್ಕಳು ಸೀರೆ ಉಟ್ಟಾಗ ಸಿಗುವ ಖುಷಿ ಪ್ಯಾಂಟ್‌ ಷರ್ಟ್‌ ಹಾಕಿದಾಗ ಸಿಗೋದಿಲ್ಲ . ಅದಕ್ಕೆ ಈಗ ಬಂದಿರುವ ಬೋಟ್‌ ನೆಕ್‌ ಬ್ಲೌಸ್‌ ಜೊತೆ ವರ್ಣರಂಜಿತವಾದ ಸೀರೆ ಉಟ್ಟ ಹುಡುಗೀರು ಯುವಕರ‌ ಗಮನ ಸೆಳೆದದ್ದು ನಿಜ. ಸೀರೆಯ ಅಂದ-ಚೆಂದ ಕೇವಲ ಉಟ್ಟುಕೊಳ್ಳುವವರಿಂದ ತಿಳಿಯುವುದಿಲ್ಲ. ಅದಕ್ಕೆ ನಾಲ್ಕೈದು ಕಮೆಂಟ್‌ ಬಂದಾಗಲೇ ಹೇಗಿದೆ ಎಂಬುದು ತಿಳಿಯುತ್ತದೆ. ಮಾರುದ್ದ ಸೀರೆ ಚೆಂದದ ರೂಪ ಪಡೆಯಬೇಕಾದರೆ ಟೈಲರ್‌ ಒಬ್ಬರ ಕೌಶಲ ಇಲ್ಲಿ ಮುಖ್ಯ ಎನಿಸುತ್ತದೆ. ಬೋಟ್‌ನೆಕ್‌ ಯಾವ ಪುಣ್ಯಾತ್ಮನ ಸಂಶೋಧನೆಯೋ ಏನೋ, ಹೆಣ್ಮಕ್ಕಳಿಗೆ ಇಷ್ಟವಾಗಿದೆ.

ಬೋಟ್‌ನೆಕ್‌ ಬಹುತೇಕ ಮದುವೆ ಸಂಭ್ರಮದಲ್ಲಿ ವಧುವಿಗೆ ಸಾಂಪ್ರದಾಯಿಕ ಶೈಲಿಯ ಘನತೆಯನ್ನು ನೀಡುತ್ತದೆ. ಯಾವುದೇ ಡಿಸೈನ್‌ ಇಲ್ಲದ ರವಿಕೆಗಳಿಗೂ ಇದೊಂದು ಆಕರ್ಷಣೆ ನೀಡುತ್ತದೆ. ಹೂ, ಎಲೆ, ನವಿಲು ಇಂತಹ ಕೃತಕ ಡಿಸೈನನ್ನು ಜೊತೆಗೆ ಅಳವಡಿಸಬಹುದು. ಇನ್ನು ಕಾಲೇಜ್‌ ಡೇ, ಟ್ರೆಡಿಷನಲ್‌ ಡೇ ಸೀರೆ ತೊಡುವ ಯುವತಿಯರ ಹಾಟ್‌ ಫೇವರೆಟ್‌.

