Advertisement
ಇದರ ಮುಂದುವರಿದ ಭಾಗವಾಗಿ ರಾಮನಗರದ ರಾಮದೇವರ ಬೆಟ್ಟದಲ್ಲಿ ಅಯೋಧ್ಯೆ ಮಾದರಿಯಲ್ಲಿ ದಕ್ಷಿಣಾಯೋಧ್ಯೆ ನಿರ್ಮಿಸುವ ಪ್ರಸ್ತಾವನೆ ಹರಿಬಿಟ್ಟು ಹಿಂದೂ ಮತದಾರರ ಸೆಳೆಯಲು ಪ್ರಯತ್ನಿಸಿತ್ತು. ಇನ್ನು ಮುಂದುವರಿದು ಇದೀಗ ದೇವಾಲಯ ನಿರ್ಮಾಣಕ್ಕೆ 40 ಲಕ್ಷ ರೂ.ಹಣ ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ಬ್ಲೂಪ್ರಿಂಟ್(ನೀಲನಕ್ಷೆ) ಬಿಡುಗಡೆ ಮಾಡಿದ್ದು ಕುತೂಹಲ ಹೆಚ್ಚಿಸಿದೆ.
Related Articles
Advertisement
ಗುದ್ದಲಿಪೂಜೆಗೆ ಸಿದ್ಧತೆ: ಇದೀಗ ಬ್ಲೂಪ್ರಿಂಟ್ ರೆಡಿ ಮಾಡಲಾಗಿದ್ದು, ಗುದ್ದಲಿ ಪೂಜೆಗೆ ಸಿದ್ಧತೆ ನಡೆಸಿದ್ದಾರೆ. ಚುನಾವಣೆಯ ದಿನಾಂಕ ಪ್ರಕಟಿಸಿ ನೀತಿ ಸಂಹಿತೆ ಘೋಷಣೆಗೂ ಮುನ್ನವೇ ರಾಮಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕೆಂದು ಬಿಜೆಪಿ ನಾಯಕರು ಉತ್ಸಾಹ ತೋರುತ್ತಿದ್ದಾರೆ. ಒಟ್ಟಾರೆ ಏನೇ ಇರಲಿ, ಕೊನೆ ಕ್ಷಣದಲ್ಲಿ ಹಿಂದೂ ಮತ ಕ್ರೂಡಿಕರಣಕ್ಕೆ ಮುಂದಾದ ಬಿಜೆಪಿ ರಾಮಜಪ ಮಾಡುವುದನ್ನು ಮರೆಯದೆ ಜೆಡಿಎಸ್ ಭದ್ರಕೋಟೆ ಬೇಧಿಸಲು ತಂತ್ರ ರೂಪಿಸಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಫಲ ನೀಡಲಿದೆ ಕಾದು ನೋಡಬೇಕಿದೆ.
ರಾಮನಗರದ ಅಭಿವೃದ್ಧಿಗೆ ರಾಮಮಂದಿರ ಅಗತ್ಯ: ರಾಮಮಂದಿರ ನಿರ್ಮಾಣ ನಮ್ಮ ಕನಸು ಅದರಲ್ಲೂ ದಕ್ಷಿಣಾಯೋಧ್ಯೆ ನಿರ್ಮಿಸಿ ಶ್ರೀರಾಮನ ಆಶೀರ್ವಾದ ಪಡೆಯಬೇಕು. ರಾಮನಗರದ ಅಭಿವೃದ್ಧಿಗೆ ರಾಮಮಂದಿರ ಅಗತ್ಯವಾಗಿದೆ. ರಾಮಮಂದಿರ ಕಟ್ಟೋದು, ರಾಮನ ಸೇವೆ. ರಾಮನ ಸೇವೆಗೆ ಸಮಯದ ಗಡುವು ಇಲ್ಲ. ರಾಮಮಂದಿರ ನಿರ್ಮಾಣಕ್ಕೆ ಅಂದಾಜು 120 ಕೋಟಿ ರೂ. ವೆಚ್ಚ ಆಗಬಹುದು. ಮುಂದೆಯೂ ನಾವೇ ಅಧಿಕಾರಕ್ಕೆ ಬರೋದು. ರಾಮಮಂದಿರ ನಿರ್ಮಾಣ ಮಾಡಿ ಮುಗಿಸುತ್ತೇವೆ. ಶಿಲಾನ್ಯಾಸಕ್ಕೆ ಇನ್ನೂ ದಿನಾಂಕ ನಿಗದಿ ಮಾಡಿಲ್ಲ, ಕೆಲ ಇಲಾಖೆಗಳಲ್ಲಿ ಕಾನೂನಾತ್ಮಕವಾಗಿ ಅನುಮತಿ ಪಡೆದು ಶಿಲಾನ್ಯಾಸ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವತ್ಥ್ನಾರಾಯಣ ತಿಳಿಸಿದ್ದಾರೆ.
