Advertisement

ಬಿಎಂಟಿಸಿಯಲ್ಲಿ 1200 ಗುಜರಿ ಬಸ್‌

12:28 PM Mar 03, 2017 | |

ಬೆಂಗಳೂರು: ರಾಜಧಾನಿಯಲ್ಲಿ ಸಂಚರಿಸುತ್ತಿರುವ ಬಿಎಂಟಿಸಿ ಬಸ್‌ಗಳ ಪೈಕಿ ಶೇ. 18ರಿಂದ 20ರಷ್ಟು  ಬಸ್‌ಗಳು “ಸಾðéಪ್‌ ಬಸ್‌’ (ಗುಜರಿ ಪಟ್ಟಿಗೆ ಸೇರಿದ್ದು).  ಇವುಗಳಿಂದ  ವಾಯುಮಾಲಿನ್ಯ ಉಂಟಾಗುತ್ತಿರುವುದು ಒಂದೆಡೆ ಯಾದರೆ, ಮತ್ತೂಂದೆಡೆ ಸಾರಿಗೆ ಸಂಸ್ಥೆಯನ್ನು ಆರ್ಥಿಕ ನಷ್ಟಕ್ಕೆ ತಳ್ಳುತ್ತಿವೆ!  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವ್ಯಾಪ್ತಿಯಲ್ಲಿ 6,200 ಬಸ್‌ಗಳು ಓಡಾಡುತ್ತಿವೆ. ಆ ಪೈಕಿ ಸುಮಾರು 1000 ರಿಂದ 1200 ಬಸ್‌ಗಳು ಶೆಡ್‌ಗೆ ಸೇರಲು ಯೋಗ್ಯವಾದ ಪಟ್ಟಿಗೆ ಸೇರಿವೆ. 

Advertisement

ನಿಯಮದ ಪ್ರಕಾರ ಬಸ್‌ಗಳ ಆಯುಷ್ಯ 8 ಲಕ್ಷ ಕಿ.ಮೀ.ಅಥವಾ ಖರೀದಿಸಿ 10 ವರ್ಷದ ವರೆಗೆ ಬಳಸಬಹುದು. ಆದರೆ, 1000ದಿಂದ 1,200 ಬಸ್‌ಗಳು ಈಗಾಗಲೇ 8 ಲಕ್ಷ ಕಿ.ಮೀ. ಓಡಿವೆ. ಆದರೂ,  ಈ ಬಸ್‌ಗಳು ರಸ್ತೆಗಿಳಿಯುತ್ತಿವೆ. ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಒದಗಿಸಲು ಇವು ರಸ್ತೆಗಿಳಿಯಲೇಬೇಕಾದ ಅನಿವಾರ್ಯತೆಯೂ ಇದೆ. 

ಎರಡು ವರ್ಷಗಳಿಂದ ಬಿಎಂಟಿಸಿಗೆ ಯಾವುದೇ ಹೊಸ ಬಸ್‌ಗಳು ಬಂದಿಲ್ಲ. ಮತ್ತೂಂದೆಡೆ ಗುಜರಿ ಪಟ್ಟಿಗೆ ಸೇರುವ ಬಸ್‌ಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಈ ಬಸ್‌ಗಳು ಸಾರಿಗೆ ಇಲಾಖೆ ಕೆಂಗಣ್ಣಿಗೂ ಗುರಿಯಾಗುತ್ತಿವೆ. ಮಿತಿ ಮೀರಿ ಹೊಗೆ ಉಗುಳುತ್ತಿದ್ದ ಸುಮಾರು 21 ಬಸ್‌ಗಳನ್ನು ಇತ್ತೀಚೆಗೆ ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದೂ ಆಗಿದೆ. 

ನಿರ್ವಹಣಾ ವೆಚ್ಚ ಹೆಚ್ಚು: 8 ಲಕ್ಷ ಕಿ.ಮೀ. ಪೂರೈಸಿದರೂ ಸಂಚರಿಸುತ್ತಿರುವ ಬಸ್‌ಗಳು ಪದೇ ಪದೇ ರಿಪೇರಿಗೆ ಬರುತ್ತಿವೆ. ಇದರಿಂದ ನಿರ್ವಹಣಾ ವೆಚ್ಚ ಹೊರೆಯಾಗುತ್ತಿದೆ. ಎಂಜಿನ್‌ ಕ್ಷಮತೆ ಇಲ್ಲದಿರುವುದು, ಹೆಚ್ಚು ಡೀಸೆಲ್‌ಗೆ ಕಡಿಮೆ ಮೈಲೇಜ್‌, ಬಿಡಿ ಭಾಗಗಳು ಹಾಳಾಗುವುದು ಸೇರಿದಂತೆ ವಿವಿಧ ರೀತಿಯಲ್ಲಿ ಇದರ ಹೊರೆ ಬೀಳುತ್ತಿದೆ. ಇಂತಿಷ್ಟೇ ನಿರ್ವಹಣಾ ವೆಚ್ಚ ಹೆಚ್ಚಳವಾಗಿದೆ ಎಂದು ನಿಖರವಾಗಿ ಹೇಳುವುದು ಕಷ್ಟ. 

