ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ತನ್ನದಲ್ಲದ ತಪ್ಪಿಗೆ ತನಗರಿವಿಲ್ಲದೆ ಮುಂದಿನ ದಿನಗಳಲ್ಲಿ ಪ್ರತಿ ವರ್ಷ 80 ಕೋಟಿ ರೂ. ನಷ್ಟ ಅನುಭವಿಸಲಿದ್ದು, ಒಂದಲ್ಲಾ ಎರಡಲ್ಲ ಒಂದು ದಶಕದ ಕಾಲ ನಿರಂತರವಾಗಿ ಈ “ನಷ್ಟ’ ಭರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಅದು ಎಲೆಕ್ಟ್ರಿಕ್ ಬಸ್ ಗುತ್ತಿಗೆ ಪಡೆಯುವ ರೂಪದಲ್ಲಿ ಈ ಆರ್ಥಿಕ ಹೊರೆ ಅನುಭವಿಸಬೇಕಾಗಿದೆ.
10 ವರ್ಷಕ್ಕೆ 800 ಕೋಟಿ ರೂ.ನಷ್ಟ: ಹೌದು, ವಿದ್ಯುತ್‌ಚಾಲಿತ ಬಸ್ ಸೇವೆಗೆ ಪ್ರತಿ ಕಿ.ಮೀ.ಗೆ ಹವಾನಿಯಂತ್ರಿತ ಬಸ್‌ಗೆ 89.6 ರೂ. ಕನಿಷ್ಠ ದರ ನಿಗದಿಯಾಗಿದೆ (ಮಂಡಳಿ ಸಭೆಯಲ್ಲಿ ಅಂತಿಮಗೊಳ್ಳುವುದು ಬಾಕಿ ಇದೆ). ಈ ದರದಲ್ಲಿ ಅಂದಾಜು 300 ಬಸ್‌ಗಳನ್ನು ರಸ್ತೆಗಿಳಿಸಲಿದೆ. ಅವುಗಳಿಗೆ ದಿನಕ್ಕೆ ತಲಾ 200 ಕಿ.ಮೀ. ಕಾರ್ಯಾಚರಣೆ ಗುರಿ ನೀಡಲಾಗಿದೆ. ಆದರೆ, ಕೇವಲ ಒಂದೂವರೆ ವರ್ಷದ ಹಿಂದೆ ಇದೇ ಮಾದರಿಯ ಬಸ್‌ಗಳಿಗೆ ಕಿ.ಮೀ.ಗೆ ಕೇವಲ 37.50 ರೂ. ನಿಗದಿಯಾಗಿತ್ತು. ಅಂದರೆ ಈಗ ಅದು ದುಪ್ಪಟ್ಟಾಗಿದ್ದು, ಆ ಹೆಚ್ಚುವರಿ ಹೊರೆ ವಾರ್ಷಿಕ ಅಂದಾಜು 80 ಕೋಟಿ ರೂ. ಆಗುತ್ತದೆ.
ಹತ್ತು ವರ್ಷಕ್ಕೆ 800 ಕೋಟಿ ರೂ. ನಷ್ಟ ಪರಿಣಮಿಸಲಿದೆ. “ಲೀಸ್’ ರೂಪದಲ್ಲಿ ಬಸ್‌ಗಳನ್ನು ರಸ್ತೆಗಿಳಿಸಲು ಟೆಂಡರ್ ಕರೆದು, ಕೊನೆಯ ಕ್ಷಣದಲ್ಲಿ ಇದನ್ನು ಕೈಬಿಡಲಾಯಿತು. ಸಕಾಲದಲ್ಲಿ ಸರಿಯಾದ ತೀರ್ಮಾನ ಕೈಗೊಳ್ಳದಿದ್ದರ ಫಲ ಇದು. ಖರೀದಿಸಬೇಕೋ ಅಥವಾ ಗುತ್ತಿಗೆಯಲ್ಲಿ ಪಡೆಯಬೇಕೋ ಎಂಬ ಗೊಂದಲದಲ್ಲೇ ಕಾಲಹರಣವಾಯಿತು. ಅಂತಿಮವಾಗಿ ಯಾವುದೇ ನಿರ್ಧಾರ ಆಗದೆ, ಸಬ್ಸಿಡಿ ಬಂದ ಹಣ ಕೂಡ ವಾಪಸ್ ಹೋಯಿತು. ಈಗ ಹಿಂದಿನ ಮಾದರಿಯಲ್ಲೇ ಅನಿವಾ ರ್ಯವಾಗಿ ದುಪ್ಪಟ್ಟು ದರಕ್ಕೆ ಟೆಂಡರ್ ನೀಡಬೇಕಾಗಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ನಷ್ಟದ ಲೆಕ್ಕಾಚಾರ ಹೀಗೆ: ಒಂದು ಬಸ್‌ಗೆ ಈಗಿರುವ ಕನಿಷ್ಠ ಬಿಡ್ ಮೊತ್ತ ಕಿ.