ಮುಂಬೈ:ದೇಶದ ಅತೀ ಶ್ರೀಮಂತ ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಸೇರಿದಂತೆ 9 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಗುರುವಾರ ಬಹಿರಂಗವಾಗಲಿದೆ. ಬಿಎಂಸಿ ಚುನಾವಣೆ ಬಿಜೆಪಿ ಮತ್ತು ಶಿವಸೇನೆ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಏತನ್ಮಧ್ಯೆ ಬಿಜೆಪಿ ಮತ್ತು ಶಿವಸೇನೆ ಗೆಲುವಿನ ಬಗ್ಗೆ ಸುಮಾರು 3 ಸಾವಿರ ಕೋಟಿ ರೂಪಾಯಿ ಬೆಟ್ಟಿಂಗ್ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಡಿಎನ್ಎ ವರದಿ ಪ್ರಕಾರ, ಅಕ್ರಮ ಬೆಟ್ಟಿಂಗ್ ಜಾಲ ಈಗಾಗಲೇ ಬಿಎಂಸಿ ಚುನಾವಣೆಯ ಫಲಿತಾಂಶದ ಮೇಲೆ 3 ಸಾವಿರ ಕೋಟಿ ರೂಪಾಯಿ ಬೆಟ್ಟಿಂಗ್ ದಂಧೆ ನಡೆಸಿದೆ ಎಂದು ವಿವರಿಸಿದೆ.
ಈಗಾಗಲೇ ಬಿಎಂಸಿ ಚುನಾವಣೆ ಸಂಬಂಧಿಸಿದಂತೆ ಹಲವಾರು ಚುನಾವಣೋತ್ತರ ಸಮೀಕ್ಷೆ ಬಹಿರಂಗವಾಗಿದೆ. ಬಿಜೆಪಿ ಮತ್ತು ಶಿವಸೇನೆ ನಡುವೆ ಜಿದ್ದಾಜಿದ್ದಿನ ಹೋರಾಟ ಇದ್ದಿರುವುದಾಗಿ ಸಮೀಕ್ಷೆಗಳು ಹೇಳಿವೆ.
ನೂತನ ಸಮೀಕ್ಷೆ ಪ್ರಕಾರ, 227 ಸದಸ್ಯ ಬಲದ ಬಿಎಂಸಿಯಲ್ಲಿ ಬಿಜೆಪಿ 80ರಿಂದ 88 ಸ್ಥಾನ ಪಡೆಯಲಿದ್ದು, ಶಿವಸೇನೆ 86ರಿಂದ 96 ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಕಾಂಗ್ರೆಸ್ ಪಕ್ಷ 30ರಿಂದ 34 ಸ್ಥಾನ ಪಡೆಯಲಿದೆ.
ಎನ್ ಸಿಪಿ 3ರಿಂದ 6 ಹಾಗೂ ಎಂಎನ್ ಎಸ್ 5ರಿಂದ 7 ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಆಕ್ಸಿಸ್ ಮತ್ತು ಮೈ ಇಂಡಿಯಾ ನಡೆಸಿದ ಸಮೀಕ್ಷೆ ತಿಳಿಸಿದೆ.
ಶಿವಸೇನೆ ಮೇಲೆ ಭರ್ಜರಿ ಬೆಟ್ಟಿಂಗ್!
ಬೆಟ್ಟಿಂಗ್ ದಂಧೆಯ ಬುಕ್ಕಿಗಳು ಶಿವಸೇನೆಯೇ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿಯುವ ಮೂಲಕ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎಂದು ವರದಿ ವಿವರಿಸಿದೆ.