Advertisement

ಐಟಿ ಕಂಪನಿ ಗೇಟ್‌ಗೇ ಬಿಎಂಟಿಸಿ

11:22 AM Jul 14, 2017 | |

ಬೆಂಗಳೂರು: “ನಮ್ಮ ಮೆಟ್ರೋ’ ಮೊದಲ ಹಂತ ಪೂರ್ಣಗೊಂಡ ನಂತರವೂ ನಿರೀಕ್ಷಿತ ಪ್ರಯಾಣಿಕರನ್ನು ಸೆಳೆಯುವಲ್ಲಿ ಬಸ್‌ ಸಂಪರ್ಕ ಸೇವೆ (ಫೀಡರ್‌ ಸೇವೆ) ವಿಫ‌ಲವಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಐಟಿ ಪಾರ್ಕ್‌ಗಳಿಗೆ “ವಿಶೇಷ ಫೀಡರ್‌ ಸೇವೆ’ಗೆ ಬಿಎಂಟಿಸಿ ಚಿಂತನೆ ನಡೆಸಿದೆ. 

Advertisement

ಸಾವಿರಾರು ಐಟಿ ಉದ್ಯೋಗಿಗಳು ಮೆಟ್ರೋದಲ್ಲೇ ಕೆಲಸಕ್ಕೆ ತೆರಳಲು ಉತ್ಸುಕರಾಗಿದ್ದಾರೆ. ಆದರೆ, ಇಲ್ಲಿನ ನೂರಾರು ಐಟಿ ಕಂಪೆನಿಗಳ ಬಾಗಿಲಿಗೆ ಇನ್ನೂ ಮೆಟ್ರೋ ರೈಲು ಹೋಗಿಲ್ಲ. ಈ ಕೊರತೆಯನ್ನು ನೀಗಿಸಲು ಬಿಎಂಟಿಸಿ ವಿಶೇಷ ಫೀಡರ್‌ ಸೇವೆ ನೀಡಲು ಮುಂದಾಗಿವೆ. ಅಂದರೆ, ಐಟಿ ಕಂಪೆನಿಗಳ ಉದ್ಯೋಗಿಗಳನ್ನು ಆಯಾ ಕ್ಯಾಂಪಸ್‌ನಿಂದಲೇ ಪಿಕ್‌ಅಪ್‌ ಮಾಡಿ, ನೇರವಾಗಿ ಹತ್ತಿರದ ಮೆಟ್ರೋ ನಿಲ್ದಾಣಗಳಿಗೆ ಈ ಬಸ್‌ಗಳು ತಂದುಬಿಡಲಿವೆ. 

ಕಂಪೆನಿಗಳೊಂದಿಗೆ ಬಿಎಂಟಿಸಿ ಸಭೆ: ಬಿಎಂಟಿಸಿಯ ಈ ಯೋಜನೆ ಲಾಭ ಪಡೆಯಲು ಹಲವು ಐಟಿ ಕಂಪೆನಿಗಳೂ ಮುಂದೆ ಬಂದಿವೆ. ಹಲವು ಸುತ್ತಿನ ಮಾತುಕತೆ ಕೂಡ ಆಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಶೀಘ್ರದಲ್ಲೇ ಐಟಿ ಕಂಪೆನಿಗಳು ಮತ್ತು ಮೆಟ್ರೋ ನಿಲ್ದಾಣಗಳ ನಡುವೆ ನೇರ ಫೀಡರ್‌ ಬಸ್‌ ಸೇವೆಗಳು ಆರಂಭಗೊಳ್ಳಲಿವೆ. ಇದರಿಂದ ಒಂದೆಡೆ ಬಿಎಂಟಿಸಿಗೆ ಆದಾಯವೂ ಬರಲಿದೆ. ಮತ್ತೂಂದೆಡೆ ಐಟಿ ಉದ್ಯೋಗಿಗಳಿಗೂ ಅನುಕೂಲವಾಗಿ, ಸಂಚಾರ ದಟ್ಟಣೆ ತಗ್ಗಲಿದೆ. 

