Advertisement

BMTC: ನೌಕರರಿಗೆ ಬೆಳ್ಳಿ ಹಬ್ಬದ ಗಿಫ್ಟ್; ಶಿಸ್ತು ಕ್ರಮ 7,000 ಪ್ರಕರಣ ವಿಲೇವಾರಿ

12:52 PM Jan 01, 2024 | Team Udayavani |

ಬೆಂಗಳೂರು: ರಜತ ಮಹೋತ್ಸವದ ಸಂಭ್ರಮದಲ್ಲಿರುವ ಬಿಎಂಟಿಸಿ ಇದೀಗ ನೌಕರರ ವಿರುದ್ಧದ ಪ್ರಕರಣಗಳನ್ನು ವಿಲೇವಾರಿ ಮಾಡಿ ಅವರಿಗೆ ಹೊಸ ವರ್ಷದಲ್ಲಿ “ರಿಲೀಫ್’ ಕೊಟ್ಟಿದೆ. ರಜತ ಮಹೋತ್ಸವದ ಅಂಗವಾಗಿ ಒಂದು ಬಾರಿ ಅನ್ವಯ ಆಗುವಂತೆ ನೌಕರರ ವಿರುದ್ಧದ ಶಿಸ್ತುಕ್ರಮವನ್ನು ಬಿಎಂಟಿಸಿ ಇತ್ಯರ್ಥಪಡಿಸಿದೆ.

Advertisement

ಗೈರು ಹಾಜರಿ ಮತ್ತು ಶಿಸ್ತು ಪ್ರಕರಣಗಳು ಸೇರಿ ಇದೀಗ ಒಟ್ಟು 6960 ಪ್ರಕರಣಗಳನ್ನು ವಿಲೇವಾರಿ ಮಾಡಿ ಹೊಸ ಯಶೋಗಾಥೆ ಬರೆದಿದೆ.

ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲನಾ/ ತಾಂತ್ರಿಕ ಸಿಬ್ಬಂದಿಗಳು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿರುವ, ಶಿಸ್ತು ಪ್ರಕರಣಗಳಲ್ಲಿ ಭಾಗಿಯಾಗಿರುವ ನೌಕರರಿಗೆ ಅವರ ಪ್ರವೃತ್ತಿಯಲ್ಲಿ ಬದಲಾವಣೆ/ಸುಧಾರಣೆ ತಂದುಕೊಳ್ಳಲು ಒಂದು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಬಾರಿಗೆ ಅನ್ವಯವಾಗುವಂತೆ ಬಾಕಿ ಇರುವ ಎಲ್ಲ ಶಿಸ್ತುಕ್ರಮ ಕೇಸುಗಳನ್ನು ವಿಲೇವಾರಿ ಮಾಡಿದೆ.

ಮಾರ್ಗಸೂಚಿಯಂತೆ 2023ರ ನ.30ರ ಅಂತ್ಯಕ್ಕೆ ವಿವಿಧ ಹಂತದಲ್ಲಿ ಚಾಲನಾ/ತಾಂತ್ರಿಕ ಸಿಬ್ಬಂದಿಗಳ ವಿರುದ್ಧ ಘಟಕ ಹಾಗೂ ಕೇಂದ್ರ ಕಚೇರಿ ಮಟ್ಟದಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇದ್ದ 2536 ಗೈರು ಹಾಜರಿ, 4424 ಶಿಸ್ತು ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಬಿಬಿಎಂಟಿಸಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಸೇವೆಯಲ್ಲಿ 25 ವರ್ಷ ಪೂರ್ಣಗಳಿಸಿರುವ ಹಿನ್ನೆಲೆಯಲ್ಲಿ ರಜತ ಮಹೋತ್ಸವವನ್ನು ಆಚರಿಸುತ್ತಿದೆ. ಸಂಸ್ಥೆ ಏಳಿಗೆಗಾಗಿ ಹಲವು ನೌಕರರ ಪರಿಶ್ರಮವಿದೆ. ಸಂಸ್ಥೆಯಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಚಾಲನಾ/ತಾಂತ್ರಿಕ ಸಿಬ್ಬಂದಿಗಳ ಪರಿಶ್ರಮವನ್ನು ಗುರುತಿಸಿ ಅವರಲ್ಲಿ ಸಂಸ್ಥೆ ಬಗ್ಗೆ ಇನ್ನೂ ಹೆಚ್ಚಿನ ಮಾನಸಿಕ ಸ್ಥೈರ್ಯ ಹೆಚ್ಚಿಸುವ, ನೌಕರರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ, ನೌಕರರಲ್ಲಿ ಸಂಸ್ಥೆ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಲು ಬಿಎಂಟಿಸಿ ಮುಂದಾಗಿದೆ ಎಂದು ತಿಳಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next