Advertisement

ಬಿಎಂಟಿಸಿ ಕೇಂದ್ರ ಸ್ಥಾನವೇ ಕೋವಿಡ್‌ 19 ವಾಹಕ?

06:14 AM Jul 04, 2020 | Lakshmi GovindaRaj |

ಬೆಂಗಳೂರು: ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆ ಯ ಕೇಂದ್ರ ಸ್ಥಾನ ಕೆ.ಆರ್‌. ಮಾರುಕಟ್ಟೆ ನಿಲ್ದಾಣ ಈಗ “ಕೋವಿಡ್‌ 19 ವೈರಸ್‌ ವಾಹಕ’ದ ಕೇಂದ್ರಬಿಂದು ಆಗುತ್ತಿದೆಯೇ? – ಮಾರುಕಟ್ಟೆಯಲ್ಲಿರುವ ಬಸ್‌ ನಿಲ್ದಾಣದ ಸಂಚಾರ  ನಿಯಂತ್ರಕ (ಟಿಸಿ)ರೊಬ್ಬರಲ್ಲಿ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಬೆಳಕಿಗೆಬರುತ್ತಿರುವ ಸೋಂಕಿನ ಪ್ರಕರಣಗಳು ಇಂತಹದ್ದೊಂದು ಪ್ರಶ್ನೆ ಇಡೀ ಬಿಎಂಟಿಸಿ ವಲಯದಲ್ಲಿ ಸೃಷ್ಟಿಯಾಗಿದೆ.

Advertisement

ಸಂಸ್ಥೆಯಲ್ಲಿ ಸುಮಾರು 40ಕ್ಕೂ ಅಧಿಕ  ಕೋವಿಡ್‌- 19 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಜನ ಸಂಚಾರ ನಿಯಂತ್ರಕರೂ ಇದ್ದಾರೆ. ಆದರೆ, ಅವರೆಲ್ಲಾ ಇಂದಿರಾನಗರ ಸೇರಿದಂತೆ ವಿವಿಧ ಡಿಪೋದಲ್ಲಿದ್ದವರು. ಈ ಡಿಪೋಗಿಂತ ಮಾರುಕಟ್ಟೆ ತುಸು ಭಿನ್ನವಾಗಿದೆ. ಕೆಂಪೇಗೌಡ  ಬಸ್‌ ನಿಲ್ದಾಣ  ದಂತೆ ಕೆ.ಆರ್‌. ಮಾರುಕಟ್ಟೆ ಪ್ರಮುಖ ನಿಲ್ದಾಣ. ನಗರಾದ್ಯಂತ ಸಂಚರಿಸುವ ಬಸ್‌ಗಳು ಇಲ್ಲಿಗೆ ಸಂಪರ್ಕ ಹೊಂದಿವೆ.

ಪ್ರತಿ ಬಾರಿ ನಿರ್ಗಮಿಸುವಾಗ ಅಲ್ಲಿರುವ ಟಿಸಿಗಳಿಂದ ಟ್ರಿಪ್‌, ಟಿಕೆಟ್‌ ವಿತರಣೆ ಮತ್ತಿತರ ಮಾಹಿತಿಗೆ  ಸಂಬಂಧಿಸಿದಂತೆ ಎಂಟ್ರಿ ಮಾಡಿಸಿಕೊಳ್ಳುತ್ತದೆ. ಹೀಗಾಗಿ, ಹತ್ತಾರು ನಿರ್ವಾಹಕರು ಇಲ್ಲಿನ ಟಿಸಿಗಳೊಂದಿಗೆ ಸಂಪರ್ಕಕ್ಕೆ ಬರುತ್ತಾರೆ. ಈಗ ಅದೇ ಅಧಿಕಾರಿಗೆ ಸೋಂಕಿರುವುದು ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಪೂರಕವಾಗಿ ಕೊತ್ತೂರುದಿಣ್ಣೆ ಡಿಪೋವೊಂದರಲ್ಲಿ ಶುಕ್ರವಾರ ಒಂದೇ ದಿನ 14 ಪ್ರಕರಣ  ಗಳು ಬೆಳಕಿಗೆಬಂದಿವೆ.

ಇದರಲ್ಲಿ ಬಹುತೇಕರು ಚಾಲನಾ ಸಿಬ್ಬಂದಿಯಾಗಿದ್ದು, ಕೆಲವರು ನಿತ್ಯ ಮಾರುಕಟ್ಟೆ ಮೂಲಕವೇ ಸಂಚರಿಸುವವರಾಗಿದ್ದಾರೆ. ಈಚೆಗೆ  ಬಿಎಂಟಿಸಿ ನಡೆಸಿದ ರ್‍ಯಾಂಡಂ ಪರೀಕ್ಷೆಯಲ್ಲಿ ಎಲ್ಲ 14 ಸಿಬ್ಬಂದಿ ಗಂಟಲು ದ್ರವ ಮಾದರಿಯನ್ನು ನೀಡಿದ್ದರು. ಶುಕ್ರವಾರ ವೈರಸ್‌ ತಗುಲಿರುವುದು ದೃಢಪಟ್ಟಿದೆ. ಮಾದರಿ ನೀಡಿದ ನಂತರ ವಾರಗಟ್ಟಲೆ ಇವರೆಲ್ಲರೂ ಕರ್ತವ್ಯ ಕೂಡ  ನಿರ್ವಹಿಸಿದ್ದು, ಸೋಂಕಿನ ತೀವ್ರತೆ ಮತ್ತಷ್ಟು ಹೆಚ್ಚುವ ಆತಂಕ ಸೃಷ್ಟಿಸಿದೆ.

