ಗದಗ: ಕಳೆದೊಂದು ತಿಂಗಳಿಂದ ರಾಜ್ಯದ ವಿವಿಧೆಡೆ ಆವರಿಸಿರುವ ನೀಲಿ ನಾಲಿಗೆ ರೋಗದಿಂದ ಪ್ರತಿನಿತ್ಯ ನೂರಾರು ಕುರಿ-ಆಡುಗಳು ಮೃತಪಡುತ್ತಿದ್ದು, ಕುರಿಗಾಹಿಗಳ ನಿದ್ದೆಗೆಡಿಸಿದೆ.
ಸತತ ಬರಗಾಲದ ಬಳಿಕ ಇತ್ತೀಚೆಗೆ ಉಂಟಾದ ಅತಿವೃಷ್ಟಿಯಿಂದ ರಾಜ್ಯದ 8-10 ಜಿಲ್ಲೆಗಳಆಡು-ಕುರಿಗಳಲ್ಲಿ ನೀಲಿ ನಾಲಿಗೆ ಕಾಣಿಸಿಕೊಂಡಿದೆ. ಬರ ಪೀಡಿತ ಉತ್ತರ ಕರ್ನಾಟಕಜಿಲ್ಲೆಗಳಲ್ಲಿ ಇತ್ತೀಚೆಗೆ ಉಂಟಾಗಿದ್ದ ಪ್ರವಾಹ ಹಾಗೂ ಮುಂಗಾರು ಹಂಗಾಮಿನ ಕೊನೆಗೆನಿರೀಕ್ಷೆಗೂ ಮೀರಿ ಸುರಿದ ಮಳೆಯಿಂದ ಈ ರೋಗ ತೀವ್ರವಾಗಿ ಭಾದಿಸುತ್ತಿದೆ. ಈ ಪೈಕಿಅತಿವೃಷ್ಟಿಯಿಂದ ಗದಗ, ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ವಿಜಯಪುರ, ಚಿತ್ರದುರ್ಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ರೋಗದ ತೀವ್ರತೆ ತುಸು ಹೆಚ್ಚಿದೆ ಎಂದು ಹೇಳಲಾಗಿದೆ.
ದಿನಕ್ಕೆ ಹತ್ತಾರು ಬಲಿ: ಕಳೆದೊಂದು ತಿಂಗಳಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ನೀಲಿ ನಾಲಿಗೆ ರೋಗ ವ್ಯಾಪಕವಾಗಿ ಆವರಿಸಿದೆ. ಒಟ್ಟು 17 ಲಕ್ಷ ಕುರಿ ಮತ್ತು ಆಡುಗಳ ಪೈಕಿ 23022 ಜೀವಿಗಳಲ್ಲಿ ರೋಗ ಕಾಣಿಸಿಕೊಂಡಿದ್ದು, 1118 ಮೃತಪಟ್ಟಿವೆ. ಇನ್ನುಳಿದಂತೆ ಮುಂಜಾಗ್ರತಾ ಕ್ರಮವಾಗಿ ಸರಕಾರದಿಂದ ಪೂರೈಸಲಾದ 1,71,620 ಡೋಸ್ ಲಸಿಕೆಗಳನ್ನು ಹಾಕಲಾಗಿದೆ. ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 400ಕ್ಕೂ ಹೆಚ್ಚು ಕುರಿ ಮತ್ತು ಆಡುಗಳು ಮೃತಪಟ್ಟಿವೆ. ಇನ್ನುಳಿದಂತೆ ಪರೀಕ್ಷಾರ್ಥ 20,000 ವಾಕ್ಸಿನ್ ಬಂದಿದ್ದು, ಕುರಿಗಳಿಗೆ ಹಾಕಲಾಗುತ್ತಿದೆ.
