Advertisement

ದಂಡ ವಸೂಲಿಗೆ ಬಿಎಂಟಿಸಿ ಟಾರ್ಗೆಟ್‌

01:14 AM Jul 31, 2019 | Lakshmi GovindaRaj |

ಬೆಂಗಳೂರು: ನಷ್ಟದ ಹೊರೆಯಿಂದ ಹೊರಬರಲು ಇನ್ನಿಲ್ಲದ ಕಸರತ್ತು ನಡೆಸಿರುವ ಬಿಎಂಟಿಸಿ, ಈಗ ಸಂಚಾರ ವಿಭಾಗಕ್ಕೂ ಇಂತಿಷ್ಟು ದಂಡ ವಸೂಲಿ ಮಾಡಿಕೊಂಡು ಬರುವಂತೆ ಟಾರ್ಗೆಟ್‌ ನೀಡಿದೆ. ಒಂದೆಡೆ ದಿನದಿಂದ ದಿನಕ್ಕೆ ಸಂಸ್ಥೆಯ ನಷ್ಟದ ಬಾಬ್ತು ಹೆಚ್ಚುತ್ತಿದೆ. ಮತ್ತೂಂದೆಡೆ ಸರ್ಕಾರದಿಂದ ಅನುದಾನವೂ ದೊರೆಯುತ್ತಿಲ್ಲ. ಈ ಮಧ್ಯೆ ಪ್ರಯಾಣ ದರ ಏರಿಕೆಗೂ ಅವಕಾಶ ನೀಡುತ್ತಿಲ್ಲ. ಪರಿಣಾಮ ಆರ್ಥಿಕ ಹೊರೆ ಹೆಚ್ಚುತ್ತಿದ್ದು, ಇದರಿಂದ ಹೊರಬರಲು ಹಲವು ಉಳಿತಾಯ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ.

Advertisement

ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಕಾರ್ಪೊರೇಟ್‌ ಕಂಪನಿಗಳ ನೌಕರರಿಗೆ ಇರುವಂತೆ ಸಂಚಾರ ವಿಭಾಗದ ಸಿಬ್ಬಂದಿಗೂ ಇಂತಿಷ್ಟು ದಂಡ ವಸೂಲಿ ಮಾಡಿಕೊಂಡು ಬರುವಂತೆ ಸೂಚಿಸಿದೆ. ಈ ದಂಡದ “ಗುರಿ’ ತಲುಪದಿದ್ದರೆ, ಅಮಾನತಿನ ತೂಗುಗತ್ತಿ ನೌಕರರ ಮೇಲೆ ಬೀಳಲಿದೆ. ಇದು ಸಂಸ್ಥೆಯ ಆದಾಯ ಸೋರಿಕೆ ತಡೆಗಟ್ಟುವಲ್ಲಿ ಪೂರಕ ಹೆಜ್ಜೆ ಒಂದೆಡೆಯಾದರೆ, ಮತ್ತೂಂದೆಡೆ ಈ ಹೊಸ ರೂಪದ “ಟಾರ್ಗೆಟ್‌’ ಸಂಚಾರ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ನಿದ್ದೆಗೆಡಿಸಿದೆ.

ಕೆಲವರಿಗೆ ಟಾರ್ಗೆಟ್‌; ಹಲವರಿಗೆ ರಿಲ್ಯಾಕ್ಸ್‌!: ಸೋರಿಕೆ ತಡೆಗಟ್ಟಲು ಡಿಪೋ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಂಚಾರ ವಿಭಾಗದ ಸಿಬ್ಬಂದಿಗೆ ಟಾರ್ಗೆಟ್‌ ನೀಡಿದೆ. ಆದರೆ, ದಶಕದಿಂದ ಒಂದೇ ಕಡೆ ಬೀಡುಬಿಟ್ಟಿರುವ ಅದೇ ಸಂಚಾರ ವಿಭಾಗದ ಸಿಬ್ಬಂದಿಗೆ ಮಾತ್ರ ಇದರಿಂದ ವಿನಾಯ್ತಿ ನೀಡಿದೆ. ಸಂಸ್ಥೆಯ ಅಧಿಕಾರಿಗಳ ಈ ತಾರತಮ್ಯ ಧೋರಣೆ ಅಸಮಾಧಾನಕ್ಕೆ ಕಾರಣವಾಗಿದೆ.

