Advertisement

BCCIಯಿಂದ ಪ್ರಮಾಣೀಕೃತ ಕಾರ್ಯಾಚರಣೆ ಪದ್ಧತಿ ರಚನೆ ; 60 ವರ್ಷ ಮೀರಿದವರಿಗೆ ಅವಕಾಶವಿಲ್ಲ

02:45 AM Aug 04, 2020 | Hari Prasad |

ಹೊಸದಿಲ್ಲಿ: ಬಿಸಿಸಿಐ ದೇಶಿ ಕ್ರಿಕೆಟಿಗೆ ಸಂಬಂಧಿಸಿದಂತೆ ಪ್ರಮಾಣೀಕೃತ ಕಾರ್ಯಾಚರಣೆ ಪದ್ಧತಿಯನ್ನು (ಎಸ್‌ಒಪಿ) ಸೋಮವಾರ ಬಿಡುಗಡೆ ಮಾಡಿದೆ.

Advertisement

ಇದು 100 ಪುಟಗಳನ್ನು ಹೊಂದಿದ್ದು, ಕೋವಿಡ್ 19 ಹಿನ್ನೆಲೆಯಲ್ಲಿ ಸಿದ್ಧವಾಗಿದೆ.

ಈ ಪ್ರಕಾರ 60 ವರ್ಷ ಮೀರಿದ ಸಹಾಯಕ ಸಿಬಂದಿ, ಅಂಪಾಯರ್‌ಗಳು, ಮೈದಾನ ಸಿಬಂದಿ, ಇನ್ನಿತರ ಯಾವುದೇ ವ್ಯಕ್ತಿಗಳಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ಜತೆಗೆ ಮಧುಮೇಹ, ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವುದು, ಇನ್ನಿತರ ಆರೋಗ್ಯ ಸಮಸ್ಯೆ ಹೊಂದಿದ್ದರೆ ಅವರು ಕೋವಿಡ್ 19 ಸೋಂಕಿಗೆ ಸಿಲುಕುವ ಸಾಧ್ಯತೆ ಜಾಸ್ತಿ. ಅವರಿಗೆಲ್ಲ ಸರಕಾರದ ಹೊಸ ಆದೇಶ ಬರುವವರೆಗೆ ಅವಕಾಶ ನಿರಾಕರಿಸಲಾಗಿದೆ.

ಇದರಿಂದ ಭಾರೀ ಹೊಡೆತ ಎದುರಿಸಿರುವವರು ಬಂಗಾಲ ಕ್ರಿಕೆಟ್‌ ತಂಡದ ತರಬೇತುದಾರ, 65 ವರ್ಷದ ಅರುಣ್‌ಲಾಲ್‌ ಹಾಗೂ ಆಸ್ಟ್ರೇ ಲಿಯ ಮೂಲದ ಬರೋಡ ತಂಡದ ತರಬೇತುದಾರ, 66 ವರ್ಷದ ಡೇವ್‌ ವಾಟ್‌ಮೋರ್‌.

ಅರುಣ್‌ಲಾಲ್‌ ಈ ವರ್ಷ ಬಂಗಾಲವನ್ನು ರಣಜಿ ಫೈನಲಿಗೇರಿಸಲು ನೆರವಾಗಿದ್ದರು. 1996ರಲ್ಲಿ ಶ್ರೀಲಂಕಾದ ವಿಶ್ವಕಪ್‌ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ವಾಟ್‌ಮೋರ್‌ ಎಪ್ರಿಲ್‌ ತಿಂಗಳಲ್ಲಷ್ಟೇ ಬರೋಡ ರಣಜಿ ತಂಡದ ತರಬೇತುದಾರರಾಗಿ ನೇಮಕಗೊಂಡಿದ್ದರು.

Advertisement

ಕೋವಿಡ್ 19 ಕಾರ್ಯಪಡೆ
ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥ ರಾಹುಲ್‌ ದ್ರಾವಿಡ್‌, ಬಿಸಿಸಿಐನ ಕೋವಿಡ್ 19 ನಿಗ್ರಹ ಕಾರ್ಯ ಪಡೆಯಲ್ಲಿ ಸ್ಥಾನ ಪಡೆದಿದ್ದಾರೆ. ಸದ್ಯ ಈ ಪಡೆಯ ರಚನೆಯಲ್ಲಿ ಬಿಸಿಸಿಐ ನಿರತವಾಗಿದೆ. ಪೂರ್ಣ ಸದಸ್ಯರ ವಿವರ ಮುಂದೆ ಗೊತ್ತಾಗಲಿದೆ.

