ಎಷ್ಟು ಬಾರಿ ನೋಡಿದರೂ ಮತ್ತೆ ನೋಡಬೇಕೆನ್ನುವ ಸೌಂದರ್ಯದ ಗಣಿ, ನೀಲಿ ಬಾಲದ ಕಳ್ಳಿಪೀರ. ಕಾವೇರಿ ತೀರದ ನಗುವಿನಹಳ್ಳಿಯಲ್ಲಿ ಹುಟ್ಟಿ, ದೂರ ದೇಶಕ್ಕೆ ಹಾರಿ, ಮತ್ತೆ ತನ್ನ ಸಂತಾನೋತ್ಪತ್ತಿಗಾಗಿ ಮರಳಿ ಬರುವ ಈ ಸಣ್ಣ ಹಕ್ಕಿಯ ಒಂದು ಕ್ಲೋಸಪ್ ಚಿತ್ರಣವಿದು…
ಕಳೆದ ಎರಡು ವರ್ಷಗಳಿಂದ ಛಾಯಾಚಿತ್ರಗಳನ್ನು ತೆಗೆಯುವ ಹವ್ಯಾಸ ಬೆಳೆಸಿಕೊಂಡ ನನಗೆ ಹಲವಾರು ಜನ ಉತ್ತಮ ಮಾರ್ಗದರ್ಶಕರು ಹೇಳಿದ್ದು, ನೀಲಿ ಬಾಲದ ಕಳ್ಳಿಪೀರ (ಬ್ಲೂ ಟೈಲ್ಡ್ ಬೀ ಈಟರ್) ಪಕ್ಷಿಯ ಬಗ್ಗೆ. ರಾತ್ರಿಯಿಡೀ ಅಂತರ್ಜಾಲದಲ್ಲಿ ಜಾಲಾಡಿ, ಆ ಪಕ್ಷಿಗಳ ಬಗ್ಗೆ ಅಲ್ಪಸ್ವಲ್ಪ ತಿಳಿದುಕೊಂಡು ಮುಂಜಾನೆ ಕ್ಯಾಮೆರಾ ಬ್ಯಾಗ್ ಏರಿಸಿಕೊಂಡು ಹೊರಟಿದ್ದು, ಮಂಡ್ಯ ಜಿಲ್ಲೆಯ ತುದಿಯ ನಗುವಿನಹಳ್ಳಿ ಗ್ರಾಮದ ಕಡೆಗೆ.
ನೀಲಿ ಬಾಲದ ಕಳ್ಳಿಪೀರ ಹಕ್ಕಿ ಉದ್ದ ಕೊಕ್ಕು ಹೊಂದಿರುವ, ಹಸಿರು, ಹಳದಿ ಮತ್ತು ನೀಲಿ ಬಣ್ಣಗಳ ಮಿಶ್ರಿತ ಸೊಬಗಿನ ಚೆಲುವೆ. ಥಳ ಥಳ ಹೊಳೆಯುವ ಇದಕ್ಕೆ ಕೆಂಪು ಕಣ್ಣಿನ ಸುತ್ತ ಕಪ್ಪನೆಯ ಗೆರೆಯಿದೆ. ಎಷ್ಟು ಬಾರಿ ನೋಡಿದರೂ ಮತ್ತೆ ನೋಡಬೇಕೆನ್ನುವ ಸೌಂದರ್ಯದ ಗಣಿ. ಉದ್ದನೆಯ ನೀಲಿ ಬಾಲವನ್ನು ಹೊಂದಿರುವುದರಿಂದ ಬೇರೆ ಕಳ್ಳಿಪೀರಗಳಿಗಿಂತ ಭಿನ್ನ. ಇವುಗಳ ವೈಜ್ಞಾನಿಕ ಹೆಸರು, ಮೇರೋಪ್ಸ್ ಫಿಲಿಪ್ಪಿನಸ್.
ಈ ಪಕ್ಷಿಗಳ ಜೀವನ ಕ್ರಮ, ಗೂಡು ಮಾಡುವ ವಿಧಾನವೇ ವಿಭಿನ್ನ . ಮರಳು ಮಿಶ್ರಿತ ಮಣ್ಣು ದೊರೆಯುವ ನದಿಗಳ ತಪ್ಪಲಿನಲ್ಲಿ ತನ್ನ ಮೊನಚಾದ ಕಾಲುಗಳಿಂದ, ಐದಾರು ಅಡಿಗಳಷ್ಟು ಆಳಕ್ಕೆ ರಂಧ್ರ ಕೊರೆದು ಗೂಡುಗಳನ್ನು ನಿರ್ಮಿಸುವ ಚಾಕಚಕ್ಯತೆಯೇ ಮನಮೋಹಕ. ಇದರ ಜೊತೆಗೆ ಚಿಟ್ಟೆಗಳು, ಹೆಲಿಕಾಪ್ಟರ್ ಚಿಟ್ಟೆ, ಮಿಡತೆಗಳು ಹೇರಳವಾಗಿ ಸಿಗುವ ನದಿ ದಂಡೆಗಳಲ್ಲಿ ಇವುಗಳ ಆವಾಸ ಸ್ಥಾನ. ಚೂಪು ಮೂತಿಯನ್ನು ಬಾಣದಂತೆ ಗುರಿಯಿಟ್ಟು, ಶರವೇಗದಲ್ಲಿ ಹಾರಿ, ಚಿಟ್ಟೆಗಳನ್ನು ಹಿಡಿಯುವ ಕೌಶಲ್ಯತೆ ನಿಜಕ್ಕೂ ಅದ್ಭುತ.