ಒಂದೊಂದು ವಾಹನದ ಕಾರ್ಯಕ್ಷಮತೆ ಒಂದೊಂದು ರೀತಿ ಇರುತ್ತದೆ. ಆದರೆ, ಸಾಮಾನ್ಯವಾಗಿ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಬಸ್‌ಗಳ ನಿರ್ವಹಣೆಗೆ ತಗಲುವ ವೆಚ್ಚಕ್ಕಿಂತ ಅವಧಿ ಮುಗಿದು ಗುಜರಿಗೆ ಸೇರುವ ಬಸ್‌ಗಳಿಗೆ ತಗಲುವ ವೆಚ್ಚ ಒಂದೂವರೆಪಟ್ಟು ಹೆಚ್ಚಿರುತ್ತದೆ ಎಂದು ಬಿಎಂಟಿಸಿ ತಾಂತ್ರಿಕ ವಿಭಾಗದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Advertisement

ಕಾರ್ಯಕ್ಷಮತೆ ಕಳೆದುಕೊಂಡಿರುವ ಈ ಬಸ್‌ಗಳನ್ನು ಗುಜರಿಗೆ ಹಾಕಿದರೆ, ಬಸ್‌ಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ರಸ್ತೆಗಿಳಿದರೆ ವಾಯುಮಾಲಿನ್ಯ ಮತ್ತು ಆರ್ಥಿಕ ಹೊರೆ ಆಗುತ್ತದೆ. ಇದರಿಂದ ಸಾರಿಗೆ ಸಂಸ್ಥೆ ಇಕ್ಕಟ್ಟಿಗೆ ಸಿಲುಕಿದೆ. ಹಾಗೊಂದು ವೇಳೆ ಹೊಸ ಬಸ್‌ಗಳು ಸೇರ್ಪಡೆಗೊಂಡರೂ ಸದ್ಯಕ್ಕೆ ಈ ಹೊರೆ ಅರ್ಧದಷ್ಟು ತಗ್ಗಬಹುದು. ಮೊದಲ ಹಂತದಲ್ಲಿ 500 ಮಿಡಿ ಬಸ್‌ಗಳು ಹಾಗೂ 150 ವೋಲ್ವೊ ಸೇರಿದಂತೆ ಒಟ್ಟಾರೆ 650 ಬಸ್‌ಗಳು ಮಾತ್ರ ಬರಲಿವೆ.

ಮತ್ತೂಂದೆಡೆ ನೂರಾರು ಬಸ್‌ಗಳು ಈ 8 ಲಕ್ಷ ಕಿ.ಮೀ. ಆಸುಪಾಸಿನಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟಾರೆ ಬಿಎಂಟಿಸಿ ಖರ್ಚು- ವೆಚ್ಚದಲ್ಲಿ ನಿರ್ವಹಣಾ ವೆಚ್ಚದ ಪ್ರಮಾಣ ಸರಿಸುಮಾರು 130ರಿಂದ 140 ಕೋಟಿ ರೂ. ಆಗಿದೆ. ಅಂದರೆ ಒಟ್ಟಾರೆ ಸಂಸ್ಥೆಯ ಆದಾಯದಲ್ಲಿ ಇದರ ಪಾಲು ಶೇ. 7ರಿಂದ 8ರಷ್ಟು ಆಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಕ್ಯಾಬ್‌ ಚಾಲಕರ ಹೋರಾಟದಿಂದ ಆದಾಯ ಹೆಚ್ಚಳ! 
ಕಳೆದ ಒಂದು ವಾರದಿಂದ ಓಲಾ ಉಬರ್‌ ಟ್ಯಾಕ್ಸಿ ಚಾಲಕರು ಸೇವೆ ಸ್ಥಗಿತಗೊಳಿಸಿ ನಗರದಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ಬಿಎಂಟಿಸಿಗೆ ಆದಾಯ ಹರಿದು ಬಂದಿದೆ. ಆ್ಯಪ್‌ ಆಧಾರಿತ ಟ್ಯಾಕ್ಸಿಗಳ ಸಂಚಾರ ನಗರದಾದ್ಯಂತ ಕಡಿಮೆಯಾಗಿದೆ.

ಇದರಿಂದ ವೋಲ್ವೊ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಶೇ. 30ರಷ್ಟು ಏರಿಕೆ ಕಂಡುಬಂದಿದೆ.ಅದರಲ್ಲೂ ಹೆಚ್ಚಾಗಿ ವೈಟ್‌ಫೀಲ್ಡ್‌, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿರುವ ವೋಲ್ವೊ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ಆದಾಯ 21 ಲಕ್ಷ ರೂ.ಗೆ ಏರಿಕೆಯಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಏಕ್‌ರೂಪ್‌ ಕೌರ್‌ ತಿಳಿಸಿದ್ದಾರೆ. 

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next