ಬಹುತೇಕ ಸಿನಿಮಾ, ಧಾರಾವಾಹಿ ಮತ್ತು ರಿಯಾಲಿಟಿ ಶೋ ಆ್ಯಂಕರ್‌ಗಳು ಬೋಟ್‌ನೆಕ್‌ ಬ್ಲೌಸನ್ನು ಫೇಮಸ್‌ ಮಾಡಿವೆ. ಇದು ಪ್ರಸಿದ್ಧಿ ಪಡೆದದ್ದು 2017ರ ನಂತರವೇ ಆದರೂ, ಈಗ ಇದನ್ನು ಎಲ್ಲರೂ ತೊಡುತ್ತಾರೆ. ಮಹಿಳೆಯರು ವಿಭಿನ್ನತೆಯ ಪ್ರೋತ್ಸಾಹಕರು ಮತ್ತು ಮ್ಯಾಚಿಂಗ್‌ ಪ್ರಿಯರು. ಈ ಕಾರಣದಿಂದಲೇ ಯಾವುದೇ ಟ್ರೆಂಡು ಮೊದಲು ಅನುಮಾನಿಸಿದರೂ ಮತ್ತೆ ಸಾರ್ವತ್ರಿಕವಾಗಿ ಒಪ್ಪುತ್ತಾರೆ. ಫ್ಯಾನ್ಸಿ ಅಥವಾ ಕಾಟನ್‌ ಸೀರೆ ಆಧಾರದಲ್ಲಿ ಬೋಟ್‌ನೆಕ್‌ ರವಿಕೆಗೆ ಮ್ಯಾಚಿಂಗ್‌ ಕಾಂಬಿನೇಷನ್‌ ಮಾಡುವುದು ಸೂಕ್ತ. ಫ್ಯಾನ್ಸಿ ಸೀರೆಗೆ ಸಿಂಪಲ್‌ ಮೇಕಪ್‌ ಜೊತೆ ಮ್ಯಾಚಿಂಗ್‌ ದೊಡ್ಡ ಕಿವಿಯೋಲೆ, ಒಂದು ಕೈಗೆ ಬ್ರಾಸ್‌ಲೆಟ್‌ ಅಥವಾ ದಪ್ಪಗಿನ ಒಂದು ಬಳೆ, ಫ್ರೀ ಹೇರ್‌ ಅಥವಾ ಕ್ರಾಸ್‌ ಜಡೆ ಮಾಡರ್ನ್ ಲುಕ್‌ ನೀಡುತ್ತದೆ. ಟ್ರೆಡೀಶ‌ನಲ್‌ ಕಾಟನ್‌ ಸೀರೆಗಳಿಗೆ ಸಿಂಪಲ್‌ ಮೇಕಪ್‌, ಜುಮ್ಕಿ ಅಥವಾ ಟ್ರೆಡಿಷನಲ್‌ ಲುಕ್‌ ಕೊಡುವ ಕಿವಿಯೋಲೆ, ಸೀರೆಗೆ ಹೋಲುವ ಸೆಟ್ಟಿಂಗ್‌ ಬಳೆಗಳು, ಬೈತಲೆ, ಕೂದಲಿಗೆ ಸೂಡಿ ಅಥವಾ ಜಡೆ ಸೂಕ್ತವಾಗಿದೆ.

Advertisement

ಹೆಣ್ಣಿಗೆ ತಾನು ಬೇರೆಯವರಿಗಿಂತ ಚೆನ್ನಾಗಿ ಕಾಣಬೇಕು ಎನ್ನುವ ಬಯಕೆ ಸಹಜ. ಸೀರೆಯು ಕೂಡ ಆಕೆಗೆ ಗೌರವ ಸ್ಥಾನ ನೀಡಲು ಸಹಕಾರಿ. ಆದರೆ, ವಿಪರ್ಯಾಸವೆಂದರೆ ಸೀರೆ ಖರೀದಿಗಿಂತಲೂ ಅದರ ರವಿಕೆ ಹೊಲಿಸಲು ತುಂಬಾ ಹಣ ನೀಡಬೇಕಾಗುತ್ತದೆ. ಇದರಿಂದಾಗಿ ಮಾರುಕಟ್ಟೆಯ ಬೇರೆ ಬಗೆಯ ಫ್ಯಾಷನ್‌ ಡ್ರೆಸ್‌ಗಳಿಗೆ ಜನ ಮುಗಿಬೀಳುತ್ತಿದ್ದಾರೆ. ಇದರಿಂದ ಸೀರೆ ಜನಪ್ರಿಯತೆ ಕುಗ್ಗುವುದಲ್ಲದೆ ಅದನ್ನು ಉಡುವವರು ಕೂಡ ಕಡಿಮೆಯಾಗುತ್ತಾರೆ. ಈ ನಿಟ್ಟಿನಲ್ಲಿ ಬೇರೆಬೇರೆ ಕಲಾಕೃತಿಯ ಚಿತ್ತಾರದಿಂದ ರೆಡಿಮೇಡ್‌ ರವಿಕೆಗಳು ಮಾರುಕಟ್ಟೆಯಲ್ಲಿ ಬಂದಿರುವುದು ಸೀರೆ ಪ್ರಿಯರ ಸಂತೋಷಕ್ಕೆ ಕಾರಣವಾಗಿದೆ. ವಿನೂತನ ರೆಡಿಮೇಡ್‌ ರವಿಕೆಗಳು ಅತ್ಯಂತ ಅಗ್ಗ ಮತ್ತು ವರ್ಣರಂಜಿತವಾಗಿ ತಯಾರಾಗಿ ದೊರೆಯುತ್ತಿವೆ. ಒಂದೇ ಬ್ಲೌಸ್‌ನ್ನು ಬೇರೆ ಬೇರೆ ಬಣ್ಣದ ಸೀರೆಗೆ ತೊಡಲು ಸಾಧ್ಯವಿರುವುದು ಸೀರೆ ಉಡಲು ಪ್ರೋತ್ಸಾಹ ದೊರೆತಂತಿದೆ.

-ರಾಧಿಕಾ ಕುಂದಾಪುರ
ದ್ವಿತೀಯ ಎಂ. ಎ.,ಮಂಗಳ ಗಂಗೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next