ಇವು ಆಗ್ನೇಯ ಏಷ್ಯಾದ ವಲಸಿಗ ಹಕ್ಕಿಗಳು. ದಕ್ಷಿಣ ಭಾರತದ ನದಿಗಳ ತಪ್ಪಲಿನ ಪ್ರದೇಶಗಳಿಗೆ ಸಂತಾನೋತ್ಪತ್ತಿಗಾಗಿ ವಲಸೆ ಬರುತ್ತವೆ. ತಮಿಳುನಾಡು ಹಾಗೂ ಕರ್ನಾಟಕದ ಕಾವೇರಿ ನದಿಯ ತಪ್ಪಲಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಮಾರ್ಚ್ ಕೊನೆಯ ವಾರದಲ್ಲಿ ನಗುವಿನಹಳ್ಳಿಗೆ ವಲಸೆ ಬರುವ ಈ ಹಕ್ಕಿಗಳು, ಸಾಮಾನ್ಯವಾಗಿ ಜುಲೈ ಅಂತ್ಯದವರೆಗೂ ಇರುತ್ತವೆ. ನದಿಯ ತೀರದಲ್ಲಿ ಗೂಡನ್ನು ಕೊರೆದು ಚಿಟ್ಟೆಗಳನ್ನು ಬೇಟೆಯಾಡಿ, ಅದನ್ನು ಸಂಗಾತಿಗೆ ನೀಡಿ, ಒಲಿಸಿಕೊಳ್ಳುವಾಗ ಇದು ಅಪ್ಪಟ ಮನ್ಮಥ.
ಹೆಣ್ಣು- ಗಂಡು ಜತೆಯಾದ ಮೇಲೆ, ಇವುಗಳ ಸಂಸಾರ ಯಾತ್ರೆ ನಮ್ಮಂತೆಯೇ. ಹೆಣ್ಣು ಪಕ್ಷಿ ಮೊಟ್ಟೆಗಳಿಗೆ ಕಾವು ಕೊಡುವಾಗ, ಗಂಡು ಪಕ್ಷಿ ಹೊರಗೆ ಹೋಗಿ, ಆಹಾರವನ್ನು ತಂದು, ಗೂಡಿನ ಬಾಗಿಲಲ್ಲಿ ನಿಂತು ಕೂಗಿ ಕರೆದು ಕೊಡುವ ರೀತಿಯಲ್ಲಿ ಒಂದು ಅತೀವ ಪ್ರೀತಿ ಕಾಣುತ್ತದೆ. ಸಂಸಾರದಲ್ಲಿ ಗಂಡು- ಹೆಣ್ಣು ಸರಿಸಮನಾಗಿ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು ಎನ್ನುವುದಕ್ಕೆ ಇವುಗಳ ಜೀವನವೇ ಒಂದು ಪಾಠ.
ಕಾವೇರಿ ತೀರದ ನಗುವಿನಹಳ್ಳಿಯಲ್ಲಿ ಹುಟ್ಟಿ, ದೂರ ದೇಶಕ್ಕೆ ಹಾರಿ, ಮತ್ತೆ ತನ್ನ ಸಂತಾನೋತ್ಪತ್ತಿಗಾಗಿ ಮರಳಿ ಬರುವ ಈ ಸಣ್ಣ ಹಕ್ಕಿಯ ಬಗ್ಗೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳು ತೋರಿರುವ ಕಾಳಜಿ ನಿಜಕ್ಕೂ ಶ್ಲಾಘನೀಯ. ನಗುವಿನಹಳ್ಳಿಯಲ್ಲಿ ಸುಮಾರು 2 ಎಕರೆಗಳಷ್ಟು ಜಮೀನನ್ನು ನೀಲಿ ಬಣ್ಣದ ಕಳ್ಳಿಪೀರದ ಸಂರಕ್ಷಣೆಗಾಗಿ ಕಾಯ್ದಿರಿಸಿ, ಸುತ್ತಲೂ ತಂತಿಬೇಲಿಗಳನ್ನು ನಿರ್ಮಿಸಲಾಗಿದೆ.
ಪುಟ್ಟ ಹಕ್ಕಿಗಾಗಿ ಮೂರೇ ಮೂರು ಕೆಲಸ…
1. ಕಾವೇರಿ ತೀರದ ಈ ಹಕ್ಕಿಯ ಕುರಿತು ಇನ್ನೂ ಅಧ್ಯಯನಗಳು ನಡೆಯಬೇಕಿದೆ.
2. ಅರಣ್ಯ ಇಲಾಖೆಯು ಪಕ್ಷಿ ತಂತ್ರಜ್ಞರ ತಂಡವನ್ನು ಮಾಡಿ, ಇನ್ನು ಹೆಚ್ಚಿನ ರೀತಿಯಲ್ಲಿ ಈ ಹಕ್ಕಿಗಳನ್ನು ರಕ್ಷಿಸುವ, ಸಂತತಿ ಅಭಿವೃದ್ಧಿಪಡಿಸುವ ಹಾಗೂ ಸ್ಥಳೀಯರಿಗೆ ಇವುಗಳ ಪ್ರಾಮುಖ್ಯತೆಯನ್ನು ತಿಳಿಸುವ ಕೆಲಸವನ್ನು ಮಾಡಬೇಕಿದೆ.
3. ಇಲ್ಲಿಗೆ ಬರುವ ