ಹೊಸದಿಲ್ಲಿ: ಭಾರತ ಸೇರಿದಂತೆ ವಿಶ್ವಾದ್ಯಂತ ಹಲವಾರು ಮಂದಿಯ ಪ್ರಾಣ ಕಿತ್ತುಕೊಂಡ ಬ್ಲೂವೇಲ್ ಗೇಮ್ಸ್ ಇನ್ನೂ ಅಸ್ತಿತ್ವದಲ್ಲಿದೆ. ಹೀಗೆಂದು ಹೊಸದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಡೆಸಿದ ಅಧ್ಯಯನದಲ್ಲಿ ಕಂಡುಬಂದಿದೆ. ಅನೇಕ ಪ್ರಕರಣಗಳಲ್ಲಿ ಅದು ಜೀವಂತವಾಗಿ ಇರುವ ಬಗ್ಗೆ ಅನುಮಾನ ಇರುವುದಾಗಿ ಸಂಸ್ಥೆ ಪ್ರತಿಪಾದಿಸಿದೆ ಎಂದು “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಏಮ್ಸ್ ವೈದ್ಯರು ಪ್ರಕಾರ ವಿದ್ಯಾರ್ಥಿಯೊಬ್ಬ ಕಳೆದ ವರ್ಷ ತಂದೆಯ ಜೊತೆ ನಡವಳಿಕೆಗಳಿಗೆ ಸಂಬಂಧಿಸಿದ ಚಟ ನಿಗ್ರಹ ಆಸ್ಪತ್ರೆಗೆ ಆಗಮಿಸಿದ್ದ. ಆತನಿಗೆ ಆನ್‌ಲೈನ್ ಮೂಲಕ ಬ್ಲೂವೇಲ್ ಗೇಮ್ ಅನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಿಕ್ಕಿತ್ತು.
ವಿದ್ಯಾರ್ಥಿ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಗೇಮ್‌ಗೆ ಸಂಬಂಧಿಸಿದ “ಬಿಗ್ ಫಿಶ್’ ಹೆಸರಿನ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದ. ಆತನಿಗೆ ಪ್ರತಿದಿನ ಆ್ಯಪ್ ಮೂಲಕವೇ ಸವಾಲು ನೀಡಲಾಗುತ್ತಿತ್ತು. ಮೂರನೇ ದಿನದಲ್ಲಿ “ಎಫ್15′ ಎಂದು ದೇಹದ ಮೇಲೆ ಸೂಚಿಯಂಥ ವಸ್ತುವಿನಿಂದ ಕೊರೆದುಕೊಳ್ಳಲು ಸೂಚಿಸಲಾಗಿತ್ತು.
ನಂತರದ ಹಂತಗಳಲ್ಲಿ ಪ್ರಾಣ ಕಳೆದುಕೊಳ್ಳುವಂತೆ ಸೂಚಿಸಲಾಗಿತ್ತು. ಅದರಂತೆ ಆತ ನಡೆದುಕೊಂಡಿದ್ದ. ಮೊಬೈಲಲ್ಲಿರುವ ಆ್ಯಪ್ ಡಿಲೀಟ್ ಮಾಡಿದ್ದರಿಂದ ಮಗ ಬದುಕುಳಿದ ಎಂದು ತಂದೆ ವೈದ್ಯರಿಗೆ ತಿಳಿಸಿದ್ದಾರೆ. ಹಾಲಿ ದಿನಮಾನದ ಮಕ್ಕಳು ಇಂಟರ್‌ನೆಟ್ ಮೂಲಕ ಶೀಘ್ರವಾಗಿ ವಿಕೃತ ಆಟಗಳಿಗೆ ಬಲಿಯಾಗುತ್ತಿರುವುದಾಗಿ ಹೇಳಿದೆ.