ಕೇವಲ ಬಿಎಂಟಿಸಿಯ ಕೇಂದ್ರ ಕಚೇರಿಯಲ್ಲೇ ಸಂಚಾರ ವಿಭಾಗದ 40ಕ್ಕೂ ಹೆಚ್ಚು ಅಧಿಕಾರಿಗಳು ಹೀಗೆ ಠಿಕಾಣಿ ಹೂಡಿದ್ದಾರೆ. ಇದರಲ್ಲಿ ಸಂಚಾರ ವ್ಯವಸ್ಥಾಪಕರು, ಸಂಚಾರ ಅಧೀಕ್ಷಕರು, ಸಹಾಯ ಸಂಚಾರ ನಿರೀಕ್ಷಕರು ಕೂಡ ಸೇರಿದ್ದಾರೆ. ಸ್ವತಃ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿದ ಮಾಹಿತಿಯಲ್ಲಿ ಇದು ಬಹಿರಂಗವಾಗಿದೆ. ಒಂದು ಅಥವಾ ಎರಡು ಬಡ್ತಿಗಳನ್ನು ಪಡೆದೂ ಈ ಅಧಿಕಾರಿಗಳು/ ಸಿಬ್ಬಂದಿ ಕೇಂದ್ರ ಕಚೇರಿ ಬಿಟ್ಟು ಕದಲಿಲ್ಲ. ಅವರಿಗ್ಯಾಕೆ ಈ ಟಾರ್ಗೆಟ್‌ ನೀಡಿಲ್ಲ ಎಂದು ಡಿಪೋವೊಂದರ ಸಹಾಯಕ ಸಂಚಾರ ನಿರೀಕ್ಷಕರು ಪ್ರಶ್ನಿಸುತ್ತಾರೆ.

ಕನಿಷ್ಠ ದಂಡ ಸಂಗ್ರಹಿಸುವಂತೆ ಬಿಎಂಟಿಸಿ ತನ್ನ ಸಿಬ್ಬಂದಿಗೆ ಟಾರ್ಗೆಟ್‌ ನೀಡಿದೆ. ಪ್ರತಿ ಸಹಾಯಕ ಸಂಚಾರ ಅಧೀಕ್ಷಕ ಮತ್ತು ಸಂಚಾರ ನಿರೀಕ್ಷಕರಿಗೆ ಕಡ್ಡಾಯವಾಗಿ ನಿತ್ಯ ಕನಿಷ್ಠ 750 ರೂ. ದಂಡ ಸಂಗ್ರಹಿಸುವಂತೆ ತಾಕೀತು ಮಾಡುತ್ತಿದೆ ಮತ್ತು ಕನಿಷ್ಠ ಟಾರ್ಗೆಟ್‌ ತಲುಪದ ನೌಕರರನ್ನು ಅಮಾನತು ಗುರಿಪಡಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

Advertisement

13 ಲಕ್ಷದ ಗುರಿ?: ಬಿಎಂಟಿಸಿಯಲ್ಲಿ 59 ಲೈನ್‌ ಚೆಕಿಂಗ್‌ ಅಧಿಕಾರಿಗಳಿದ್ದಾರೆ. ಇವರು ನಿತ್ಯ 750 ರೂ. ದಂಡ ಸಂಗ್ರಹಿಸಬೇಕು. ಇಲ್ಲದಿದ್ದರೆ, ಈ ಅಧಿಕಾರಿಗಳಿಗೆ “ಮೆಮೊ’ ನೀಡಿ ಕಳಪೆ ಸಾಧನೆ ಎಂಬ ಕಾರಣ ನೀಡಿ ಅಮಾನತು ಮಾಡಲಾಗುತ್ತಿದೆ. ಈ 59 ಅಧಿಕಾರಿಗಳು ದಿನಕ್ಕೆ 44,250 ರೂ. ಸಂಗ್ರಹಿಸುವ ಗುರಿ ನೀಡಲಾಗಿದೆ. ಈ ಮೊತ್ತ ಒಂದು ತಿಂಗಳಿಗೆ 13,27,500 ರೂ. ಆಗಲಿದೆ. ಸದ್ಯ ಬಿಎಂಟಿಸಿ ಪ್ರತಿ ತಿಂಗಳು ಎಂಟು ಲಕ್ಷ ರೂ. ದಂಡ ಸಂಗ್ರಹಿಸುತ್ತಿದೆ. ಇದನ್ನು 13ಲಕ್ಷಕ್ಕೆ ತಲುಪಿಸುವುದು ಸಂಸ್ಥೆಯ ಉದ್ದೇಶ ಇದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಯೋಗೇಶ್‌.

ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ, ಪ್ರತಿದಿನ ಸಂಸ್ಥೆ ನೀಡಿರುವ ಟಾರ್ಗೆಟ್‌ ತಲುಪಲು ಸಾಧ್ಯವಾಗುತಿಲ್ಲ. ಕೆಲವೊಮ್ಮೆ ಟಾರ್ಗೆಟ್‌ ತಲುಪದಿದ್ದರೆ, ಒತ್ತಡ ಹಾಕುತ್ತಾರೆ. ಇನ್ನು ಹಲವು ಸಲ ಮೆಮೊ ನೀಡಿ ಒತ್ತಡ ಹಾಕುತ್ತಿರುವ ಉದಾಹರಣೆಗಳೂ ಇವೆ. ಅನಿವಾರ್ಯವಾಗಿ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರಿಂದ ದಂಡ ಸಂಗ್ರಹಿಸಬೇಕಾಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿ.

ಸ್ವಾಗತಾರ್ಹ; ಸಂಚಾರ ವಿಭಾಗ: ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಯು ನಿರ್ವಹಣೆ, ಕಾರ್ಯಾಚರಣೆ, ಅನಗತ್ಯ ವೆಚ್ಚ, ಆದಾಯ ಸೋರಿಕೆ ಸೇರಿದಂತೆ ಎಲ್ಲ ರೀತಿಯಿಂದಲೂ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಂಚಾರ ವಿಭಾಗದ ಸಿಬ್ಬಂದಿಗೆ ಈ ರೀತಿಯ ಗುರಿ ನೀಡಿರುವುದು ಸಂಸ್ಥೆಯ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆ. ಆದರೆ, ಈ ನೆಪದಲ್ಲಿ ಅನಗತ್ಯ ಕಿರುಕುಳ ನೀಡುವುದು ಸರಿ ಅಲ್ಲ ಎಂದೂ ಬಿಎಂಟಿಸಿ ಸಂಚಾರ ವಿಭಾಗದ ಸಿಬ್ಬಂದಿ ಹೇಳುತ್ತಾರೆ.

ದಂಡದ ವಿವರ
-ಸಮವಸ್ತ್ರ , ಶೂ, ಬ್ಯಾಡ್ಜ್ ಧರಿಸದ ಸಿಬ್ಬಂದಿಗೆ- ಕನಿಷ್ಠ 50ರಿಂದ 150 ರೂ.
-ಮೀಸಲು ಆಸನಗಳಲ್ಲಿ ಕುಳಿತ ಪ್ರಯಾಣಿಕರಿಗೆ -100 ರೂ.
-ಪ್ರಯಾಣಿಕರ ಜತೆ ಅನುಚಿತ ವರ್ತನೆ -ಕನಿಷ್ಠ 100 ರೂ.
-ಬಾಗಿಲಲ್ಲಿ ನಿಂತು ಪ್ರಯಾಣಿಸಿದರೆ- ಕನಿಷ್ಠ 100 ರೂ.
-ಟಿಕೆಟ್‌ ರಹಿತ ಪ್ರಯಾಣಕ್ಕೆ- ಟಿಕೆಟ್‌ ದರ ಹತ್ತುಪಟ್ಟು (ಉದಾಹರಣೆಗೆ 5 ರೂ. ಇದ್ದರೆ, ದಂಡ 50 ರೂ.) ಹಾಗೂ ನಿರ್ವಾಹಕರ ವಿರುದ್ಧ ದೂರು ದಾಖಲು.

ನಾವು ಯಾವುದೇ ಚೆಕಿಂಗ್‌ ಇನ್‌ಸ್ಪೆಕ್ಟರ್‌ಗಳಿಗೆ ದಂಡ ವಸೂಲಿ ಗುರಿ ನೀಡಿಲ್ಲ. ಅವರದ್ದೇ ಕೆಲ ಸಹುದ್ಯೋಗಿಗಳು ಮಾಡಬಹುದಾದ ಕೆಲಸ ಕೆಲ ಅಧಿಕಾರಿಗಳು ಮಾಡುತಿಲ್ಲ. ಹಾಗಾಗಿ, ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಸೂಚಿಸಿದ್ದೇವೆ. ಕಳೆದ ಎರಡು ವರ್ಷಗಳ ಹಿಂದೆ ಪ್ರತಿ ಅಧಿಕಾರಿ ತಿಂಗಳಿಗೆ 25ಸಾವಿರ ತನಕ ದಂಡ ವಸೂಲಿ ಮಾಡುತಿದ್ದರು. ಅದಕ್ಕೆ ಹೋಲಿಸಿದರೆ ಈಗ ಅರ್ಧದಷ್ಟು ಕೂಡ ವಸೂಲಿ ಮಾಡುತಿಲ್ಲ.
-ಶ್ರೀನಿವಾಸ್‌, ಮುಖ್ಯ ಭದ್ರತೆ ಮತ್ತು ಜಾಗೃತ ಅಧಿಕಾರಿ

* ಲೋಕೇಶ್‌ ರಾಮ್‌

Advertisement

Udayavani is now on Telegram. Click here to join our channel and stay updated with the latest news.

Next