Advertisement

ಕಡೇ ಮೈಲಿವರೆಗೂ ಬಿಎಂಟಿಸಿ ಕನೆಕ್ಟಿವಿಟಿ

12:14 PM Mar 15, 2018 | |

ಬೆಂಗಳೂರು: ಇದುವರೆಗೂ ಬಿಎಂಟಿಸಿ ಬಸ್‌ ಸಂಪರ್ಕ ಸಿಗದ ಸ್ಥಳಗಳಿಗೂ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬಿಎಂಟಿಸಿ ಸಂಸ್ಥೆಯು “ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ’ (ಕೊನೆಯ ಹಂತದವರೆಗೆ ಸಾರಿಗೆ) ಕಲ್ಪಿಸಲು “ಸಿದ್ಧ ಸೇವೆ’ ಯೋಜನೆಯನ್ನು ಪ್ರಾಯೋಗಿಕವಾಗಿ ಎರಡು ಹಂತದಲ್ಲಿ ಜಾರಿಗೊಳಿಸಲು ಮುಂದಾಗಿದೆ.

Advertisement

ಮೊದಲ ಹಂತದಲ್ಲಿ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ ಸೇವೆ ಒದಗಿಸಲು ಮೆಟ್ರೋ ಬೈಕ್ಸ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಶಾಂತಿನಗರ ಟಿಟಿಎಂಸಿ ಬಸ್‌ನಿಲ್ದಾಣದ ಬೈಕ್‌ ಸೇವೆಗೆ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಬುಧವಾರ ಚಾಲನೆ ನೀಡಿದ್ದಾರೆ. ನಗರದಲ್ಲಿ 36 ಮೆಟ್ರೋ ರೈಲು ನಿಲ್ದಾಣಗಳಲ್ಲಿ ಸೇವೆ ಕಲ್ಪಿಸಿದ ಬಳಿಕ ಮೆಟ್ರೋ ಬೈಕ್ಸ್‌ ಸಂಸ್ಥೆಯು ಬಿಎಂಟಿಸಿ ಬಸ್‌ ನಿಲ್ದಾಣಗಳಲ್ಲೂ ಸೇವೆ ಆರಂಭಿಸಿದೆ. “ಮೆಟ್ರೋ ಬೈಕ್ಸ್‌’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಬೈಕ್‌ ಸೇವೆ ಬಳಸಿಕೊಳ್ಳಬಹುದು.

ಟಿಕೆಟ್‌ ಒಂದು ಸೇವೆ ಮೂರು!: ಎರಡನೇ ಹಂತದಲ್ಲಿ ವಿಮಾನಯಾನ ಪ್ರಯಾಣಿಕರನ್ನು ಸೆಳೆಯಲು ಬಿಎಂಟಿಸಿ ಸಂಸ್ಥೆ ಸಿದ್ಧತೆ ನಡೆಸಿದೆ. ವಿಮಾನಯಾನ ಪ್ರಯಾಣಿಕರು ಮನೆಯಿಂದ ಬಸ್‌ನಿಲ್ದಾಣ ತಲುಪಲು ಇಲ್ಲವೇ ಬಸ್‌ ನಿಲ್ದಾಣದಿಂದ ಮನೆಗೆ ಹೋಗಲು ಅನುಕೂಲವಾಗುವಂತೆ ಖಾಸಗಿ ಕ್ಯಾಬ್‌, ಆಟೋಗಳ ಜತೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್‌ ತಿಳಿಸಿದರು.

ಒಂದು ಟಿಕೆಟ್‌ನಲ್ಲೇ ಮೂರು ಸೇವೆ ನೀಡಲು ಸಂಸ್ಥೆ ಚಿಂತಿಸಿದೆ. ಉದಾಹರಣೆಗೆ ಮನೆಯಿಂದ ಬಸ್‌ನಿಲ್ದಾಣ ತಲುಪಲು ಟ್ಯಾಕ್ಸಿ ಸೇವೆ, ಬಸ್‌ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ವಾಯು ವಜ್ರದಲ್ಲಿ ಪ್ರಯಾಣ ಶುಲ್ಕ ಹಾಗೂ ವಿಮಾನ ನಿಲ್ದಾಣದಲ್ಲಿ ಲಗೇಜ್‌ ತಲುಪಿಸುವ ಸೇವೆಯೂ ಒಂದೇ ಟಿಕೆಟ್‌ನಲ್ಲಿ ಸಿಗಲಿದೆ. ಬಿಎಂಟಿಸಿಯೇ ಟ್ಯಾಕ್ಸಿ ಸೇವೆಯನ್ನು ಪ್ರಯಾಣಿಕರಿಗೆ ಒದಗಿಸಲಿದೆ. ಮೊಬೈಲ್‌ ಆ್ಯಪ್‌ ಇಲ್ಲವೇ ವೆಬ್‌ಸೈಟ್‌ನಲ್ಲಿ ಟಿಕೆಟ್‌ ಕಾಯ್ದಿರಿಸುವ ತಂತ್ರಾಂಶ ಅಭಿವೃದ್ಧಿಪಡಿಸುವ ಚಿಂತನೆ ಇದೆ ಎಂದು ಹೇಳಿದರು.

