Advertisement

ವಿದೇಶಿಗರ ಹೊತ್ತುತರುವವರಿಗಿಲ್ಲ ರಕ್ಷಣೆ?

10:33 AM Feb 15, 2020 | Suhan S |

ಬೆಂಗಳೂರು: ಒಂದೆಡೆ ಮಾರಕ ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದೆ. ಮತ್ತೂಂದೆಡೆ ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಕೂಡ ಅಷ್ಟೇ ವೇಗವಾಗಿ ನಡೆಯುತ್ತಿದೆ. ಆದರೆ, ನಿತ್ಯ ವಿದೇಶದಿಂದ ಬಂದಿಳಿಯುವ ಸಾವಿರಾರು ಪ್ರಯಾಣಿಕರನ್ನು ನಗರಕ್ಕೆ ಹೊತ್ತುತರುವ ಬಿಎಂಟಿಸಿ ಬಸ್‌ಗಳಲ್ಲಿ ಮಾತ್ರ ಈ ಕುರಿತು ಚಕಾರ ಇಲ್ಲ!

Advertisement

ನೂರಾರು ಚಾಲಕರು ಹಾಗೂ ನಿರ್ವಾಹಕರು ಪ್ರತಿ ದಿನ ಹತ್ತಾರು ಬಾರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿಬರುತ್ತಾರೆ. ವಿದೇಶದಿಂದ ವಿಮಾನಗಳಲ್ಲಿ ಬಂದಿಳಿಯುವ ಜನರ ಪೈಕಿ ಸಾವಿರಾರು ಪ್ರಯಾಣಿಕರು ನೇರವಾಗಿ ಬಿಎಂಟಿಸಿ ವೋಲ್ವೊ ಬಸ್‌ ಗಳನ್ನು ಏರುತ್ತಾರೆ. ಹಾಗಾಗಿ, ಮಾರಕ ಕೊರೊನಾ ವೈರಸ್‌ ಬಗ್ಗೆ ಅರಿವು ಮೂಡಿಸುವುದು ಅಥವಾ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಉಳಿದೆಲ್ಲ ಕಡೆಗಿಂತ ಇಲ್ಲಿ ಹೆಚ್ಚಿದೆ. ಆದರೆ, ಅಂತಹ ಯಾವುದೇ ವ್ಯವಸ್ಥೆ ಕೈಗೊಂಡಿಲ್ಲ. ಪರಿಣಾಮ ಈ ಮಾರ್ಗದ ಚಾಲನಾ ಸಿಬ್ಬಂದಿ ಅಳುಕಿನಲ್ಲಿ ಕಾರ್ಯನಿರ್ವಹಿಸುವಂತಾಗಿದೆ.

ಏನು ಮಾಡಬಹುದು?: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಆರೋಗ್ಯ ಇಲಾಖೆ ಸೂಚನೆಗಾಗಿ ಕಾಯದೆ ಸ್ವಯಂಪ್ರೇರಿತವಾಗಿ ಚಾಲಕರು ಮತ್ತು ನಿರ್ವಾಹಕರಿಗೆ ಮುಖಗವಸು (ಮಾಸ್ಕ್) ನೀಡಬಹುದು. ಇದರಿಂದ ಕಾಯಿಲೆ ಬಗ್ಗೆ ಗಂಭೀರತೆ ಗೊತ್ತಾಗುತ್ತದೆ. ಸಿಬ್ಬಂದಿ ಹಿತದೃಷ್ಟಿಯಿಂದ ಇದು ಸಂಸ್ಥೆಯ ಕರ್ತವ್ಯ ಕೂಡ ಆಗಿದೆ. ಅಷ್ಟೇ ಅಲ್ಲ, ಪ್ರಯಾಣಿಕರಿಗೆ ಕರಪತ್ರಗಳ ವಿತರಣೆ, ಸ್ಕ್ರೀನಿಂಗ್‌, ಫ‌ಲಕಗಳ ಅಳವಡಿಕೆ ಮೂಲಕ ಹಲವು ವಿಧದಲ್ಲಿ ಅರಿವು ಮೂಡಿಸುವ ಕ್ರಮಗಳನ್ನು ಕೈಗೆತ್ತಿಕೊಳ್ಳ ಬಹುದಿತ್ತು ಎಂದು ಸ್ವತಃ ಬಿಎಂಟಿಸಿ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸ್ಕ್ರೀನಿಂಗ್‌ ವ್ಯವಸ್ಥೆ ಇದೆ. ಕಾಯಿಲೆ ಲಕ್ಷಣಗಳು ಕಂಡುಬಂದರೆ, ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಾಗುವಂತೆ ಫ‌ಲಕಗಳನ್ನು ಅಳವಡಿಸಲಾಗಿದೆ. ಈ ಸಂಬಂಧ ಪ್ರತ್ಯೇಕ ಘಟಕವನ್ನೂ ತೆರೆಯಲಾಗಿದೆ. ಆದರೆ, ಚಾಲನಾ ಸಿಬ್ಬಂದಿಗೆ ಈ ವ್ಯವಸ್ಥೆ ಇಲ್ಲ. ಅಷ್ಟಕ್ಕೂ ಜ.21ರಿಂದ ಈವರೆಗೆ ಸುಮಾರು 15ರಿಂದ 18 ಸಾವಿರ ಪ್ರಯಾಣಿಕರನ್ನು ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ.  ಅದರಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ಕಂಡುಬಂದಿಲ್ಲ. ಬದಲಿಗೆ ಮನೆಗೆ ತೆರಳಿದ ನಂತರ ಸ್ವತಃ ಆ ಪ್ರಯಾಣಿಕರು ಸ್ವಯಂಪ್ರೇರಿತವಾಗಿ ಆಸ್ಪತ್ರೆಗೆ ತೆರಳಿ ತಪಾಸಣೆಗೊಳಗಾಗಿದ್ದಾರೆ.

