Advertisement
ಬಿಎಂಟಿಸಿ ವ್ಯಾಪ್ತಿಯಲ್ಲಿನ ವಾಣಿಜ್ಯ ಮಳಿಗೆ ಗಳು, ಪಾರ್ಕಿಂಗ್ ಜಾಗಗಳು, ಶೌಚಾಲಯಗಳು, ಅಪಾರ್ಟ್‌ಮೆಂಟ್ ಫ್ಲ್ಯಾಟ್‌ಗಳು ಸೇರಿದಂತೆ ವಿವಿಧ ಪ್ರಕಾರದ ಟೆಂಡರ್ ಮತ್ತು ಪರವಾನಗಿ ನವೀಕರಣ ಹಾಗೂ ಮರುಟೆಂಡರ್‌ನಲ್ಲಿ ಹತ್ತಾರು ಕೋಟಿ ರೂ. ಗುಳುಂ ಮಾಡಿರುವುದು ಕಂಡುಬಂದಿದೆ. ಒಂದಲ್ಲ ಎರಡಲ್ಲ ಇಂತಹ 20ಕ್ಕೂ ಹೆಚ್ಚು ಕಡತಗಳಿಗೆ ಹಿಂದಿದ್ದ (ಈಗಿನವರದ್ದು ಸೇರಿ) ಮೂರರಿಂದ ನಾಲ್ವರು ವ್ಯವಸ್ಥಾಪಕ ನಿರ್ದೇಶಕರ ಸಹಿ ನಕಲು ಮಾಡಿರುವುದು ಇಲಾಖಾ ತನಿಖೆಯಿಂದ ಬೆಳಕಿಗೆ ಬಂದಿದೆ ಹಾಗೂ ಇನ್ನೂ ಬರುತ್ತಲೇ ಇದೆ.
Related Articles
Advertisement
“ಸಾರಿಗೆ ನೌಕರರು ಈ ಹಿಂದೆ ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದಾಗ ಇದೇ ಅಧಿಕಾರಿಗಳು ನೂರಾರು ನೌಕರರನ್ನು ವಜಾಗೊಳಿಸಿದರು. ವರ್ಷ ಕಳೆದರೂ ಸುಮಾರು ನೂರು ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ. ಮತ್ತೂಂದೆಡೆ ಹತ್ತಾರು ಕಡೆ ಫೋರ್ಜರಿ ಮಾಡಿ ಲೂಟಿ ಮಾಡಿದ ಅಧಿಕಾರಿಗಳ ತಂಡವನ್ನು ಬರೀ ಅಮಾನತುಗೊಳಿಸಿ, ಅರ್ಧ ಸಂಬಳ ನೀಡುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೂಂದು ಕಣ್ಣಿಗೆ ಸುಣ್ಣ. ಈ ಧೋರಣೆ ಯಾಕೆ? ಹಗರಣದ ವಿರುದ್ಧ ತೀವ್ರ ಸ್ವರೂಪದ ತನಿಖೆ ನಡೆಸಲು ಆದೇಶಿಸುವಂತೆ ಸಾರಿಗೆ ಸಚಿವರನ್ನು ಖುದ್ದು ಭೇಟಿಯಾಗಿ ಮನವಿ ಮಾಡಲಾಗುವುದು. ಈಗಾಗಲೇ ಸಮಯವನ್ನೂ ಕೇಳಿದ್ದೇವೆ. ಇನ್ನೂ ಸಿಕ್ಕಿಲ್ಲ’ ಎಂದು ಚಂದ್ರಶೇಖರ್ ತಿಳಿಸಿದರು.
