Advertisement

ಮಹಿಳೆಯರಿಗೆ ಚಾಲನೆ ತರಬೇತಿ ನೀಡಲು ಬಿಎಂಟಿಸಿ ತಯಾರಿ

12:39 PM Dec 09, 2017 | |

ಬೆಂಗಳೂರು: ಬಿಎಂಟಿಸಿ ಬಸ್‌ ಚಾಲನೆ ಮಾಡಲು ಮಹಿಳೆಯರಿಗೂ ಚಾಲನೆ ತರಬೇತಿ ನೀಡುವುದಾಗಿ ಘೋಷಿಸಿದ್ದ ಬಿಬಿಎಂಪಿ, ಇದೀಗ ತರಬೇತಿ ಪಡೆಯಲು ಸಕ್ತಿ ತೋರುವ ನಗರ ಅಥವಾ ರಾಜ್ಯದ ತ್ಸಾಹಿ ಮಹಿಳೆಯರಿಗೆ ಭಾರಿ ಹಾಗೂ ಲಘು ವಾಹನಗಳ ಚಾಲನೆ ಕುರಿತು ತರಬೇತಿ ನೀಡಲು ಸಿದ್ಧತೆ ನಡೆಸಿದೆ. ಅಲ್ಲದೆ ಹೀಗೆ ತರಬೇತಿ ಪಡೆದ ಮಹಿಳೆಯರಿಗೆ ಸಂಸ್ಥೆಯಲ್ಲೇ ಉದ್ಯೋಗ ನೀಡುವ ಚಿಂತನೆ ನಡೆಸಿದೆ.

Advertisement

ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗಾಗಿ ಪಿಂಕ್‌ ಆಸನ, ಸುರಕ್ಷತಾ ಆ್ಯಪ್‌ ಹಾಗೂ ಸ್ತ್ರೀಯರ ಸಮಸ್ಯೆಗಳಿಗೆ ಸ್ಪಂದಿಸಲು “ಪಿಂಕ್‌ ಸಾರಥಿ’ ಎಂಬ ಪೆಟ್ರೋಲಿಂಗ್‌ ವಾಹನ ಪರಿಚಯಿಸಲು ಮುಂದಾಗಿರುವ ಸಂಸ್ಥೆ, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರಿಗೆ ಭಾರಿ ಹಾಗೂ ಲಘು ವಾಹನ ಚಾಲನಾ ತರಬೇತಿ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸಲು ಯೋಜನೆ ರೂಪಿಸಿದೆ. 

ನಗರದ ಸಾರಿಗೆಯಲ್ಲಿ ಮಹಿಳೆಯ ಸುರಕ್ಷತೆ ಸೇರಿ ಮಹಿಳೆಯರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ “ನಿರ್ಭಯಾ ಯೋಜನೆ’ ಅಡಿಯಲ್ಲಿ ಬಿಎಂಟಿಸಿಗೆ 56 ಕೋಟಿ ರೂ. ಅನುದಾನ ನೀಡಿದೆ. ಅದರಂತೆ ಈಗಾಗಲೇ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಮುಂದಾಗಿರುವ ಸಂಸ್ಥೆ, ಮಹಿಳೆಯರಿಗೆ ಚಾಲನೆ ತರಬೇತಿ ನೀಡಲು ಕೂಡ ನಿರ್ಭಯಾ ಅನುದಾನ ಬಳಸಿಕೊಂಡು ಯೋಜನೆ ರೂಪಿಸಿದೆ. ವಿಪರ್ಯಾಸವೆಂದರೆ ಇಷ್ಟು ವರ್ಷ ಚಾಲಕರ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಮಹಿಳೆಯರು ಅರ್ಜಿ ಸಲ್ಲಿಸುವ ಆಸಕಿಯನ್ನೂ ತೋರಿಲ್ಲ.