ಮೆಟ್ರೋದಲ್ಲಿ ಜಾಗೃತಿ: ನಿತ್ಯ ಸುಮಾರು ನಾಲ್ಕು ಲಕ್ಷ ಜನ ಸಂಚರಿಸುವ “ನಮ್ಮ ಮೆಟ್ರೋ’ದಲ್ಲಿ ಕೊರೊನಾ ವೈರಸ್‌ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. “ಕಾಯಿಲೆ ಬಗ್ಗೆ ಆತಂಕ ಬೇಡ; ಎಚ್ಚರಿಕೆ ಬೇಕು, ಜ್ವರ ಮತ್ತಿತರ ಲಕ್ಷಣಗಳು ಕಂಡುಬಂದ ತಕ್ಷಣ ಹತ್ತಿರದ ಆಸ್ಪತ್ರೆಗೆ ತಕ್ಷಣ ಭೇಟಿ ನೀಡಿ’ ಎಂಬ ಜಾಗೃತಿ ಮೂಡಿಸುವ ಹಲವು ಸಾಲುಗಳು ಪ್ಲಾಟ್‌ಫಾರ್ಮ್ ನಲ್ಲಿನ ಡಿಜಿಟಲ್‌ ಫ‌ಲಕಗಳಲ್ಲಿ ಹಾದುಹೋಗುತ್ತವೆ. ಆದರೆ, 40 ಲಕ್ಷ ಜನ ಸಂಚರಿಸುವ ಬಸ್‌ಗಳಲ್ಲಿ ಇದರ ಉಲ್ಲೇಖ ಇಲ್ಲ. ಕೊನೇಪಕ್ಷ ವಿಮಾನ ನಿಲ್ದಾಣ ಸೇರಿದಂತೆ ಕೆಲ ನಿರ್ದಿಷ್ಟ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳಲ್ಲಾದರೂ ಈ ರೀತಿ ಅರಿವು ಮೂಡಿಸುವ ಅಗತ್ಯ ಇದೆ ಎಂದು ಘಟಕದ ವ್ಯವಸ್ಥಾಪಕರೊಬ್ಬರು ತಿಳಿಸುತ್ತಾರೆ.

Advertisement

500 ಸಿಬ್ಬಂದಿ; 15 ಸಾವಿರ ಪ್ರಯಾಣಿಕರು : ನಗರದಾದ್ಯಂತ ಒಟ್ಟು 763 ವೋಲ್ವೊ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದು, ಈ ಪೈಕಿ ವಿಮಾನ ನಿಲ್ದಾಣ ಮಾರ್ಗದಲ್ಲೇ 120ಕ್ಕೂ ಅಧಿಕ ಬಸ್‌ಗಳು ನಿತ್ಯ ಸುಮಾರು 820ಕ್ಕೂ ಹೆಚ್ಚು ಟ್ರಿಪ್‌ಗ್ಳಲ್ಲಿ ಸಂಚರಿಸುತ್ತವೆ. ಚಾಲಕರು ಮತ್ತು ನಿರ್ವಾಹಕರು ಸೇರಿ 500 ಸಿಬ್ಬಂದಿ ವಿವಿಧ ಪಾಳಿಗಳಲ್ಲಿ ವಿಮಾನ ನಿಲ್ದಾಣಕ್ಕೆ ಹೋಗಿಬರುತ್ತಾರೆ. ಸುಮಾರು 15 ಸಾವಿರ ಪ್ರಯಾಣಿಕರು ಇದರಲ್ಲಿ ಸಂಚರಿಸುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮೆಜೆಸ್ಟಿಕ್‌, ಎಚ್‌ ಎಸ್‌ಆರ್‌ ಲೇಔಟ್‌, ಬಿಟಿಎಂ ಲೇಔಟ್‌, ಎಲೆಕ್ಟ್ರಾನಿಕ್‌ ಸಿಟಿ, ಕೋರಮಂಗಲ, ಮಾರತ್‌ಹಳ್ಳಿ, ಕನಕಪುರ ರಸ್ತೆ ಸೇರಿ ವಿವಿಧೆಡೆಯಿಂದ ವಿಮಾನ ನಿಲ್ದಾಣಕ್ಕೆ ವಾಯುವಜ್ರ ವೋಲ್ವೊ ಬಸ್‌ಗಳು ಸಂಚರಿಸುತ್ತವೆ.

 

ವಿಜಯಕುಮಾರ್ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next