Advertisement

ಬಿಎಂಟಿಸಿ ಚಾಲಕರಿಗೂ ಬಂಪರ್‌ ಆಫ‌ರ್‌

01:37 PM Mar 11, 2023 | Team Udayavani |

ಬೆಂಗಳೂರು: ಸಾರಿಗೆ ನಿಯಮಗಳ ಉಲ್ಲಂಘನೆ ಯ ದಂಡ ಪ್ರಮಾಣವನ್ನು ಶೇ. 50ರಷ್ಟು ತಗ್ಗಿಸಿರುವ ಲಾಭವು ಅತಿ ಹೆಚ್ಚು ಸಾರಿಗೆ ನಿಯಮಗಳ ಉಲ್ಲಂಘನೆಯಿಂದ ಗರಿಷ್ಠ ದಂಡ ಪಾವತಿಗೆ ಗುರಿಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಮಾತ್ರವಲ್ಲ; ಅಲ್ಲಿನ ಕಾರ್ಯನಿರ್ವಹಿಸುವ ಚಾಲಕರಿಗೂ “ಬಿಗ್‌ ರಿಲೀಫ್’ ನೀಡಲಿದೆ!

Advertisement

ಸಾಮಾನ್ಯವಾಗಿ ಬಿಎಂಟಿಸಿ ಬಸ್‌ಗಳ ಯಾವುದೇ ರೀತಿಯ ಸಾರಿಗೆ ನಿಯಮಗಳ ಉಲ್ಲಂಘನೆಗೆ ವಿಧಿಸಲಾಗುವ ದಂಡವನ್ನು ಆ ಸಂದರ್ಭದಲ್ಲಿದ್ದ ಚಾಲಕರಿಂದಲೇ ಸಂಸ್ಥೆಯು ವಸೂಲು ಮಾಡಿ, ಸಂಚಾರ ಪೊಲೀಸರಿಗೆ ಪಾವತಿಸುತ್ತದೆ. ರಿಯಾಯ್ತಿ ಸೌಲಭ್ಯ ಕಲ್ಪಿಸಿರುವುದರಿಂದ ಮೂರ್‍ನಾಲ್ಕು ವರ್ಷಗಳಿಂದ ಬಾಕಿ ಇರುವ ದಂಡ ಪಾವತಿಸುತ್ತಿದ್ದು, ಇದರ ಜತೆಗೆ ಈಗಾಗಲೇ ಚಾಲಕರಿಂದ ವಸೂಲು ಮಾಡಿ ರುವ ಪೂರ್ಣಪ್ರಮಾಣದ ದಂಡದಲ್ಲಿ ಶೇ. 50 ಮೊತ್ತವನ್ನು ಆಯಾ ಚಾಲಕರಿಗೆ ಹಿಂಪಾವತಿಸಲು ನಿರ್ಧರಿಸಿದೆ.