ಕಂಪನಿಗಳಿಂದ ನೇರ ಸಂಪರ್ಕ ಕಲ್ಪಿಸುವ ಫೀಡರ್‌ ಸೇವೆ ಆರಂಭವಾದರೆ, ಸಂಚಾರದಟ್ಟಣೆ ತಗ್ಗಲಿದೆ. ಸ್ವಂತ ವಾಹನಗಳ ಮೇಲಿನ ಅವಲಂಬನೆಯೂ ತಪ್ಪಲಿದೆ. ಈ ಹಿನ್ನೆಲೆಯಲ್ಲಿ ವರ್ತುಲ ರಸ್ತೆಯಲ್ಲಿರುವ ಕೆಲವು ಕಂಪೆನಿಗಳು ಬಿಎಂಟಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ನಾಲ್ಕೈದು ಮಿಡಿ ಬಸ್‌ಗಳಿಗೆ ಬೇಡಿಕೆಯನ್ನೂ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಲೆಕ್ಕಾಚಾರ ಹೀಗೆ: ಈ ಸೇವೆ ಅಡಿ ಬಿಎಂಟಿಸಿ ಐಟಿ ಕಂಪೆನಿಗಳಿಗೆ ಬಸ್‌ ಸೇವೆ ಒದಗಿಸಲಿದೆ. ಇದಕ್ಕೆ ಪ್ರತಿಯಾಗಿ ಆ ಕಂಪೆನಿಯು ಬಿಎಂಟಿಸಿಗೆ ಇಂತಿಷ್ಟು ಹಣ ಪಾವತಿಸುತ್ತದೆ. ನಗರದಲ್ಲಿ ಮಾನ್ಯತಾ ಟೆಕ್‌ಪಾರ್ಕ್‌, ಬಾಗನೆ , ಐಟಿಪಿಎಲ್‌ ಸೇರಿದಂತೆ ನೂರಾರು ಐಟಿ ಕಂಪೆನಿಗಳಿದ್ದು, ಅವುಗಳನ್ನು ಈ ಮಾದರಿಯ ಸೇವೆಯತ್ತ ಆಕರ್ಷಿಸಲು ಬಿಎಂಟಿಸಿ ಚಿಂತನೆ ನಡೆಸಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Advertisement

ಮೆಟ್ರೋ ಮೊದಲ ಹಂತ ಪೂರ್ಣಗೊಂಡ ನಂತರ ಎಂಟಿಸಿ ಸುಮಾರು 180 “ಸಂಪರ್ಕ ಸೇವೆ’ ಆರಂಭಿಸಿದೆ. ಆದರೆ, ಇದುವರೆಗೆ ಅಂದುಕೊಂಡಷ್ಟು ಪ್ರಯಾಣಿಕರನ್ನು ಸೆಳೆಯುವಲ್ಲಿ ಈ ಸೇವೆ ಯಶಸ್ವಿಯಾಗಿಲ್ಲ. ಪರಿಣಾಮ ನಿತ್ಯ 8ರಿಂದ 9 ಲಕ್ಷ ರೂ. ನಷ್ಟವಾಗುತ್ತಿದೆ. ಜತೆಗೆ ಈ ಸೇವೆ ಲಾಭವನ್ನು ಜನರೂ ನಿರೀಕ್ಷಿತ ಮಟ್ಟದಲ್ಲಿ ಪಡೆಯುತ್ತಿಲ್ಲ. ಹಾಗಾಗಿ, ಈ ಹೊಸ ಆಲೋಚನೆ ನಡೆಸಿದೆ. 

