ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲೂ ಲಕ್ಷಾಂತರ ಜನ ಸಾಹಿತ್ಯಾಸಕ್ತರಿದ್ದು, ಅವರಿಗಾಗಿ ಶೀಘ್ರದಲ್ಲೇ ಜಿಲ್ಲಾಮಟ್ಟದ ವಿಶೇಷ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ್ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುರುವಾರ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕೇಂದ್ರ ಕನ್ನಡ ಕ್ರಿಯಾ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರರನ್ನು ಅಭಿನಂದಿಸಿ ಅವರು ಮಾತನಾಡಿದರು.
ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಲಕ್ಷಾಂತರ ಸಾಹಿತ್ಯಾಸಕ್ತರು, ಬರಹಗಾರರು ಇದ್ದಾರೆ. ವಿಶೇಷವಾಗಿ ಅಂಥವರಿಗಾಗಿ ಸಾಹಿತ್ಯ ಸಮ್ಮೇಳನ ಏರ್ಪಡಿಸಲು ಸಾಕಷ್ಟು ಪ್ರಯತ್ನಿಸಿದೆ. ಈ ಸಂಬಂಧ ನಿಗಮಗಳ ಅಧಿಕಾರಿಗಳೊಂದಿಗೂ ಚರ್ಚಿಸಿದೆ. ಆದರೆ, ಯಾರೂ ಆಸಕ್ತಿ ತೋರಿಸಲಿಲ್ಲ. ಆದ್ದರಿಂದ ಸ್ವತಃ ಪರಿಷತ್ತಿನಿಂದ ಮುತುವರ್ಜಿ ವಹಿಸಿ, ಧಾರವಾಡದಲ್ಲಿ ಜಿಲ್ಲಾಮಟ್ಟದ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಸಾಹಿತಿ ಪ್ರೊ.ಅಬ್ದುಲ್ ಬಷೀರ್ ಮಾತನಾಡಿ, “ಬಹುತೇಕರಿಗೆ ನಿವೃತ್ತಿ ನಂತರ ಏನು ಮಾಡುವುದು ಎಂಬ ಪ್ರಶ್ನೆ ಕಾಡುತ್ತದೆ. ಅವರಿಗೆಲ್ಲಾ ಕನ್ನಡ ಕೆಲಸದಲ್ಲಿ ತೊಡಗಿರುವ ರಸ್ತೆ ಸಾರಿಗೆ ನಿಗಮಗಳ ನಿವೃತ್ತ ನೌಕರರು ಮಾದರಿ,’ ಎಂದರು. “ಧೈರ್ಯ ಮತ್ತು ಧ್ಯೇಯ ಇದ್ದರೆ, ಏನನ್ನಾದರೂ ಸಾಧಿಸಬಹುದು. ನಿವೃತ್ತಿಯಾದವರು ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಆ ಮೂಲಕ ಕನ್ನಡ ಬೆಳೆಸಬೇಕು,’ ಎಂದು ಹೇಳಿದರು.
ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವ.ಚ. ಚನ್ನೇಗೌಡ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ರಸ್ತೆ ಸಾರಿಗೆ ನಿಗಮದ ನಿವೃತ್ತ ನೌಕರರು ಮತ್ತು ಕನ್ನಡಪರ ಹೋರಾಟಗಾರರಾದ ವೈ.ಆರ್. ವಸಂತಕುಮಾರ್, ಪಿ. ನಾರಾಯಣಪ್ಪ, ಶಿವಶಂಕರ್, ಶಂಕರೇಗೌಡ, ಆರ್. ಪುಟ್ಟರಾಜು, ಜಿ. ಶಿವಮರಿ ಅವರನ್ನು ಅಭಿನಂದಿಸಲಾಯಿತು.