Advertisement
ಸ್ಮಾರ್ಟ್ ಕಾರ್ಡ್‌ಗಳನ್ನು ನಗರದ ವಿದ್ಯಾರ್ಥಿಗಳ ಮನೆ ಬಾಗಿಲಿಗೇ ತಲುಪಿಸಲು ಕಳೆದ ಬಾರಿ ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಪೋಸ್ಟ್‌ಮನ್ ಮನೆಗೆ ಹೋದಾಗ, ಅಲ್ಲಿ ಯಾರೂ ಇರುತ್ತಿರಲಿಲ್ಲ. ಕೆಲವೊಮ್ಮೆ ವಿಳಾಸವೇ ತಪ್ಪಾಗಿರುತ್ತಿತ್ತು.
Related Articles
Advertisement
ಅದರಂತೆ 2018ರ ಶೈಕ್ಷಣಕ ವರ್ಷದಲ್ಲಿ ಮೂರೂವರೆ ಲಕ್ಷ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಕಾರ್ಡ್ ವಿತರಿಸಲಾಗಿದೆ (ನಿರಂತರ ಆರು ತಿಂಗಳು ವಿತರಣಾ ಪ್ರಕ್ರಿಯೆ ನಡೆಯಿತು!). ಇನ್ನೂ ಒಂದರಿಂದ ಒಂದೂವರೆ ಲಕ್ಷ ವಿದ್ಯಾರ್ಥಿಗಳಿಗೆ ಈ ಕಾರ್ಡ್‌ಗಳು ತಲುಪಿಲ್ಲ. ಹೊಸದಾಗಿ ಪಡೆಯುವವರ ಜತೆಗೆ ಈಗಾಗಲೇ ಕಾರ್ಡ್ ಹೊಂದಿದವರು ಈ ವರ್ಷ ನವೀಕರಿಸಬೇಕು.
ಮೇ 1ರಿಂದ ಈ ಪ್ರಕ್ರಿಯೆಗೆ ಬಿಎಂಟಿಸಿ ಚಾಲನೆ ನೀಡಲಿದ್ದು, ಇದಕ್ಕಾಗಿ 50ಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎನ್.ವಿ. ಪ್ರಸಾದ್ ತಿಳಿಸಿದರು.
ನವೀಕರಣಕ್ಕೆ 2-3 ನಿಮಿಷ ಬೇಕಾಗುತ್ತದೆ. ಹೊಸದಾಗಿ ವಿತರಿಸಲು 10 ನಿಮಿಷ ಸಮಯ ಹಿಡಿಯುತ್ತದೆ. ಸ್ಮಾರ್ಟ್‌ಕಾರ್ಡ್ ವಿತರಣೆ ಪ್ರಕ್ರಿಯೆ ತ್ವರಿತವಾಗಿ ನಡೆಯಲು “ಬೆಂಗಳೂರು ಒನ್’ ನೆರವು ಕೋರಲಾಯಿತು. ಪೂರಕ ಸ್ಪಂದನೆ ಸಿಗಲಿಲ್ಲ. ಈಗ ಅನಿವಾರ್ಯವಾಗಿ ಹೆಚ್ಚು ಕೌಂಟರ್‌ಗಳನ್ನು ತೆರೆದು ವಿತರಿಸಬೇಕಾಗಿದೆ ಎಂದು ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.
ಸ್ಮಾರ್ಟ್‌ಕಾರ್ಡ್ ಪಡೆಯುವುದು ಹೀಗೆ: ವಿದ್ಯಾರ್ಥಿಗಳು ಮೊದಲು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಅರ್ಜಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಅದನ್ನು ಭರ್ತಿ ಮಾಡಿ, ಆನ್‌ಲೈನ್‌ನಲ್ಲೇ ಸಲ್ಲಿಸಬೇಕು. ಆಗ ವಿದ್ಯಾರ್ಥಿಗೆ ಅರ್ಜಿ ನಂಬರ್ ಸಹಿತ ಸ್ವೀಕೃತಿ ಬಗ್ಗೆ ಸಂದೇಶ ಬರುತ್ತದೆ. ತದನಂತರ ಆ ಅರ್ಜಿಯನ್ನು ಬಿಎಂಟಿಸಿಯು ಸಂಬಂಧಿಸಿದ ಶಾಲೆ ಅಥವಾ ಕಾಲೇಜಿಗೆ ಕಳುಹಿಸುತ್ತದೆ.
ಅಲ್ಲಿಂದ ಅನುಮೋದನೆಗೊಂಡು ಬಂದ ಮೇಲೆ ವಿದ್ಯಾರ್ಥಿಗೆ ಅಪ್‌ಡೇಟ್ ಮಾಡಲಾಗುವುದು. ವಿದ್ಯಾರ್ಥಿಯು ಬಿಎಂಟಿಸಿಯ ಹತ್ತಿರದ ಕೌಂಟರ್‌ಗೆ ಬಂದು ಸ್ಥಳದಲ್ಲೇ ಫೋಟೋ ತೆಗೆಸಿಕೊಂಡು ಸ್ಮಾರ್ಟ್‌ಕಾರ್ಡ್ ಪಡೆಯಬಹುದು. ನವೀಕರಣ ಕೂಡ ನೇರವಾಗಿ ಕೌಂಟರ್‌ನಲ್ಲಿಯೇ ಅಪ್‌ಡೇಟ್ ಮಾಡಿಕೊಳ್ಳಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸ್ಮಾರ್ಟ್‌ಕಾರ್ಡ್‌ಗೂ ಟ್ರೈಮ್ಯಾಕ್ಸ್ ಬಿಸಿ!: ಈ ಮಧ್ಯೆ ಸಂಸ್ಥೆಯ “ಚತುರ ಸಾರಿಗೆ ವ್ಯವಸ್ಥೆ’ (ಐಟಿಎಸ್) ಸೇವಾ ನಿರ್ವಹಣೆಯನ್ನು ಗುತ್ತಿಗೆ ಪಡೆದ ಟ್ರೈಮ್ಯಾಕ್ಸ್ ಕಂಪೆನಿ ಆರ್ಥಿಕ ದಿವಾಳಿಯಾಗಿದ್ದು, ಈಗಿರುವ ಐಟಿ ವ್ಯವಸ್ಥೆಯನ್ನು ಅಪ್‌ಗೈಡ್ ಮಾಡುವ ಕಾರ್ಯಕ್ಕೂ ಹಿನ್ನಡೆ ಆಗಿದೆ. ಅಷ್ಟೇ ಅಲ್ಲ, ಸ್ಮಾರ್ಟ್‌ಕಾರ್ಡ್‌ಗಳನ್ನು ಊರ್ಜಿತಗೊಳಿಸಬೇಕಾದ ಇಟಿಎಂಗಳ ಕೊರತೆ ಇದೆ. ನಿಧಾನವಾಗಿ ಇಟಿಎಂಗಳನ್ನು ಆ್ಯಂಡ್ರಾಯ್ಡಗೆ ಪರಿವರ್ತಿಸುವ ಕೆಲಸ ನಡೆದಿದೆ.
* ವಿಜಯಕುಮಾರ್ ಚಂದರಗಿ