ಲಸಿಕೆಗೂ ನಿಯಂತ್ರಣಕ್ಕೆ ಬಾರದ ರೋಗ: ನೀಲಿ ನಾಲಿಗೆ ರೋಗವು ಸುಮಾರು 25ಕ್ಕಿಂತ ಹೆಚ್ಚು ಪ್ರಕಾರಗಳಲ್ಲಿ ತನ್ನ ಸ್ವರೂಪ ಬದಲಾಯಿಸುತ್ತದೆ. ವೈರಸ್‌ನಿಂದ ಹರಡುವ ರೋಗ ಇದಾಗಿದ್ದರೂ, ಜೀವಿಯಿಂದ ಜೀವಿಗೆ ಹರಡಿದ ನಂತರ ತನ್ನ ಸ್ವರೂಪ ಬದಲಾಯಿಸುತ್ತದೆ. ಹೀಗಾಗಿ ನೀಲಿಬಾಯಿ ರೋಗಕ್ಕೆ ನಿಖರವಾಗಿ ಔಷಧ ತಯಾರಿಸಲು ಸಾಧ್ಯವಾಗಿಲ್ಲ. ಸದ್ಯ ಐದಾರು ಸ್ವರೂಪದ ನೀಲಿ ನಾಲಿಗೆ ರೋಗಕ್ಕೆ ಹೊಂದಾಣಿಕೆ ಮಾಡಿದ ಔಷಧಿಯನ್ನು ಪರೀಕ್ಷಾರ್ಥವಾಗಿ ನೀಡಲಾಗುತ್ತಿದೆ. ಇದು ಮುಂಜಾಗ್ರತಾ ಕ್ರಮವಾಗಿ ನೀಡಲಾಗುತ್ತಿದ್ದು, ಕೆಲ ಜಿಲ್ಲೆಗಳಲ್ಲಿ ನಿಯಂತ್ರಣಕ್ಕೆ ಬಂದಿದ್ದರೆ, ಇನ್ನೂ ಕೆಲವೆಡೆ ಸಾವಿನ ಪ್ರಮಾಣ ಮುಂದುವರಿದಿರುವುದು ರೈತರು ಮತ್ತು ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.
ಶೇ.10 ಮಾತ್ರ ಲಸಿಕೆ ಲಭ್ಯ :ರಾಜ್ಯದಲ್ಲಿ ಸುಮಾರು 1.72 ಕೋಟಿ ಕುರಿ ಮತ್ತುಆಡುಗಳಿದ್ದು, ಈವರೆಗೆ ಪೂರೈಸಿರುವ ಔಷಧಿ ಶೇ.10ಕ್ಕಿಂತ ಕಡಿಮೆ. ರೋಗ ತೀವ್ರವಾಗಿರುವ ಜಿಲ್ಲೆಗಳಿಗೆ ಆದ್ಯತೆಯಂತೆ ಒಟ್ಟು 5 ಲಕ್ಷ ಡೋಸ್ ವ್ಯಾಕ್ಸಿನೇಷನ್ ಪೂರೈಸಲಾಗಿದೆ.ಆದರೆ, ಇಲಾಖೆಯಲ್ಲಿ ಸಿಬ್ಬಂದಿ ಹಾಗೂ ಔಷಧಿ ಕೊರತೆಯಿಂದ ಅನೇಕ ಕಡೆ ಔಷಧಿ ತಲುಪಿಲ್ಲ. ರೋಗ ನಿಯಂತ್ರಣಕ್ಕೂ ಬರುತ್ತಿಲ್ಲ ಎಂಬುದು ಕುರಿಗಾಹಿಗಳ ಅಳಲು
ಗದಗ ಜಿಲ್ಲೆಯಲ್ಲಿ ಹೆಚ್ಚು : ಗದಗ ಜಿಲ್ಲೆಯಲ್ಲಿ ಈ ರೋಗದ ತೀವ್ರತೆ ತುಸುಹೆಚ್ಚಿದೆ. ಕಳೆದ ಅಕ್ಟೋಬರ್ ಅಂತ್ಯದವರೆಗೆ ಮುಂಡರಗಿ ತಾಲೂಕಿನಲ್ಲಿ 95, ಶಿರಹಟ್ಟಿಯಲ್ಲಿ 135, ರೋಣ ತಾಲೂಕಿನಲ್ಲಿ 8 ಸೇರಿದಂತೆ ಒಟ್ಟು 238 ಕುರಿಗಳು ಮೃತಪಟ್ಟಿವೆ. ಆದರೆ, ನವೆಂಬರ್ ಮೊದಲ ವಾರದಲ್ಲಿ ರೋಗ ತೀವ್ರ ಸ್ವರೂಪ ಪಡೆದಿದ್ದು, ಈ ಭಾಗದ ಜಿಲ್ಲೆಗಳಲ್ಲಿ ಪ್ರತಿನಿತ್ಯ 10-15 ಕುರಿ-ಆಡುಗಳು ಸಾಯುತ್ತಿವೆ.
-ವೀರೇಂದ್ರ ನಾಗಲದಿನ್ನಿ