ಪೊಳಲಿ : ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ಹಾಗೂ ಪರಿವಾರ ದೇವಸ್ಥಾನದಲ್ಲಿ ಮಾ. 4ರಿಂದ 13ರ ತನಕ ಬ್ರಹ್ಮಕಲಶೋತ್ಸವ ನಡೆಯಲಿರುವುದರಿಂದ ಮಳಲಿಯಿಂದ ಪೊಳಲಿಗೆ ಫಲ್ಗುಣಿ ನದಿಯಾಗಿ ತೆರಳುವ ಭಕ್ತರ ಅನುಕೂಲಕ್ಕಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ಸುಮಾರು ಐದಕ್ಕಿಂತ ಅಧಿಕ ಯಾಂತ್ರೀಕೃತ ಬೋಟ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.
ಶಾಸಕ ರಾಜೇಶ್ ನಾಯ್ಕ ಅವರು ಸಹಾಯಕ ಆಯುಕ್ತ ಮಂಗಳೂರು ಉಪವಿಭಾಗದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಪೊಳಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ. 4ರಿಂದ ಮಾ. 13ರತನಕ ಭಕ್ತಾಧಿಗಳ ಆಗಮನಕ್ಕೆ ಫಲ್ಗುಣಿ ನದಿ ಮೂಲಕ ಸಂಚಾರ ಕಲ್ಪಿಸಲು ಬೋಟ್ ಅಗತ್ಯವಿದೆ. ಈ ಕುರಿತಂತೆ ಎನ್‌ಸಿ ವಾಟರ್ ಸ್ಪೋರ್ಟ್ಸ್ ಆ್ಯಂಡ್ ಅಡ್ವೆಂಚರ್ ಸಂಸ್ಥೆಗೆ ಬೋಟ್ ಅಳವಡಿಸಲು ನಿಯಮಾನುಸಾರ ಪರಿಶೀಲಿಸಿ ಅನುಮತಿ ನೀಡುವಂತೆ ಕೋರಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮುರ್ಡೇಶ್ವರದಿಂದ ಒಟ್ಟು ಐದಕ್ಕಿಂತಲೂ ಹೆಚ್ಚು ಯಾಂತ್ರೀಕೃತ ದೋಣಿಗಳು ಮಳಲಿಗೆ ಆಗಮಿಸಿ ಭಕ್ತರ ಸಂಚಾರಕ್ಕೆ ಅನುಕೂಲ ಕಲ್ಪಿಸಲಿದೆ. ಮಳಲಿಯ ಕಾಜಿಲ- ಸಾದೂರು ಮುಖಾಂತರ ಕಡಪುಕರ್ಯದಿಂದ ಪೊಳಲಿಯ ಪಡ್ಯಪು ತನಕ ಹಾಗೂ ಮಳಲಿ ಪೇಟೆಯಿಂದ ಕುರ್ವೆಮಾರ್ ಮುಖಾಂತರ ಫಲ್ಗುಣಿ ನದಿಯಿಂದ ಪೊಳಲಿಗೆ ಬೋಟ್ ಗಳು ಸಂಚಾರ ನಡೆಸಲಿದೆ. ಸಹಾಯಕ ಆಯುಕ್ತರ ಅನುಮತಿ ಸಿಕ್ಕ ಬಳಿಕ ರವಿವಾರದಿಂದ ಬೋಟ್ ಸಂಚಾರ ಆರಂಭಗೊಳ್ಳಲಿದೆ.
ಕಿಂಡಿ ಅಣೆಕಟ್ಟು ನಿರ್ಮಿಸುವ ಪ್ರಸ್ತಾಪವಿದ್ದು, ಕಳೆದ ವರ್ಷ ಮಾಜಿ ಶಾಸಕ ರಮಾನಾಥ ರೈ ಅವರು ಬಹುಕೋಟಿ ವೆಚ್ಚದ ಕಿಂಡಿ ಅಣೆಕಟ್ಟಿಗೆ ಶಿಲಾನ್ಯಾಸ ನೆರವೇರಿಸಿದ್ದು, ಕಾಮಗಾರಿ ಇನ್ನಷ್ಟೇ ಪ್ರಾರಂಭ ವಾಗಬೇಕಾಗಿದೆ. ನೀರಿನ ಕೊರತೆ ನೀಗಿಸುವುದರ ಜತೆಗೆ ಇದರಿಂದಲೇ ಸಂಚಾರ ಕಲ್ಪಿಸಬೇಕೆನ್ನುವುದು ಮಳಲಿ ನಾಗರಿಕರ ಬಹುವರ್ಷಗಳ ಬೇಡಿಕೆಯಾಗಿದೆ.
1 ಗಂಟೆಯಷ್ಟು ಸಮಯ
ಫಲ್ಗುಣಿ ನದಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿರುವ ಕಾರಣ ಸಾಕಷ್ಟು ನೀರಿದೆ. ಈ ಮುಂಚೆ ಬೇಸಗೆಯಲ್ಲಿ ನದಿಯಲ್ಲಿ ನೀರು ಬತ್ತಿ ಹೋಗುತ್ತಿದ್ದ ಕಾರಣ ಮಳಲಿಯ ಭಕ್ತರು ನಡೆದುಕೊಂಡೇ ಪೊಳಲಿ ದೇವಸ್ಥಾನಕ್ಕೆ ಸಂಚರಿಸುತ್ತಿದ್ದರು. ಮಳಲಿಯಿಂದ ಪೊಳಲಿಗೆ ಕೇವಲ ಹತ್ತು ನಿಮಿಷದ ದಾರಿಯಾಗಿದ್ದು, ಆದರೆ ನದಿಯಲ್ಲಿ ನೀರಿರುವುದರಿಂದ ಇಲ್ಲಿನ ಭಕ್ತರು ವಾಹನಗಳ ಮುಖಾಂತರ ಮಳಲಿಯಿಂದ ಗುರುಪುರ ಕೈಕಂಬಕ್ಕೆ ತೆರಳಿ ಅಲ್ಲಿಂದ ಗುರು ಪುರ ದ್ವಾರದಿಂದ ಪೊಳಲಿಗೆ ತೆರಳಬೇಕಾಗಿದೆ. ಇದರಿಂದಾಗಿ ಹತ್ತು ನಿಮಿಷದ ಹಾದಿಗೆ ಸುಮಾರು 1 ಗಂಟೆಯಷ್ಟು ಸಮಯ ಬೇಕಾಗುತ್ತದೆ.