Advertisement
ಕಳೆದ ನವೆಂಬರ್ ತಿಂಗಳಿನಿಂದ ಕುರಿಗಳಿಗೆ ಅಂಟಿಕೊಂಡಿರುವ ನೀಲಿ ನಾಲಿಗೆ ರೋಗ ಜಿಲ್ಲೆಯಲ್ಲಿ ನಿತ್ಯ 40ರಿಂದ 50 ಕುರಿ-ಮೇಕೆಗಳನ್ನು ಬಲಿ ಪಡೆದುಕೊಳ್ಳುತ್ತಿದೆ. ಜೊತೆಜೊತೆಗೆ ಕುರಿಗಳು ಮತ್ತು ಮೇಕೆಗಳು ಕರುಳು ಬೇನೆ ರೋಗ, ಗಟಲು ಬೇನೆ, ಹೊಟ್ಟೆ ಉಬ್ಬರ ಹಾಗೂ ನ್ಯುಮೋನಿಯಾ ರೋಗಕ್ಕೆ ಬಲಿಯಾಗುತ್ತಿದ್ದು, ಕುರಿಗಾಹಿಗಳನ್ನು ಆತಂಕಕ್ಕೀಡು ಮಾಡಿದೆ.
Related Articles
Advertisement
ರೋಗ ಲಕ್ಷಣ-ನಿಯಂತ್ರಣ ಕ್ರಮ: ನೀಲಿ ನಾಲಿಗೆ ರೋಗ ಕಾಣಿಸಿಕೊಂಡ ಕುರಿಗಳ ನಾಲಿಗೆ ದಪ್ಪವಾಗಿ ನೀಲಿ ಬಣ್ಣಕ್ಕೆ ತಿರುಗುತ್ತದೆ. ಅತಿಯಾದ ಜ್ವರ ಕಾಣಿಸಿಕೊಂಡು ಬಾಯಲ್ಲಿ ಹುಣ್ಣುಗಳಾಗಿ ಮುಖ ಊತ ಬಂದು ಜೊಲ್ಲು ಸುರಿಸುತ್ತವೆ. ಮೇವು ತಿನ್ನಲಾಗದೇ ನಿತ್ರಾಣಗೊಂಡು ಸಾವಿಗೀಡಾಗುತ್ತವೆ. ಆದ್ದರಿಂದ, ಕುರಿಗಾಹಿಗಳು ಕುರಿ ಹಟ್ಟಿಗಳನ್ನು ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ನೀರು ನಿಂತುಕೊಂಡು ಸೊಳ್ಳೆಗಳ ಉತ್ಪತ್ತಿಗೆ ಅವಕಾಶ ನೀಡಬಾರದು. ಪ್ರತಿದಿನ ಸಂಜೆ ವೇಳೆ ಹೊಗೆ ಹಾಕುವ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಬೇಕು. ಮಳೆಗಾಲ ಆರಂಭವಾಗುತ್ತಿದ್ದಂತೆ ಲಸಿಕೆ ಹಾಕಿಸಿದಾಗ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ರೋಗ ಬರದಂತೆ ತಡೆಯಬಹುದು.
ಸಾವಿನ ಸಂಖ್ಯೆ ಹೆಚ್ಚಳ
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಕುರಿ ಅಭಿವೃದ್ಧಿ ಮಂಡಳಿ ಮಾಹಿತಿ ಪ್ರಕಾರ, ಕಳೆದ ಸಾಲಿಗಿಂತ ಪ್ರಸಕ್ತ ವರ್ಷ ಕುರಿ-ಮೇಕೆಗಳ ಸಾವಿನ ಸಂಖ್ಯೆ ಹೆಚ್ಚಿದೆ. ಪ್ರತಿ ವರ್ಷ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಸಾಮಾನ್ಯವಾಗಿ ನೀಲಿ ನಾಲಿಗೆ ರೋಗ ಕಂಡು ಬರುತ್ತದೆ. ಅಷ್ಟಾಗಿ ರೋಗ ಹರಡುವಿಕೆ ಪ್ರಮಾಣ ಇರುವುದಿಲ್ಲ. ಪ್ರಸಕ್ತ ವರ್ಷ ರೋಗ ಹರಡುವಿಕೆ ಪ್ರಮಾಣ ಹೆಚ್ಚಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಿದೆ. ಗದಗ ತಾಲೂಕುವೊಂದರಲ್ಲಿ 2021ರ ನವೆಂಬರ್ ತಿಂಗಳಿನಲ್ಲಿ 81 ಹಾಗೂ ಡಿಸೆಂಬರ್ ತಿಂಗಳಿನಲ್ಲಿ 477 ಸೇರಿ 558 ಕುರಿ, ಮೇಕೆ ಹಾಗೂ ಮರಿಗಳು ಸಾವಿಗೀಡಾಗಿದ್ದವು. ಪ್ರಸಕ್ತ ವರ್ಷ ನವೆಂಬರ್ ತಿಂಗಳು ಪೂರ್ಣಗೊಳ್ಳವುದರೊಳಗಾಗಿ ಸಾವಿನ ಸಂಖ್ಯೆ 200ರ ಗಡಿ ದಾಟಿತ್ತು.