ಮೀ.ಗೆ 89.6 ರೂ. ಆದರೆ, ಈ ಹಿಂದಿನ ಕನಿಷ್ಠ ಬಿಡ್ ಮೊತ್ತ 37.5 ರೂ. ಹಾಗೂ ವಿದ್ಯುತ್ ವೆಚ್ಚ 6 ರೂ. ಸೇರಿ 43.5 ರೂ. ಆಗುತ್ತದೆ. ಅಂದರೆ ಕಿ.ಮೀ. 46.1 ರೂ. ಹೆಚ್ಚುವರಿಯಾಯಿತು. ಇದನ್ನು 200 ಕಿ.ಮೀ.ಗೆ 300 ಬಸ್‌ಗಳು ಹಾಗೂ 300 ದಿನಗಳಿಗೆ ಲೆಕ್ಕಹಾಕಿದರೆ, ಸರಿ ಸುಮಾರು 82 ಕೋಟಿ ರೂ. ಆಗುತ್ತದೆ. ಇದಲ್ಲದೆ, “ಫೇಮ್-1′ ಯೋಜನೆ ಅಡಿ ಪ್ರತಿ ಬಸ್‌ಗೆ ಇದ್ದ ಸಬ್ಸಿಡಿ ಮೊತ್ತ ಶೇ. 50 ಅಂದರೆ 75 ಲಕ್ಷ ರೂ. ಈಗ ಅದನ್ನು ಗರಿಷ್ಠ 50 ಲಕ್ಷಕ್ಕೆ ಸೀಮಿತಗೊಳಿಸಲಾಗಿದೆ. ಉಳಿದ 25 ಲಕ್ಷ ರೂ. ಅನ್ನು ಸಾಲದ ರೂಪದಲ್ಲಿ ಪಡೆದರೂ, ಕಿ.ಮೀ.ಗೆ ಅದರ ಬಡ್ಡಿ ದರ 5 ರೂ. ಆಗುತ್ತದೆ. ಅದರ ಹೊರೆಯೂ ಸಂಸ್ಥೆಯ ಮೇಲೆಯೇ ಬೀಳಲಿದೆ.
ಈಗಿರುವ ಪರಿಸ್ಥಿತಿಯಲ್ಲಿ ಬಿಎಂಟಿಸಿಯು ಈ ಹೊರೆ ನಿಭಾಯಿಸುವುದ ಕಷ್ಟಸಾಧ್ಯ. ಯಾಕೆಂದರೆ, ಸುಮಾರು 300 ಕೋಟಿಗೂ ಅಧಿಕ ನಷ್ಟದಲ್ಲಿದೆ. ಪ್ರತಿ ತಿಂಗಳು ಕೋಟ್ಯಂತರ ರೂ. ಸಾಲ ಮರುಪಾವತಿ ಮಾಡುತ್ತಿದೆ. ಇದರ ನಡುವೆ ವಿದ್ಯುತ್‌ಚಾಲಿತ ಬಸ್‌ಗಳ ಸೇವೆಯಿಂದ ಆಗಲಿರುವ ತಿಂಗಳಿಗೆ ಏಳು ಕೋಟಿ ರೂ. ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಹಾಗಾಗಿ, ಯೋಜನೆ ಸುಸ್ಥಿರವಾಗಿ ನಡೆಯುವುದು ಅನುಮಾನ. ಇದಕ್ಕಾಗಿ ರಾಜ್ಯ ಸರ್ಕಾರವನ್ನು ಅವಲಂಬಿಸ ಬೇಕಾಗುತ್ತದೆ. ಒಂದು ವೇಳೆ ಸರ್ಕಾರ ಇದಕ್ಕೆ ಒಪ್ಪಿದರೂ, ಉಳಿದ ಒಂಬತ್ತು ವರ್ಷಗಳು ಹೇಗೆ ಎಂಬ ಚಿಂತೆ ಬಿಎಂಟಿಸಿ ಅಧಿಕಾರಿಗಳನ್ನು ಕಾಡುತ್ತಿದೆ.