“ಸ್ವತಃ ಎಂಡಿಗಳ ಸಹಿ ಫೋರ್ಜರಿ ಮಾಡಿರುವುದರಿಂದ ಇಲ್ಲಿ ಪಲಾಯನಕ್ಕೆ ಅವಕಾಶ ಇಲ್ಲ ಎಂಬ ಭಾವನೆ ಇದೆ. ಆದರೆ, ತನಿಖೆ ಇನ್ನಷ್ಟು ತೀವ್ರವಾಗಿ ನಡೆಯಬೇಕಾದ ಅವಶ್ಯಕತೆ ಇದೆ. ಒಂದು ವೇಳೆ ಈಗಿನ ಧೋರಣೆ ಮುಂದುವರಿದರೆ, ಅಲ್ಲಿಗೆ ಹಿರಿಯ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬುದು ಸಾಬೀತಾಗುತ್ತದೆ. ಬಿಎಂಟಿಸಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಮತ್ತು ಈಗ ಕಾರ್ಯನಿರ್ವಹಿಸುತ್ತಿರುವವರು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಕು. ಜತೆಗೆ ಸಂಘಟನೆಯಿಂದಲೂ ಹಗರಣದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಸಚಿವರ ಮೇಲೂ ಒತ್ತಡ ತರುವ ಕೆಲಸ ಆಗಲಿದೆ’ ಎಂದು ಕೆಎಸ್‌ಆರ್‌ಟಿಸಿ ನೌಕರರ ಜಂಟಿ ಕ್ರಿಯಾಸಮಿತಿ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ಸ್ಪಷ್ಟಪಡಿಸಿದರು.
ಒಂದು ಕಡತದ ಕತೆ!:
ವರ್ಷದ ಹಿಂದೆ ಕೇವಲ ಒಂದು ನಂದಿನಿ ಬೂತ್‌ಗೆ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದ ಕಡತ ಆಕಸ್ಮಿಕವಾಗಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಕಣ್ಣಿಗೆ ಬಿತ್ತು. ಅದರ ಜಾಡುಹಿಡಿದು ಹೋದಾಗ ಫೋರ್ಜರಿ ಆಗಿರುವುದು ಬಯಲಾಯಿತು. ಅಂತಹದ್ದೇ “ಫೋರ್ಜರಿ ಕೇಸು’ಗಳು ಗುತ್ತಿಗೆ ನವೀಕರಣ ಕುರಿತ ಕಡತಗಳಲ್ಲೂ ಕಂಡುಬಂತು. ಅಲ್ಲಿಂದ ಬಿಎಂಟಿಸಿಯಲ್ಲಿ ಕಡತ ಶೋಧನೆಯ ಯಜ್ಞ ಶುರುವಾಗಿದ್ದು, ಈಗಲೂ ಮುಂದುವರಿದಿದೆ. ಬಿಎಂಟಿಸಿ ಮೂಲಗಳ ಪ್ರಕಾರ ಇದುವರೆಗೆ 20ರಿಂದ 25 ಕಡತಗಳಲ್ಲಿ ಫೋರ್ಜರಿ ಆಗಿರುವುದು ಪತ್ತೆಯಾಗಿದೆ. ಸುಮಾರು ಎಂಟು ತಿಂಗಳ ಹಿಂದೆ ಆರೋಪಿ ಮುಖ್ಯ ಸಂಚಾರ ವ್ಯವಸ್ಥಾಪಕ (ವಾಣಿಜ್ಯ)ರಾಗಿದ್ದವರ ವಿರುದ್ಧ ಎಫ್ಐಆರ್ ದಾಖಲಾಗಿ, ಬಂಧನಕ್ಕೊಳಪಡಿಸಲಾಗಿತ್ತು. ಪ್ರಕರಣದಲ್ಲಿ ಐವರನ್ನು ಅಮಾನತುಗೊಳಿಸಲಾಗಿತ್ತು. ಈಗ ಅದೇ ತಂಡದ ವಿರುದ್ಧ ಮತ್ತೆರಡು ಎಫ್ಐಆರ್ ಆಗಿವೆ.
-ವಿಜಯಕುಮಾರ ಚಂದರಗಿ