ಆಸಕ್ತಿ ತೋರದ ಸ್ತ್ರೀಶಕ್ತಿ: ಬಿಎಂಟಿಸಿ ವತಿಯಿಂದ ಚಾಲಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದಾಗ ಮಹಿಳೆಯರಿಗಾಗಿಯೇ ಇಂತಿಷ್ಟು ಹುದ್ದೆಗಳನ್ನು ನಿಗದಿಪಡಿಸಲಾಗುತ್ತದೆ. ಆದರೆ, ಕಳೆದ ನಾಲ್ಕೈದು ವರ್ಷಗಳಲ್ಲಿ ಸಂಸ್ಥೆಯಿಂದ ನಡೆಸಿದ ಚಾಲಕರ ಹುದ್ದೆ ನೇಮಕಾತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಮಹಿಳಾ ಅಭ್ಯರ್ಥಿಗಳು ಭಾಗವಹಿಸಿಲ್ಲ. ಹೀಗಾಗಿ ಸಂಸ್ಥೆಯಲ್ಲಿ ಮಹಿಳಾ ಚಾಲಕಿಯರ ಸಂಖ್ಯೆ ಕಡಿಮೆಯಿದೆ ಎಂದು ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಉಚಿತ ಚಾಲನಾ ತರಬೇತಿ: ನಿರ್ಭಯಾ ಯೋಜನೆಯಡಿ ಬಿಎಂಟಿಸಿ ಭಾರಿ ಹಾಗೂ ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನಿಸಲಿದ್ದು, ಅರ್ಜಿ ಸಲ್ಲಿಸುವ ಆಸಕ್ತ ಮಹಿಳೆಯರಿಂದ ಉಚಿತವಾಗಿ ಸಂಸ್ಥೆಯಿಂದ ತರಬೇತಿ ನೀಡಲಾಗುತ್ತದೆ. ಜತೆಗೆ ಭಾರಿ ಮತ್ತು ಲಘು ವಾಹನ ಚಾಲನಾ ಪರವಾನಗಿ ಸಹ ವಿತರಿಸಲಾಗುತ್ತದೆ. ಪರವಾನಗಿ ಪಡೆದ ಮಹಿಳೆಯರು ವಿವಿಧ ಇಲಾಖೆಗಳಲ್ಲಿನ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು ಅಥವಾ ಸ್ವಯಂ ಉದ್ಯೋಗ ಆರಂಭಿಸಬಹುದಾಗಿದೆ. 

Advertisement

ನೇಮಕಾತಿಯಲ್ಲಿ ಆದ್ಯತೆ: ಸಂಸ್ಥೆಯಿಂದ ನೀಡಲಾಗುವ ಭಾರಿ ಹಾಗೂ ಲಘು ವಾಹನ ತರಬೇತಿಯಲ್ಲಿ ಪಾಲ್ಗೊಳ್ಳುವಂತಹ ಮಹಿಳಾ ಅಭ್ಯರ್ಥಿಗಳಿಗೆ ಬಿಎಂಟಿಸಿ ನೇಮಕಾತಿಯಲ್ಲಿ ಆದ್ಯತೆ ನೀಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಚಾಲಕರ ಹುದ್ದೆಗೆ ಮಹಿಳಾ ಅಭ್ಯರ್ಥಿಗಳಿಂದ ಹೆಚ್ಚಿನ ಅರ್ಜಿಗಳು ಬರದ ಹಿನ್ನೆಲೆಯಲ್ಲಿ ತರಬೇತಿ ಪಡೆದ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದವರಿಗೆ ಆದ್ಯತೆ ನೀಡುವ ಮೂಲಕ ಸಂಸ್ಥೆಯಲ್ಲಿ ಮಹಿಳಾ ಚಾಲಕರ ಸಂಖ್ಯೆ ಹೆಚ್ಚಿಸುವ ಗುರಿಯನ್ನು ಬಿಎಂಟಿಸಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ. 