ಕುರಿಗಾಹಿಗಳ ಪರದಾಟ
ಜಿಲ್ಲೆಯ ಗದಗ ತಾಲೂಕಿನಲ್ಲಿ 27, ಶಿರಹಟ್ಟಿ 13, ರೋಣ 23, ಮುಂಡರಗಿ 16 ಹಾಗೂ ನರಗುಂದ ತಾಲೂಕು 9 ಸೇರಿ ಒಟ್ಟು 88 ಪಶು ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಿದ್ದರೂ, ಸಿಬ್ಬಂದಿ ಕೊರತೆಯಿಂದ ತಾಲೂಕಿನ ವಿವಿಧೆಡೆ ಮೃತಪಟ್ಟ ಕುರಿ ಹಾಗೂ ಮೇಕೆಗಳ ಮಹಜರಗಾಗಿ ಗದಗ ನಗರದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕಚೇರಿಗೆ ತೆಗೆದುಕೊಂಡು ಬರಬೇಕಾದ ಪರಿಸ್ಥಿತಿಯಿದೆ. ಪಕ್ಕದಲ್ಲಿ ಪಶು ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಿದ್ದರೂ ಪ್ರಯೋಜನಕ್ಕಿಲ್ಲವಾಗಿದೆ. ಇದರಿಂದ ನಿತ್ಯ ಕುರಿಗಾಹಿಗಳು ನಗರದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕಚೇರಿಗೆ ಆಗಮಿಸಬೇಕಾಗಿದ್ದು, ಪರದಾಡುವಂತಾಗಿದೆ.
ವರವಾದ ಯೋಜನೆ
ಪಸ್ತುತ ಚಾಲ್ತಿಯಲ್ಲಿರುವ ಅನುಗ್ರಹ ಕೊಡುಗೆ ಯೋಜನೆ ಕುರಿಗಾಹಿಗಳ ಪಾಲಿಗೆ ವರವಾಗಿ ಪರಿಣಮಿಸಿದೆ. ಕಳೆದ 2021ರ ಡಿಸೆಂಬರ್ 1ರಂದು ಆರಂಭವಾದ ಈ ಯೋಜನೆ ಜಿಲ್ಲೆಯ ಕುರಿಗಾಹಿಗಳಿಗೆ ತಕ್ಕಮಟ್ಟಿಗೆ ವರದಾನವಾಗಿದೆ. 2021ರ ಡಿಸೆಂಬರ್, 2022ರ ಜನೇವರಿ, ಫೆಬ್ರವರಿ ತಿಂಗಳಲ್ಲಿ ಜಿಲ್ಲೆಯಲ್ಲಿ ಮೃತಪಟ್ಟ ಕುರಿ-ಮೇಲೆ ಹಾಗೂ ಮರಿಗಳ ಪರಿಹಾರಾರ್ಥವಾಗಿ ಅನುಗ್ರಹ ಕೊಡುಗೆ ಯೋಜನೆಯಡಿ ಕುರಿಗಾಹಿಗಳಿಗೆ ಒಟ್ಟು 82 ಲಕ್ಷ ರೂ. ಪರಿಹಾರ ಧನ ಜಮೆಯಾಗಿದೆ.
ಕಳೆದ ಒಂದು ತಿಂಗಳಿನಿಂದ ಕುರಿಗಳಿಗೆ ನೀಲಿ ನಾಲಿಗೆ ರೋಗ ಕಾಣಿಸಿಕೊಂಡಿದ್ದು, 120 ಕುರಿಗಳ ಪೈಕಿ 20 ಕುರಿಗಳು ರೋಗದಿಂದ ಮೃತಪಟ್ಟಿವೆ. ಲಸಿಕೆ ಹಾಕಿಸಿದ್ದರೂ ಕುರಿಗಳು ಸಾವಿಗೀಡಾಗಿರುವುದು ಚಿಂತೆಗೀಡು ಮಾಡಿದೆ. –ದೇವಪ್ಪ ಲಮಾಣಿ, ಶಿಂಗಟರಾಯನಕೇರಿ ತಾಂಡಾ ನಿವಾಸಿ
ಜಿಲ್ಲೆಯಲ್ಲಿ ನೀಲಿ ನಾಲಿಗೆ ರೋಗ ಹತೋಟಿಗೆ ತರಲಾಗಿದೆ. ಕುರಿ ಹಾಗೂ ಮೇಕೆಗಳಿಗೆ ಮುಂಜಾಗೃತಾ ಕ್ರಮವಾಗಿ ಲಸಿಕೆ ನೀಡಲಾಗಿದೆ. ಆದಾಗ್ಯೂ ಕುರಿಗಾಹಿಗಳ ನಿರ್ಲಕ್ಷ್ಯದಿಂದ ಕೆಲವು ಕಡೆ ಸಾವಿನ ಪ್ರಕರಣಗಳು ಕಂಡುಬರುತ್ತಿವೆ. ಜೊತೆಗೆ ಅನುಗ್ರಹ ಕೊಡುಗೆ ಯೋಜನೆಯಡಿ ಸಾವಿಗೀಡಾದ ಕುರಿ-ಮೇಕೆಗಳಿಗೆ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. -ಡಾ|ಎಚ್.ಬಿ. ಹುಲಗಣ್ಣವರ, ಉಪನಿರ್ದೇಶಕರು, ಪಶುಪಾಲನಾ ಇಲಾಖೆ
ಅರುಣಕುಮಾರ ಹಿರೇಮಠ