Advertisement

ಸೌಲಭ್ಯ ವಿತರಣಾ ಸಮಾವೇಶಕ್ಕೆ ನೀಲನಕ್ಷೆ

01:28 PM Sep 23, 2017 | Team Udayavani |

ಧಾರವಾಡ: ಕಳೆದ ನಾಲ್ಕು ವರ್ಷಗಳಲ್ಲಿ ಸರಕಾರ ಅನುಷ್ಠಾನಗೊಳಿಸಿದ ಜನಪರ ಕಾರ್ಯಕ್ರಮಗಳ ಕುರಿತು ಜನಸಾಮಾನ್ಯರಿಗೆ ಮಾಹಿತಿ ನೀಡುವ ಉದ್ದೇಶದಿಂದ ಅ. 23ರಂದು ಧಾರವಾಡದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಬೆಳಗಾವಿ ವಿಭಾಗಮಟ್ಟದ ಸೌಲಭ್ಯ ವಿತರಣಾ ಸಮಾವೇಶದ ಯಶಸ್ಸಿಗೆ ಎಲ್ಲ ಜಿಲ್ಲೆಗಳ ಅಧಿಕಾರಿಗಳಿಗೆ ಶೀಘ್ರದಲ್ಲಿಯೇ ಸ್ಪಷ್ಟ ಚಿತ್ರಣ ನೀಡಲಾಗುವುದು ಎಂದು ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು. 

Advertisement

ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸರಕಾರಿ ಯೋಜನೆಗಳನ್ನು ಬಿಂಬಿಸುವ ಆಕರ್ಷಕ ಕಲಾಪ್ರದರ್ಶನ, ಮಳಿಗೆಗಳು, ಕಿರು ಪ್ರಕಟಣೆಗಳು, ಜಾಹೀರಾತು, ವಾಹಿನಿಗಳಲ್ಲಿ ನೇರ ಪ್ರಸಾರದ ವ್ಯವಸ್ಥೆಗಳನ್ನು ವಾರ್ತಾ ಮತ್ತು  ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರು ಮಾಡಲಿದ್ದಾರೆ.

ಸಮಾವೇಶಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಕರೆತರಲು ಪ್ರತಿ ತಾಲೂಕಿಗೆ ಒಬ್ಬರು ನೋಡಲ್‌ ಅ ಧಿಕಾರಿಯನ್ನು ನೇಮಿಸಬೇಕು ಎಂದು ಹೇಳಿದರು. ವಿವಿಧ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಎಲ್ಲ ಜಿಲ್ಲೆಗಳು ಸಿದ್ಧಪಡಿಸಿ, ಸಮಾವೇಶಕ್ಕೆ ಅರ್ಹ ಫಲಾನುಭವಿಗಳನ್ನು ಸುರಕ್ಷಿತವಾಗಿ ಕರೆತರುವ ಕುರಿತು ಸಮರ್ಪಕ ಯೋಜನೆ ಮಾಡಿಕೊಳ್ಳಬೇಕು. 

ಬೆಳಗಾವಿ ವಿಭಾಗದ ಎಲ್ಲ 49 ತಾಲೂಕುಗಳು ಮತ್ತು 57 ವಿಧಾನಸಭಾ ಕ್ಷೇತ್ರಗಳಿಂದ ವಿವಿಧ ಯೋಜನೆಗಳಿಗೆ ಸೇರಿದ ಫಲಾನುಭವಿಗಳನ್ನು ಗುರುತಿಸಬೇಕು. ಅವರಲ್ಲಿ ಆಯ್ದ ಫಲಾನುಭವಿಗಳಿಗೆ ಮಾತ್ರ ಮುಖ್ಯಮಂತ್ರಿಗಳು ಸಾಂಕೇತಿಕ ಸೌಲಭ್ಯಗಳನ್ನು ವಿತರಿಸುವರು. ಉಳಿದ ಎಲ್ಲ ಫಲಾನುಭವಿಗಳಿಗೆ ಅ.28ರೊಳಗಾಗಿ ಆಯಾ ವಿಧಾನಸಭಾ ಕ್ಷೇತ್ರಗಳ ಶಾಸಕರ ಸಮ್ಮುಖದಲ್ಲಿ ಸೌಲಭ್ಯಗಳ ವಿತರಣೆಯಾಗಬೇಕು ಎಂದರು. 

ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಇತ್ತೀಚೆಗೆ ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ನಾಮಕರಣ ಮಾಡಿದ ಸಮಾರಂಭ ಮತ್ತು ಕೊಪ್ಪಳದಲ್ಲಿ ಜರುಗಿದ ಸೌಲಭ್ಯ ವಿತರಣಾ ಸಮಾವೇಶದ ಸಂಘಟನೆಯ ಅನುಭವಗಳನ್ನು ಬಳಸಿಕೊಂಡು ಧಾರವಾಡ ಸಮಾವೇಶವನ್ನು ರೂಪಿಸಬೇಕು ಎಂದರು. 

Advertisement

ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಸಮಾವೇಶಕ್ಕೆ ಸ್ಥಳೀಯ ಧಾರವಾಡ ಜಿಲ್ಲೆಯಿಂದ ಹೆಚ್ಚು ಜನರು ಆಗಮಿಸುವರು. ಅ.22ರಂದು ಬೆಳಗ್ಗೆ ಪ್ರದರ್ಶನ ಮಳಿಗೆ ಉದ್ಘಾಟಿಸಿ, ಬೀದಿ ನಾಟಕ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅ.23ರಂದು ಮುಖ್ಯ ಕಾರ್ಯಕ್ರಮದಲ್ಲಿ ಆಹಾರ, ಕುಡಿವ ನೀರು ಮತ್ತುಸಾರಿಗೆ ಸಂಪರ್ಕದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಹೆಚ್ಚು ಒತ್ತು ನೀಡಬೇಕು ಎಂದರು. 

ಸಚಿವರಾದ ಉಮಾಶ್ರೀ, ರುದ್ರಪ್ಪ ಲಮಾಣಿ, ಆರ್‌.ಬಿ.ತಿಮ್ಮಾಪುರ, ಶಾಸಕ ಬಿ.ಆರ್‌.ಯಾವಗಲ್‌, ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಡಾ| ಪಿ.ಎಸ್‌.ಹರ್ಷ ಸೇರಿದಂತೆ ಬೆಳಗಾವಿ ವಿಭಾಗದ ಏಳು ಜಿಲ್ಲೆಗಳ ಜಿಲ್ಲಾ  ಅಧಿಕಾರಿಗಳು, ಜಿಪಂ ಸಿಇಒ ಅ ಧಿಕಾರಿಗಳು ಸಭೆಯಲ್ಲಿ ಇದ್ದರು. ಡಾ| ಎಸ್‌.ಬಿ. ಬೊಮ್ಮನಹಳ್ಳಿ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next