ಕಾಸರಗೋಡು: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿದ್ದರೂ, ಅವುಗಳನ್ನು ಧನಾತ್ಮಕವಾಗಿ ಬಳಸಿಕೊಳ್ಳಲು ಈ ವರೆಗೂ ವಿಫಲವಾಗಿದೆ. ಇತಿಹಾಸ ಪ್ರಸಿದ್ಧ ಬೇಕಲ ಕೋಟೆಯನ್ನು ಕೇಂದ್ರವಾಗಿರಿಸಿ ಜಿಲ್ಲೆಯಲ್ಲಿ ಹಲವು ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಯೋಜಿಸಲಾಗಿದ್ದರೂ, ನಿರೀಕ್ಷೆಯಂತೆ ಅಭಿವೃದ್ಧಿ ಸಾಧ್ಯವಾಗಿಲ್ಲ.
ಹಣಕಾಸಿನ ಕೊರತೆ, ತಾಂತ್ರಿಕ ಕಾರಣಗಳು ಹಾಗೂ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪ್ರವಾಸೋದ್ಯಮ ಅಭಿವೃದ್ಧಿ ಕುಂಟುತ್ತಾ ಸಾಗುತ್ತಿದೆ. ಇದೇ ವೇಳೆ ಪೆರಿಯಾದಲ್ಲಿ ಏರ್‌ಸ್ಟ್ರಿಪ್ ಯೋಜನೆಯನ್ನು ಸಾಕಾರಗೊಳಿಸಲು ಸಾಕಷ್ಟು ಪ್ರಯತ್ನಗಳು ಸಾಗುತ್ತಿವೆ. ಬಿಆರ್‌ಡಿಸಿ ವಿದೇಶಿ ಮತ್ತು ದೇಶೀಯ ಪ್ರವಾಸಿಗರಿಗಾಗಿ ನದಿ ಸಂಸ್ಕೃತಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು “ನೌಕಾಯಾನ’ ಪ್ರವಾಸೋದ್ಯಮಕ್ಕೆ ಒತ್ತು ನೀಡಿದೆ.
ಇದೇ ಸಂದರ್ಭದಲ್ಲಿ ಬಹಳಷ್ಟು ನಿರೀಕ್ಷೆಯನ್ನು ಹೊಂದಿದ್ದ ನೀಲೇಶ್ವರದ ಕೋಟ್ಟಪ್ಪುರದಲ್ಲಿ ಹೌಸ್ ಬೋಟ್ ಟರ್ಮಿನಲ್ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. ಹೌಸ್ ಬೋಟ್ ಟರ್ಮಿನಲ್ ಕಾಮಗಾರಿಗೆ 8 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಕಾಮಗಾರಿ ಪೂರ್ತಿಯಾಗುವುದರೊಂದಿಗೆ ಪ್ರವಾಸಿಗರಿಗೆ ಸುಲಭದಲ್ಲಿ ಹೌಸ್ ಬೋಟ್ ಟರ್ಮಿನಲ್‌ಗೆ ತಲುಪಲು ಸಾಧ್ಯವಾಗಲಿದೆ. 2018ರಲ್ಲಿ ಕೋಟ್ಟಪ್ಪುರ ದಲ್ಲಿ ಹೌಸ್ ಬೋಟ್ ಟರ್ಮಿನಲ್ ನಿರ್ಮಿಸಲು ಆಡಳಿತಾನುಮತಿ ಲಭಿಸಿತ್ತು. ಆದರೆ ಕೆಲವು ಕಾರಣಗಳಿಂದ ಕಾಮಗಾರಿ ವಿಳಂಬವಾಯಿತು. ಪ್ರಮುಖವಾಗಿ ರಸ್ತೆ ಸಮಸ್ಯೆ ತೊಡಕಾಗಿತ್ತು.