ಬಿಎಂಟಿಸಿಯಲ್ಲಿ ಮಹಿಳಾ ಚಾಲಕಿಯರ ಸಂಖ್ಯೆ ತುಂಬಾ ಕಡಿಮೆಯಿದೆ. ಚಾಲಕರ ಹುದ್ದೆ ನೇಮಕಾತಿ ವೇಳೆ ಮಹಿಳೆಯರು ಪಾಲ್ಗೊಳ್ಳುತ್ತಿಲ್ಲ. ಆ ಹಿನ್ನೆಲೆಯಲ್ಲಿ ಸಂಸ್ಥೆಯಿಂದಲೇ ಭಾರಿ ಹಾಗೂ ಲಘು ವಾಹನ ಚಾಲನಾ ತರಬೇತಿ ನೀಡಲು ತೀರ್ಮಾನಿಸಿದ್ದು, ತರಬೇತಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಸಂಸ್ಥೆಯ ನೇಮಕಾತಿಯಲ್ಲಿ ಆದ್ಯತೆ ನೀಡುವ ಕುರಿತು ಚಿಂತಿಸಲಾಗಿದೆ.
-ವಿ.ಪೊನ್ನುರಾಜು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ

ನಿರ್ಭಯಾ ಯೋಜನೆಯಡಿಯಲ್ಲಿ ಈಗಾಗಲೇ ಬಿಬಿಎಂಪಿ ಸಿಸಿಟಿವಿ ಕ್ಯಾಮೆರಾ, ಪಿಂಕ್‌ ಸಾರಥಿ ಹಾಗೂ ಮಹಿಳಾ ಸುರಕ್ಷತಾ ಆ್ಯಪ್‌ಗ್ಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರೊಂದಿಗೆ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಭಾರಿ ಹಾಗೂ ಲಘು ವಾಹನ ಚಾಲನಾ ತರಬೇತಿ ನೀಡಲು ಮುಂದಾಗಿದ್ದೇವೆ. 
-ಎಂ.ನಾಗರಾಜ ಯಾದವ್‌, ಬಿಎಂಟಿಸಿ ಅಧ್ಯಕ್ಷ  

ಸಾವಿರ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ: ಮಹಿಳಾ ಸುರಕ್ಷತೆಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಬಿಎಂಟಿಸಿ, ಮಹಿಳೆಯರಿಗೆ ಚಾಲನಾ ತರಬೇತಿಯೊಂದಿಗೆ, ಸಾವಿರ ಬಿಎಂಟಿಸಿ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ತೀರ್ಮಾನಿಸಿದೆ. ಅದರಂತೆ ಈಗಾಗಲೇ ಕ್ಯಾಮೆರಾಗಳ ಅಳವಡಿಕೆಗೆ ಟೆಂಡರ್‌ ಕರೆಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲಿಯೇ ಟೆಂಡರ್‌ ಆಹ್ವಾನಿಸಲಾಗುವುದು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ತರಬೇತಿ ಅವಧಿ ಕುರಿತು ಚರ್ಚೆ: ಮಹಿಳೆಯರಿಗೆ ಎಷ್ಟು ದಿನ ಚಾಲನೆ ತರಬೇತಿ ನೀಡಬೇಕು, ತರಬೇತಿಯ ಒಂದು ಬ್ಯಾಚ್‌ನಲ್ಲಿ ಎಷ್ಟು ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು, ಆಸಕ್ತ ಅಭ್ಯರ್ಥಿಗಳ ಆಯ್ಕೆಗೆ ಮಾನದಂಡಗಳೇನು ಎಂಬುದೂ  ಸೇರಿದಂತೆ ಹಲವು ವಿಷಯಗಳು ಈಗಿನ್ನೂ ಚರ್ಚೆ ಹಂತದಲ್ಲಿವೆ. ಈ ಎಲ್ಲವೂ ಅಂತಿಮವಾದ ನಂತರ ತರಬೇತಿ ಆರಂಭಿಸಲಾಗುವುದು ಎಂದು ಬಿಎಂಟಿಸಿ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

* ವೆಂ. ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next