ಸಂಸ್ಥೆಯ ಈ ತೀರ್ಮಾನದಿಂದ ಸಾವಿರಾರು ಚಾಲಕರಿಗೆ ಅನುಕೂಲ ಆಗಲಿದೆ. ಸಾರಿಗೆ ನಿಯಮ ಉಲ್ಲಂ  ಸಿದ್ದಕ್ಕಾಗಿ ಈ ಮೊದಲೇ ವೇತನದಿಂದ ಕಡಿತ ಗೊಂಡ ದಂಡದ ಮೊತ್ತದಲ್ಲಿ ಅರ್ಧದಷ್ಟು ಮೊತ್ತವು ಮುಂಬರುವ ದಿನಗಳಲ್ಲಿ ಆಯಾ ಚಾಲಕರ ಖಾತೆಗಳಿಗೆ ಬಿಎಂಟಿಸಿಯಿಂದ ಮತ್ತೆ ಜಮೆ ಆಗಲಿದೆ. ಸಾವಿರಾರು ಚಾಲಕರು ಇದರ ಫ‌ಲಾನು ಭವಿಗಳಾಗಿರಲಿದ್ದು, ಹಿಂಪಾವತಿ ಆಗಲಿರುವ ಮೊತ್ತ ಲಕ್ಷಾಂತರ ರೂಪಾಯಿ ಆಗಿದೆ ಎಂದು ಸಂಸ್ಥೆಯ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ನಗರದಲ್ಲಿ 6 ಸಾವಿರಕ್ಕೂ ಅಧಿಕ ಬಿಎಂಟಿಸಿ ಬಸ್‌ ಗಳಿದ್ದು, 2018ರಿಂದ ಈಚೆಗೆ 24 ಸಾವಿರ ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣಗಳು ಅವುಗಳ ಮೇಲಿದ್ದು, ಇದರಲ್ಲಿ ಶೇ. 50 ಅಂದರೆ 12 ಸಾವಿರ ಪ್ರಕರಣಗಳು ಸಿಗ್ನಲ್‌ ಜಂಪ್‌ಗೆ ಸಂಬಂಧಿಸಿದವುಗಳೇ ಆಗಿವೆ. ಉಳಿದವು ನಿಲ್ದಾಣದಿಂದ ಹೊರಗೆ ನಿಲುಗಡೆ, ತಪ್ಪು ಜಾಗದಲ್ಲಿ ನಿಲುಗಡೆ, ಅತಿ ವೇಗದ ಚಾಲನೆ ಸೇರಿದಂತೆ ಹಲವು ಪ್ರಕಾರದ ಉಲ್ಲಂಘನೆಗಳು ವರದಿಯಾಗಿವೆ. ಅದೆಲ್ಲದರ ಮೊತ್ತ ಅಂದಾಜು 1.30 ಕೋಟಿ ರೂ. ಆಗಿದೆ. ಈ ಪೈಕಿ ಮೊದಲ ಹಂತದ ರಿಯಾಯ್ತಿ ವೇಳೆ 35 ಲಕ್ಷ ರೂ. ಪಾವತಿ ಸಲಾಗಿದ್ದು, ಉಳಿದ ಮೊತ್ತವನ್ನು ವಿಸ್ತರಣೆ ವೇಳೆ ಪಾವತಿಸಲು ಸಿದ್ಧತೆ ನಡೆದಿದೆ ಎಂದು ಸಂಸ್ಥೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣಗಳ ಪರಿಶೀಲನೆ; ನಂತರ ಪಾವತಿ : “20 ಸಾವಿರಕ್ಕೂ ಅಧಿಕ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿರುವುದು ನಿಜ. ಆದರೆ, ಹಲವೆಡೆ ಡಿಜಿಟಲ್‌ ಕ್ಯಾಮೆರಾಗಳಿಂದ ಸೆರೆಹಿಡಿದ ಇಮೇಜ್‌ ಸರಿಯಾಗಿ ಇರುವುದಿಲ್ಲ. ಇನ್ನು ನಮ್ಮ ಚಾಲಕರು ಮಾಡಿಲ್ಲದ ತಪ್ಪುಗಳಿಗೂ ಹೊಣೆ ಮಾಡಲಾಗಿದೆ. ಅಂತಹ ಪ್ರಕರಣಗಳ ಮರುಪರಿಶೀಲನೆ ಅಗತ್ಯವಿದೆ. ಈ ಬಗ್ಗೆ ಸಂಸ್ಥೆ ಅಧಿಕಾರಿಗಳು ಸಕ್ರಿಯವಾಗಿದ್ದಾರೆ. ರಿಯಾಯ್ತಿ ಅವಧಿಯಲ್ಲಿ ದಂಡ ಪಾವತಿಸುವ ಪ್ರಕ್ರಿಯೆ ಮುಗಿದ ನಂತರ ಚಾಲಕರಿಗೂ ಇದರ ಲಾಭ ದೊರೆಯಲಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಸ್ಪಷ್ಟಪಡಿಸಿದರು.

Advertisement

“ಸಾಮಾನ್ಯವಾಗಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಕೆಲವು ಪ್ರಕರಣಗಳಲ್ಲಿ ಸಂಸ್ಥೆಯೇ ದಂಡ ಪಾವತಿಸಿದೆ. ಇನ್ನು ಹಲವು ಪ್ರಕರಣಗಳಲ್ಲಿ ಚಾಲಕರ ವೇತನದಲ್ಲಿ ಕಡಿತ ಮಾಡಿಕೊಳ್ಳಲಾಗಿರುತ್ತದೆ. ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಅಂತಹ ಪ್ರಕರಣಗಳಲ್ಲಿ ಹಂತ- ಹಂತವಾಗಿ ಹಿಂಪಾವತಿಸಲಾಗುವುದು’ ಎಂದು ಅವರು ತಿಳಿಸಿದರು.

ಎರಡ್ಮೂರು ದಿನಗಳಲ್ಲಿ ಬಾಕಿ ಹಣ ಪಾವತಿ: ಎರಡು-ಮೂರು ದಿನಗಳಲ್ಲಿ ಬಾಕಿ ಇರುವ ನಿಯಮಗಳ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತ ಪಾವತಿಸಲು ಬಿಎಂಟಿಸಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ನಿಯಮ ಉಲ್ಲಂಘನೆ ಪ್ರಕರಣಗಳ ಪರಿಶೀಲನೆ ನಂತರ ಪಾವತಿಸಲಾಗುವ ಮೊತ್ತ ಅಂದಾಜು 50 ಲಕ್ಷ ದಾಟಲಿದ್ದು, ಅದನ್ನು ಎರಡು-ಮೂರು ದಿನಗಳಲ್ಲಿ ಪಾವತಿಸಲು ಉದ್ದೇಶಿಸಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

-ವಿಜಯ ಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next