ಕಿಟ್‌ ಪ್ರಾಯೋಜಕತ್ವಕ್ಕೆ ಬಿಡ್‌
ಸಭೆಯಲ್ಲಿ ಭಾರತ ಕ್ರಿಕೆಟ್‌ ತಂಡದ ಕಿಟ್‌ಗಳ ಪ್ರಾಯೋಜಕತ್ವ, ಮಾರುಕಟ್ಟೆ ಪಾಲುದಾರಿಕೆ, ಇನ್ನಿತರ ಹಕ್ಕುಗಳಿಗಾಗಿ ಬಿಡ್‌ ಕರೆಯಲಾಗಿದೆ.

ನಕಲಿ ವಯೋಮಿತಿ
ಕ್ರಿಕೆಟ್‌ನಲ್ಲಿ ನಕಲಿ ವಯೋಮಿತಿ ಪ್ರಮಾಣಪತ್ರ ಸಲ್ಲಿಸುವುದು ಮಾಮೂಲಾಗಿದೆ. ಇನ್ನು ವಯೋಮಿತಿಯ ಬಗ್ಗೆ ನಕಲಿ ಪ್ರಮಾಣ ಪತ್ರ ನೀಡಿರುವುದನ್ನು ಆಟಗಾರ ತಾನಾಗಿಯೇ ಬಾಯ್ಬಿಟ್ಟರೆ, ಆತನಿಗೆ ಶಿಕ್ಷೆಯಿಂದ ವಿನಾಯಿತಿ ಇರುತ್ತದೆ. ಇಲ್ಲವಾದರೆ 2 ವರ್ಷ ನಿಷೇಧ ಹೇರಲಾಗುತ್ತದೆ. ಬಿಸಿಸಿಐ ಅಧೀನದಲ್ಲಿ 2020-21ರಿಂದ ನಡೆಯುವ ಎಲ್ಲ ವಯೋಮಾನದ ಕೂಟಗಳಿಗೂ ಇದು ಅನ್ವಯಿಸುತ್ತದೆ.

ವಿವೋ ಪ್ರಾಯೋಜನೆಗೆ ವಿರೋಧ
ಚೀನ ಮೊಬೈಲ್‌ ಕಂಪನಿ ವಿವೋವನ್ನು ಐಪಿಎಲ್‌ ಶೀರ್ಷಿಕೆ ಪ್ರಾಯೋಜಕತ್ವದಲ್ಲಿ ಉಳಿಸಿಕೊಳ್ಳಲು ಬಿಸಿಸಿಐ ತೀರ್ಮಾನಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿವಾರ ಸಂಘಟನೆ ಸ್ವದೇಶಿ ಜಾಗರಣ್‌ ಮಂಚ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ಚೀನಿ ಸೈನಿಕರ ಕೈಯಲ್ಲಿ ಭಾರತೀಯ ಯೋಧರು ಹತರಾಗಿದ್ದರೂ, ಅದನ್ನು ಪರಿಗಣಿಸದೆ ಬಿಸಿಸಿಐ ಚೀನ ಕಂಪೆನಿಯನ್ನು ಉಳಿಸಿಕೊಂಡಿದೆ. ಇದು ಬಿಸಿಸಿಐ, ಭಾರತೀಯ ಸೈನಿಕರಿಗೆ ತೋರಿದ ಅಗೌರವ’ ಎಂದು ಹರಿಹಾಯ್ದಿದೆ.

ಭಾರತೀಯ ಕ್ರೀಡಾಭಿಮಾನಿಗಳು ಐಪಿಎಲ್‌ ಟಿ20 ಕೂಟವನ್ನು ಬಹಿಷ್ಕರಿಸಬೇಕು ಎಂದು ಸ್ವದೇಶ ಜಾಗರಣ್‌ ಮಂಚ್‌ ಸಹ ಸಂಘಟನಾ ಕಾರ್ಯದರ್ಶಿ ಅಶ್ವಾನಿ ಮಹಾಜನ್‌ ಆಗ್ರಹಿಸಿದ್ದಾರೆ. ಕೇಂದ್ರ ಸರಕಾರ, ಚೀನವನ್ನು ಭಾರತೀಯ ಮಾರುಕಟ್ಟೆಯಿಂದ ಹೊರಹಾಕಲು ಯತ್ನಿಸುತ್ತಿದೆ. ಇಂಥ ಹೊತ್ತಿನಲ್ಲಿ ಬಿಸಿಸಿಐ ತನ್ನ ನಿರ್ಧಾರವನ್ನು ಇನ್ನೊಮ್ಮೆ ಪರಿಶೀಲಿಸಬೇಕು ಎಂದು ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next