Advertisement

ಬಿಎಂಟಿಸಿ ಬಸ್‌ಗೆ ಬೆಂಕಿ: 3‌ ಸಾವು

06:37 AM Feb 12, 2019 | Team Udayavani |

ರಾಮನಗರ: ಬಿಎಂಟಿಸಿ ಬಸ್‌ ಮತ್ತು ಬೈಕ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಎರಡು ವಾಹನಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ದೇವಿಗೆರೆ ಬಳಿ ಸಂಭವಿಸಿದೆ.

Advertisement

ಬೆಂಗಳೂರು ನಗರದ ಮಡಿವಾಳದ ಅವಿನಾಶ್‌, ಉತ್ತರಹಳ್ಳಿಯ ಪ್ರದೀಪ್‌, ರಾಮನಗರ ಜಿಲ್ಲೆ ಕನಕಪುರದ ಬಸವರಾಜ್‌ ಮೃತಪಟ್ಟ ಯುವಕರು. ಸೋಮವಾರ ಮಾರ್ಕೆಟ್‌ನಿಂದ ಕಗ್ಗಲೀಪುರಕ್ಕೆ ಬಿಎಂಟಿಸಿ ಬಸ್‌ ಸಂಚರಿಸುತ್ತಿತ್ತು.

ಬೆಂಗಳೂರು ಹೊರವಲಯದ ಕುಂಬಳಗೂಡು- ಕಗ್ಗಲಿಪುರ ಮಾರ್ಗ ಮಧ್ಯದಲ್ಲಿ ದೇವಿಗೆರೆ ಬಳಿ ಬಸ್ಸು ಬಂದಾಗ ಕುಂಬಳಗೂಡು ಕಡೆಯಿಂದ ಕಗ್ಗಲಿಪುರದತ್ತ ಬೈಕ್‌ನಲ್ಲಿ ಹೊರಟಿದ್ದ ಯುವಕರು, ಲಾರಿಯೊಂದನ್ನು ಹಿಂದಿಕ್ಕುವ ಭರದಲ್ಲಿ ಎದುರಿಗೆ ಬರುತ್ತಿದ್ದ ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದ್ದಾರೆ.

ಡಿಕ್ಕಿ ರಭಸಕ್ಕೆ ಬೈಕ್‌ನಲ್ಲಿದ್ದ ಮೂವರೂ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ವೇಳೆ ಯುವಕರಿದ್ದ ಬೈಕ್‌, ಬಿಎಂಟಿಸಿ ಬಸ್ಸಿನ ಅಡಿಗೆ ಹೋಗಿದೆ. ಈ ವೇಳೆ ಪೆಟ್ರೋಲ್‌ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಮೊದಲು ಬೈಕ್‌ಗೆ ತಗುಲಿದ ಬೆಂಕಿ ಬಸ್ಸಿಗೂ ಆವರಿಸಿದೆ.

ಬಿಎಂಟಿಸಿ ಬಸ್‌ಗೆ ಬೆಂಕಿ ತಗುಲುತ್ತಿದ್ದಂತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ಬಸ್ಸಿನಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಎರಡು ವಾಹನಗಳೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ, ಬೈಕ್‌ ಮತ್ತು ಬಸ್ಸು ಸುಟ್ಟು ಕರಕಲಾಗಿವೆ. 

Advertisement

ಯುವಕರ ಬ್ಯಾಗ್‌ನಲ್ಲಿ ಮಾರಕಾಸ್ತ್ರ: ಅಪಘಾತದಲ್ಲಿ ಸಾವನ್ನಪ್ಪಿದ ಮೂವರು ಯುವಕರ ಬಳಿ ಇದ್ದ ಬ್ಯಾಗ್‌ನಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಕಗ್ಗಲೀಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 

ಅತಿಯಾದ ವೇಗವೇ ಅಪಘಾತಕ್ಕೆ ಕಾರಣ: ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಯುವಕರು ಅತಿ ವೇಗವಾಗಿ ಬೈಕ್‌ ಓಡಿಸಿಕೊಂಡು ಬಂದಿದ್ದೇ ಅಪಘಾತಕ್ಕೆ ಕಾರಣ ಎಂದು ಬಿಎಂಟಿಸಿ ತಿಳಿಸಿದೆ. ಕಗ್ಗಲಿಪುರದ ದೇವಗೆರೆ ಕ್ರಾಸ್‌ ಬಳಿ ಸಂಭವಿಸಿದ ಬಸ್‌ ಅಪಘಾತದ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸ್ಥೆ, ವೇಗವಾಗಿ ಬಂದ ಬೈಕ್‌, ಎದುರಿಗೆ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಮೂವರೂ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ರಕರಣದ ಬೆನ್ನಲ್ಲೇ ಸಂಸ್ಥೆಯ ಪಶ್ಚಿಮ ವಲಯದ ಅಧಿಕಾರಿಗಳಾದ ವಿಭಾಗೀಯ ನಿಯಂತ್ರಣಾಧಿಕಾರಿ, ಸಂಚಾರಾಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಲಾರಿ ಹಿಂದಿಕ್ಕುವ ಅವಸರದಲ್ಲಿ ಈ ಅಪಘಾತ ಸಂಭವಿಸಿದೆ. ಕೂಲಂಕಷವಾಗಿ ಪರಿಶೀಲಿಸಿ ಈ ತಂಡವು ಪ್ರಕರಣದ ವರದಿ ಸಲ್ಲಿಸಲಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next