ಈ ಮಧ್ಯೆ ಮಾರುಕಟ್ಟೆ ಬಂದ್‌ ಮಾಡಲಾಗಿದ್ದು, ಬಸ್‌ಗಳ ಕಾರ್ಯಾಚರಣೆ ಕಡಿಮೆಯಾಗಿದೆ. ಆದರೆ, ಇದಕ್ಕೂ ಮುನ್ನ ಟಿಸಿಗೆ ಹತ್ತು ದಿನಗಳಿಂದ ಸೋಂಕಿನ  ಲಕ್ಷಣಗಳು ಕಾಣಿಸಿಕೊಂಡಿವೆ. ಈ ಮಧ್ಯೆಯೂ ಆತ ಕರ್ತವ್ಯಕ್ಕೆ ಹಾಜರಾಗಿದ್ದಾನೆ. ನಾಲ್ಕು ದಿನಗಳ ಹಿಂದಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌-19 ಪರೀಕ್ಷೆಗೊಳಗಾಗಿದ್ದು, ವರದಿ  ಯಲ್ಲಿ ಪಾಸಿಟಿವ್‌ ಬಂದಿದೆ. ಇವರ ಸಂಪರ್ಕಿತರನ್ನು  ಪತ್ತೆ ಮಾಡುವುದು ಕಷ್ಟಸಾಧ್ಯವಾಗಿದ್ದು, ಇದು ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ.

Advertisement

6-7 ಸಾವಿರ ಟ್ರಿಪ್‌: ಕೆ.ಆರ್‌. ಮಾರುಕಟ್ಟೆ ನಿಲ್ದಾಣದಲ್ಲಿ ಕಲಾಸಿಪಾಳ್ಯ, ಚಂದ್ರಭವನ, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಮೂರು ಕಡೆಗಳಿಂದ ಬಸ್‌ಗಳು ಕಾರ್ಯಾಚರಣೆ ಮಾಡುತ್ತವೆ. ನಿತ್ಯ ಸುಮಾರು 6ರಿಂದ 7 ಸಾವಿರ ಟ್ರಿಪ್‌ಗ್ಳನ್ನು  ಅವು ಪೂರೈಸುತ್ತವೆ. ಅಂದಾಜು 30 ಜನ ಸಂಚಾರ ನಿಯಂತ್ರಕರು ಕಾರ್ಯನಿರ್ವಹಿಸುತ್ತಾರೆ. ಒಬ್ಬ ಸೋಂಕಿತನೊಂದಿಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ, ನಿರಂತರ ಗಂಟೆಗಟ್ಟೆಲೆ ಸಂಪರ್ಕದಲ್ಲಿದ್ದರೆ,

ಅಂತಹವರು  “ಕೋವಿಡ್‌ 19 ಕ್ಯಾರಿಯರ್‌’ (ಕೋವಿಡ್‌ 19 ವಾಹಕ) ಆಗುತ್ತಾರೆ. ಆದರೆ, ಚಾಲನಾ ಸಿಬ್ಬಂದಿಯೊಂದಿಗೆ ಅಬ್ಬಬ್ಟಾ ಎಂದರೆ 5 ನಿಮಿಷ ಸಂಪಕದಲ್ಲಿರುತ್ತಾರೆ. ಅದೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿರುತ್ತದೆ’ ಎಂದು ಬಿಎಂಟಿಸಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.  ಮಾರುಕಟ್ಟೆ ಸೀಲ್‌ಡೌನ್‌ ಆಗಿರುವ ಕಾರಣ ಬಸ್‌ಗಳೂ ವಿರಳವಾಗಿದ್ದು, ಪ್ರಯಾಣ ಒತ್ತಡಕ್ಕೆ ತಕ್ಕಂತೆ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈಗಲೂ ನಿತ್ಯ 10 ಲಕ್ಷ ಜನ ಸಂಚಾರ: ಕೋವಿಡ್‌ 19 ಹಾವಳಿ ನಡುವೆಯೂ ಬಸ್‌ ಪ್ರಯಾಣಿಕರ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ. ಲಾಕ್‌ಡೌನ್‌ ತೆರವಾದ ಬಳಿಕ ನಿತ್ಯ ಸರಾಸರಿ 10 ಲಕ್ಷಕ್ಕೂ ಅಧಿಕ ಜನ ಬಸ್‌ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಸಂಸ್ಥೆಯಲ್ಲಿ ಮತ್ತಷ್ಟು ಪ್ರಕರಣಗಳು ದಾಖಲಾದರೆ ಪ್ರಯಾಣಿಕರ ಸಂಖ್ಯೆ ಕುಸಿಯುವ ಸಾಧ್ಯತೆಗಳಿವೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next