ಅಚ್ಚಾಂತುರ್ತಿ-ಕೋಟ್ಟಪ್ಪುರ ರಸ್ತೆ ಸೇತುವೆ ಲೋಕಾರ್ಪಣೆಗೊಳ್ಳುವುದರೊಂದಿಗೆ ಕೋಟ್ಟಪ್ಪುರ ಹೌಸ್ ಬೋಟ್ ಟರ್ಮಿನಲ್‌ಗೆ ಸಾರಿಗೆ ನಿಲುಗಡೆಗೊಂಡಿತು. ಈ ಕಾರಣದಿಂದ ಹೌಸ್ ಬೋಟ್‌ನಲ್ಲಿ ವಿಹಾರ ನಡೆಸಲು ಬರುತ್ತಿದ್ದ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಯಿತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಶಾಸಕ ಎಂ. ರಾಜಗೋಪಾಲನ್, ನೀಲೇಶ್ವರ ನಗರಸಭೆ, ಮಲಬಾರ್ ಟೂರಿಸಂ ಪ್ರಮೋಶನ್ ಕೌನ್ಸಿಲ್ ಮಧ್ಯ ಪ್ರವೇಶಿಸುವ ಮೂಲಕ ಕೋಟ್ಟಪ್ಪುರ ಹೌಸ್ ಬೋಟ್ ಟರ್ಮಿನಲ್‌ಗೆ ರಸ್ತೆ ನಿರ್ಮಾಣಕ್ಕೆ ತೀರ್ಮಾನಿಸಲಾಯಿತು. ಆ ಬಳಿಕ ಸ್ಥಳೀಯರ ಬೃಹತ್ ಸಭೆ ಕರೆದು ಬೋಟ್ ಹೌಸ್ ಟರ್ಮಿನಲ್‌ಗೆ ಕೋಟ್ಟಪ್ಪುರದ ವೈಕುಂಠ ಕೇತ್ರದ ಸಮೀಪದಿಂದ ನದಿ ದಡದ ಮೂಲಕ ರಸ್ತೆ ನಿರ್ಮಿಸಲು ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಟರ್ಮಿನಲ್ ಸಾಕಾರಗೊಂಡಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಕೋಟ್ಟಪ್ಪುರ ಹೌಸ್ ಬೋಟ್ ಟರ್ಮಿನಲ್ ಆರಂಭಗೊಂಡಲ್ಲಿ ವಿದೇಶಿ ಮತ್ತು ಸ್ವದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ. ಇದರಿಂದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಲಿದೆ. ದೋಣಿ ವಿಹಾರದ ಮೂಲಕ ಸಂತೋಷವನ್ನು ಹಂಚಿಕೊಳ್ಳಲು ಪ್ರವಾಸಿಗರು ಇತ್ತ ದೌಡಾಯಿಸಿದರೂ ಅಚ್ಚರಿಪಡಬೇಕಾಗಿಲ್ಲ.
ಬೇಕಲ ಕೋಟೆಯನ್ನು ವೀಕ್ಷಿಸಲು ಬರುವ ಪ್ರವಾಸಿಗರು ಕೋಟ್ಟಪ್ಪುರ ಹೌಸ್ ಬೋಟ್‌ನಲ್ಲಿ ವಿಹಾರ ನಡೆಸಲು ತೆರಳುವ ಸಾಧ್ಯತೆ ಅಧಿಕವಾಗಿದೆ. ಹಿನ್ನೀರಿನಲ್ಲಿ ಸಾಗುವ “ದೋಣಿ ಮನೆ’ಯಲ್ಲಿ ವಿಹಾರ ನಡೆಸುತ್ತಾ ಪ್ರಕೃತಿ ಸೌಂದರ್ಯವನ್ನು ಸವಿಯಲು ಉತ್ತಮ ಅವಕಾಶವೂ ಲಭಿಸುವುದು. ಈ ಮೂಲಕ ಪ್ರವಾಸೋದ್ಯಮವೂ ಅಭಿವೃದ್ಧಿ ಕಾಣಲಿದೆ. ಹಲವಾರು ಮಂದಿಗೆ ಉದ್ಯೋಗಾವಕಾಶ ಸಾಧ್ಯತೆಯಿದೆ.