Advertisement

ಮೀನುಗಾರರಿಗೆ ಇಸ್ರೋ ರಕ್ಷೆ !

10:36 AM Sep 21, 2019 | Team Udayavani |

ಮಂಗಳೂರು: ಆಳಸಮುದ್ರದಲ್ಲಿ ಬೋಟ್‌ ನಾಪತ್ತೆ, ಅವಘಡಗಳನ್ನು ತಡೆಯಲು, ಸಂಭವಿಸಿದರೂ ಕ್ಷಿಪ್ರ ರಕ್ಷಣೆಗೆ ಅನುಕೂಲ ಮಾಡಿಕೊಡುವ ಸಂವಹನ ಸಾಧನವೊಂದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ರೂಪಿಸುತ್ತಿದೆ.

Advertisement

ಮಲ್ಪೆಯ ಸುವರ್ಣ ತ್ರಿಭುಜ ಬೋಟ್‌ ನಾಪತ್ತೆ ಪ್ರಕರಣ ದೇಶವ್ಯಾಪಿ ಸಂಚಲನ ಮೂಡಿಸಿತ್ತು. ಭವಿಷ್ಯದಲ್ಲಿ ಇಂತಹ ದುರ್ಘ‌ಟನೆಗಳನ್ನು ತಡೆಯಲೇಬೇಕು ಎಂದು ತೀರ್ಮಾನಿಸಿರುವ ಮೀನುಗಾರಿಕೆ ಇಲಾಖೆ ಇಂತಹ ಉಪಕರಣವನ್ನು ತಯಾರಿಸಿಕೊಡುವಂತೆ ಇಸ್ರೋವನ್ನು ಕೇಳಿಕೊಂಡಿತ್ತು.

ಉಪಕರಣದ ಡೆಮೊ ನೋಡಲಾಗಿದೆ. ಈ ಬಗ್ಗೆ ಮೀನುಗಾರಿಕೆ ಸಚಿವರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂಬುದಾಗಿ ಇಲಾಖೆಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ಸದ್ಯ ಟ್ರಾನ್ಸ್‌ಪಾಂಡರ್‌ ಕಡ್ಡಾಯ
ಆಳ ಸಮುದ್ರದಲ್ಲಿ ಅಪಾಯ ಸಂಭವಿಸಿದರೆ ರಕ್ಷಣೆಗೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಬೋಟ್‌ಗಳು ಕಡ್ಡಾಯವಾಗಿ ಎಐಎಸ್‌ ಟ್ರಾನ್ಸ್‌ಪಾಂಡರ್‌ ಅಳವಡಿಸಬೇಕು ಎಂದು ಮೀನುಗಾರಿಕೆ ಇಲಾಖೆ ಆದೇಶಿಸಿದೆ. ಬೋಟ್‌ಗೆ ಏನು ಸಮಸ್ಯೆ ಎದುರಾಗಿದೆ, ಅದು ಯಾವ ಸ್ಥಳದಲ್ಲಿದೆ ಎಂಬ ಮಾಹಿತಿ ಇದರಿಂದ ತಿಳಿಯುತ್ತದೆ. ಎಐಎಸ್‌ ಟ್ರಾನ್ಸ್‌ಪಾಂಡರ್‌ ಅಳವಡಿಸಿ, ಬಿಲ್‌ ತೋರಿಸಿದವರಿಗೆ ಮಾತ್ರ ಸಬ್ಸಿಡಿ ಡೀಸೆಲ್‌ ಪಾಸ್‌ಬುಕ್‌ ನೀಡುತ್ತಿದ್ದೇವೆ. ಹಾಗಾಗಿ ಹೆಚ್ಚಿನ ಬೋಟ್‌ಗಳು ಈ ಯಂತ್ರವನ್ನು ಅಳವಡಿಸಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಇಸ್ರೋ ಸಾಧನವೇನು?
ಟ್ರಾನ್ಸ್‌ಪಾಂಡರ್‌ನಿಂದ ಅಪಾಯ ಸಂಭವಿಸಿದ ಬಳಿಕ ಮಾತ್ರ ಮಾಹಿತಿ ಪಡೆಯುವ ಅವಕಾಶವಿದೆ. ಆದರೆ ಬೋಟ್‌ ಅಪಾಯದಲ್ಲಿರುವ ಕ್ಷಣದಿಂದಲೇ ಮಾಹಿತಿ ಪಡೆಯಲು ಇಸ್ರೋದ ಸಾಧನ ನೆರವಾಗಲಿದೆ. ಮೀನುಗಾರರ ಜತೆಗೆ ನೇರ ಸಂಪರ್ಕ ಇದರಿಂದ ಸಾಧ್ಯವಾಗಲಿದೆ. ಸೂಚನೆ ಲಭಿಸಿದ ತತ್‌ಕ್ಷಣವೇ ಕಾರ್ಯಾಚರಣೆಗಿಳಿಯಲು ಇದು ಅನುಕೂಲ ಮಾಡಿಕೊಡುತ್ತದೆ.

Advertisement

ಇಮ್ಮುಖ ಸಂವಹನ ಸಾಧ್ಯ
ಸದ್ಯ ಇರುವ ಟ್ರಾನ್ಸ್‌ಪಾಂಡರ್‌ ಮೂಲಕ ಒಮ್ಮುಖ ಮಾಹಿತಿಯನ್ನಷ್ಟೇ ಪಡೆಯಲು ಸಾಧ್ಯ. ಅಂದರೆ ದೋಣಿಯಿಂದ ಅವಘಡ ನಡೆದಿದೆ, ಎಲ್ಲಿ ಎಂಬಿಷ್ಟೇ ಮಾಹಿತಿ ಕೋಸ್ಟ್‌ಗಾರ್ಡ್‌ ನಿಯಂತ್ರಣ ಕೊಠಡಿಗೆ ಸಿಗುತ್ತದೆ. ಇಲ್ಲಿಂದ ಹೆಚ್ಚುವರಿ ಮಾಹಿತಿಯನ್ನು ಕೇಳಿಪಡೆಯಲು ಅಸಾಧ್ಯ. ಆದರೆ ನೂತನ ಉಪಕರಣದಿಂದ ಇಮ್ಮುಖ ಸಂವಹನ ಸಾಧ್ಯವಾಗಬಲ್ಲುದು. ಹೀಗಾಗಿ ಹೆಚ್ಚುವರಿ ಮಾಹಿತಿ ಸಂಗ್ರಹಿಸಿ ನಿಖರವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲು ಅನುಕೂಲ. ಇದು ಉಪಗ್ರಹ ಸಂಪರ್ಕ ಮೂಲಕ ಕಾರ್ಯಾಚರಿಸುತ್ತದೆ.

ಮೀನುಗಾರಿಕೆ ಸಚಿವರೊಂದಿಗೆ ಚರ್ಚೆ
ಪ್ರಸ್ತುತ ಇಸ್ರೋದೊಂದಿಗೆ ಎರಡು ಬಾರಿ ಸಭೆ ನಡೆಸಲಾಗಿದೆ. ನೂತನ ಸಂವಹನ ಉಪಕರಣದ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಈ ಬಗ್ಗೆ ಮೀನುಗಾರಿಕೆ ಸಚಿವರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇರಿಸಲಿದ್ದೇವೆ. ಎಲ್ಲವೂ ಸರಿ ಹೋದರೆ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಇದನ್ನು ವಿತರಿಸಲಿದ್ದೇವೆ.
 - ತಿಪ್ಪೇಸ್ವಾಮಿ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು, ಮಂಗಳೂರು

– ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next