ಆಗಿದ್ದೇನು?: 2017ರ ಅಂತ್ಯದಲ್ಲಿ 60 ಎಸಿ (12 ಮೀ. ಉದ್ದ) ಹಾಗೂ 20 ನಾನ್‌ಎಸಿ (9 ಮೀ. ಉದ್ದ) ಸೇರಿದಂತೆ ಬಿಎಂಟಿಸಿ 80 ಬಸ್‌ಗಳಿಗೆ ಟೆಂಡರ್ ಕರೆಯಲಾಗಿತ್ತು. ಅತ್ಯಂತ ಕಡಿಮೆ ದರದಲ್ಲಿ ಬಸ್‌ಗಳ ಪೂರೈಕೆಗೆ ಮುಂದೆಬಂದ ಗೋಲ್ಡ್‌ಸ್ಟೋನ್ ಕಂಪನಿಗೆ ಕಾರ್ಯಾದೇಶ ನೀಡಲು ಉದ್ದೇಶಿಸಲಾಗಿತ್ತು. ಅಷ್ಟೇ ಅಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇದೇ ಮಾದರಿಯಲ್ಲಿ ಮತ್ತೆ 500 ಬಸ್‌ಗಳ ಟೆಂಡರ್‌ಗೆ ಸಿದ್ಧತೆ ಕೂಡ ನಡೆಸಿತ್ತು. ಆದರೆ, ಮೈತ್ರಿ ಸರ್ಕಾರದಲ್ಲಿದ್ದ ಅಂದಿನ ಸಾರಿಗೆ ಸಚಿವರು “ಲೀಸ್’ ಮಾದರಿಗೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಟೆಂಡರ್ ಪ್ರಕ್ರಿಯೆ ಕಗ್ಗಂಟಾಯಿತು. ಕೊನೆಗೆ ರದ್ದುಪಡಿಸಲಾಯಿತು.
ಖರೀದಿ ಪದ್ಧತಿ ಕೈ ಬಿಟ್ಟು ಗುತ್ತಿಗೆ ಮಾದರಿ ಅಳವಡಿಕೆ: ಫೇಮ್-1ರಲ್ಲಿ ಬಸ್‌ಗಳ ಖರೀದಿಗೆ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ, ಇದರಿಂದ ಹೊರೆ ಆಗಲಿದ್ದು, ಎಲೆಕ್ಟ್ರಿಕ್ ಬಸ್‌ಗಳನ್ನು ಈ ಹಿಂದೆ ಗುತ್ತಿಗೆ ಪದ್ಧತಿಯಲ್ಲಿ ಪಡೆದು, ಕಾರ್ಯಾಚರಣೆ ಮಾಡುವುದಾಗಿ ಬಿಎಂಟಿಸಿ ಹೇಳಿತ್ತು. ಇದಕ್ಕೆ ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಆಕ್ಷೇಪಿಸಿದಾಗ, ಈ ವಿನೂತನ ಮಾದರಿಯಿಂದ ಆಗುವ ಲಾಭಗಳ ಬಗ್ಗೆ ಬಿಎಂಟಿಸಿ ಮನದಟ್ಟು ಮಾಡಿಕೊಟ್ಟಿತ್ತು. ನಂತರದಲ್ಲಿ ಖರೀದಿ ಪದ್ಧತಿ ಕೈಬಿಟ್ಟು, ಗುತ್ತಿಗೆ ಮಾದರಿಯನ್ನು ಕೇಂದ್ರ ಅಳವಡಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
-ಪ್ರಸ್ತುತ ಬಿಡ್- ಕಿ.ಮೀ.ಗೆ 89.6 ರೂ. (ವಿದ್ಯುತ್ ವೆಚ್ಚ ಸೇರಿ)
-ಹಿಂದಿನ ಬಿಡ್- ಕಿ.ಮೀ.ಗೆ 37.5 ರೂ. (ವಿದ್ಯುತ್ ವೆಚ್ಚ ಹೊರತುಪಡಿಸಿ)
* ವಿಜಯಕುಮಾರ ಚಂದರಗಿ