ಬಿಎಂಟಿಸಿ ನಿವೃತ್ತ ನೌಕರರಿಗೆ ಶೀಘ್ರ ಗ್ರಾಚ್ಯುಟಿ
ಬಿಎಂಟಿಸಿಯ ನಿವೃತ್ತ ನೌಕರರಿಗೆ ಶೀಘ್ರವೇ ಗ್ರಾಚ್ಯುಟಿ ನೀಡಲಾಗುವುದು ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ತಿಳಿಸಿದರು. ರಾಜ್ಯ ಸರ್ಕಾರದಿಂದ 90 ಕೋಟಿ ರೂ.  ಬಿಎಂಟಿಸಿಗೆ ಮಂಜೂರು ಮಾಡಿಸಿಕೊಳ್ಳಲಾಗಿದೆ. 2016ರ ಆಗಸ್ಟ್‌ನಿಂದ ಸುಮಾರು 72.21 ಕೋಟಿ ರೂ. ಗ್ರಾಚ್ಯುಟಿಯನ್ನು ಸಂಸ್ಥೆ ಬಾಕಿ ಉಳಿಸಿಕೊಂಡಿದೆ. ಜತೆಗೆ ಸುಮಾರು 39 ಕೋಟಿ ರೂ.ವರೆಗೆ ರಜೆ ನಗದೀಕರಣ ಬಾಕಿ, 40 ಕೋಟಿ ರೂ. ಬೋನಸ್‌ ಹಾಗೂ ಸಹಕಾರ ಸಂಘಕ್ಕೆ ನೌಕರರ ವೇತನದಿಂದಲೇ 20 ಕೋಟಿ ರೂ.ವರೆಗೆ ಕಡಿತಗೊಳಿಸಿರುವ ಹಣ ಬಾಕಿ ಉಳಿದಿದೆ.

Advertisement

ಸಿದ್ಧ ಮಹಾಪ್ರಾಣ
ನೂತನ ಯೋಜನೆಗೆ ಸಿದ್ಧ ಸೇವೆ ಎಂದು ಹೆಸರಿಟ್ಟಿರುವುದಕ್ಕೆ ಸ್ಪಷ್ಟನೆ ನೀಡಿದ ಸಚಿವ ಎಚ್‌. ಎಂ.ರೇವಣ್ಣ, “ಪ್ರಾಣ ಒಂದೇ ಇರೋದು. ಕನ್ನಡ ವ್ಯಾಕರಣ ನಿಮಗಿಂತ ಚೆನ್ನಾಗಿ ಬಲ್ಲೆ. ಸಿದ್ಧ ಎಂದರೆ ರೆಡಿ ಎಂದರ್ಥ! ಹಾಗಾಗಿ ಸಿದ್ಧ ಎಂದು ಹೆಸರಿಡಲಾಗಿದೆ. ನಮಗೇನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ರೀತಿ ಮಾಡಿ ಎಂದು ಸೂಚಿಸಿಲ್ಲ. ಜನರ ಅನುಕೂಲಕ್ಕಾಗಿ ಈ ಸೇವೆ ಆರಂಭಿಸಲಾಗಿದೆ’ ಎಂದು ಸಚಿವ ರೇವಣ್ಣ ಹೇಳಿದರು.

ವಾರದೊಳಗೆ ಇಂದಿರಾ ಸಾರಿಗೆ ಯೊಜನೆಯನ್ನು ಘೋಷಿಸಲಾಗುವುದು. ಗಾರ್ಮೆಂಟ್ಸ್‌ ಮಾಲೀಕರು
ನೀಡುವ ಪಾಲಿನ ಕುರಿತು ಶೀಘ್ರವೇ ನಿರ್ಧರಿಸಲಾಗುವುದು.
 ಎಚ್‌.ಎಂ.ರೇವಣ್ಣ,  ಸಾರಿಗೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next