ಫೀಡರ್‌ ನಷ್ಟದ ಬಗ್ಗೆ ಗಮನಸೆಳೆಯಲು ಸುಸಂದರ್ಭ 
“ನಮ್ಮ ಮೆಟ್ರೋ’ ಎರಡನೇ ಹಂತದ ಯೋಜನೆಗೆ ಆರ್ಥಿಕ ನೆರವು ನೀಡಲು ಯೂರೋಪಿಯನ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ ಕಳೆದೆರಡು ದಿನಗಳಿಂದ ನಗರದಲ್ಲಿ ಬೀಡುಬಟ್ಟಿದೆ. ಈ ಎರಡು ದಿನಗಳ ಸಭೆಯಲ್ಲಿ ಮೆಟ್ರೋ 2ನೇ ಹಂತದ ಯೋಜನೆಯ ಸಂಪೂರ್ಣ ಮಾಹಿತಿ ಕಲೆಹಾಕಲಿರುವ ಯೂರೋಪಿಯನ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ ಅಧಿಕಾರಿಗಳು, ಈ ಯೋಜನೆಗೆ ಬಿಎಂಟಿಸಿ, ಬಿಡಿಎ, ನಗರ ಭೂ ಸಾರಿಗೆ ನಿರ್ದೇಶನಾಲಯ, ಬಿಬಿಎಂಪಿಯ ಸಹಕಾರ ಇದೆಯೇ ಎಂಬುದರ ಬಗ್ಗೆ ಖಾತ್ರಿ ಕೇಳಲಿದೆ. 

ಬಿಎಂಟಿಸಿಯು ಮೆಟ್ರೋಗೆ ನೀಡರುವ “ಸಂಪರ್ಕ ಸೇವೆ’ಯಿಂದ ಆಗುತ್ತಿರುವ ನಷ್ಟ ತುಂಬಿಕೊಡುವ ಬಗ್ಗೆ ಬಿಎಂಆರ್‌ಸಿ ಮೇಲೆ ಒತ್ತಡ ಹಾಕಲು ಇದು ಸುಸಂದರ್ಭ. ಆರ್ಥಿಕ ನೆರವು ನೀಡುವ ಮುನ್ನ ಬ್ಯಾಂಕ್‌, ಈ ಯೋಜನೆಗೆ ಪೂರಕವಾಗಿ ಬಿಎಂಟಿಸಿಯು ಬಸ್‌ಗಳ ಅಂತಿಮ ಸಂಪರ್ಕ ಇದೆಯೇ ಎಂದು ಕೇಳುತ್ತದೆ. ಆಗ, ಬಿಎಂಆರ್‌ಸಿಯು ಬಿಎಂಟಿಸಿಯ ಅಭಿಪ್ರಾಯ ಕೇಳಲೇ ಬೇಕಾಗುತ್ತದೆ. ಈ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳುವ ಲೆಕ್ಕಾಚಾರ ಬಿಎಂಟಿಸಿಯದ್ದು. 

ಫೀಡರ್‌ ಸೇವೆ ಉದ್ದೇಶ ಲಾಭ ಗಳಿಕೆ ಅಲ್ಲ. ಪ್ರಯಾಣಿಕರಿಗೆ ಸಾಧ್ಯವಾದಷ್ಟು ಅನುಕೂಲ ಮಾಡಿಕೊಡುವುದು. ಆದರೆ, ಆ ಸೇವೆ ಸಮರ್ಪಕ ಬಳಕೆ ಆಗುತ್ತಿಲ್ಲ ಎಂದಾಗ, ಪರ್ಯಾಯಗಳ ಹುಡುಕಾಟ ನಡೆಸಬೇಕಾಗುತ್ತದೆ. ಈ ನಿಟ್ಟಿನಲ್ಲಿ “ವಿಶೇಷ ಫೀಡರ್‌ ಸೇವೆ’ ಕೂಡ ಒಂದು. ಇದರಡಿ ನೇರವಾಗಿ ಕಂಪೆನಿ ಮತ್ತು ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಸೇವೆಗಾಗಿ ಕೆಲವು ಕಂಪೆನಿಗಳು ಮುಂದೆಬಂದಿವೆ. 
– ಅಂಜುಮ್‌ ಪರ್ವೇಜ್‌, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next