ಜಿಲ್ಲೆಯ ಹಿಂದೂ ಮತ ಸೆಳೆಯಲು ಬಿಜೆಪಿ ಯತ್ನ : ಇತ್ತೀಚೆಗೆ ಜಿಲ್ಲಾ ಸಚಿವರ ನೇತೃತ್ವದಲ್ಲಿ ರಾಮನಗರದ ಭಕ್ತರ ಗುಂಪು ಅಯೋಧ್ಯೆಗೆ ಭೇಟಿ ನೀಡಿತ್ತು. ಆ ಸಂದರ್ಭದಲ್ಲಿ ಅಲ್ಲಿನ ರಾಮಮಂದಿರಕ್ಕೆ ಬೆಳ್ಳಿಯ ಇಟ್ಟಿಗೆ, ರೇಷ್ಮೆ ಸೀರೆ ಮತ್ತು ವಸ್ತ್ರವನ್ನು ಕಾಣಿಕೆಯಾಗಿ ಅರ್ಪಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಇದಾದ ಬಳಿಕ ಒಂದಲ್ಲಾ ಒಂದು ತಿರುವು ಪಡೆದುಕೊಳ್ಳುತ್ತಿದ್ದ ರಾಮಮಂದಿರ, ದಕ್ಷಿಣಾಯೋಧ್ಯೆಯನ್ನಾಗಿಸುವ ಕನಸಿಗೆ ಇದೀಗ ಜೀವ ಬಂದಿದೆ. ಹಣ ಬಿಡುಗಡೆ ಮಾಡುವ ಮೂಲಕ ಬಿಜೆಪಿ ಸರ್ಕಾರ ಹಿಂದೂ ಮತಗಳತ್ತ ಮತ್ತೂಂದು ಅಸ್ತ್ರ ಪ್ರಯೋಗಿಸಿದೆ.
ಕಮಿಟಿ ರದ್ದು; ನೂತನ ಕಮಿಟಿಯಲ್ಲಿ ಯಾರ್ಯಾರು? : ಈಗಾಗಲೆ ರಾಮದೇವರ ಬೆಟ್ಟದಲ್ಲಿ ದಕ್ಷಿಣಾಯೋಧ್ಯೆ ನಿರ್ಮಿಸಬೇಕೆಂದು ಚಿಂತಿಸುವ ಮೂಲಕ ಸರ್ವ ಪಕ್ಷದ ಮುಖಂಡರುಗಳನ್ನೊಳಗೊಂಡ ಕಮಿಟಿಯೊಂದನ್ನು ರಚಿಸಲಾಗಿತ್ತು. ಆದರೆ, ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರ ಪ್ರತಿಭಟನೆ ಒತ್ತಡದ ಹಿನ್ನೆಲೆಯಲ್ಲಿ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಅದನ್ನು ರದ್ದುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದೀಗ ದೇವಾಲಯ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದು, ಹೊಸ ಕಮಿಟಿ ರಚನೆಯಾಗಲಿದೆಯೇ ಅಥವಾ ಸರ್ಕಾರ ಜೊತೆಗೆ ಅಧಿಕಾರಿಗಳ ನೇತೃತ್ವದಲ್ಲೇ ನಡೆಯಲಿದೆಯೇ ಎಂಬ ಗುಸುಗುಸು ಶುರುವಾಗಿದೆ.
-ಎಂ.ಎಚ್. ಪ್ರಕಾಶ, ರಾಮನಗರ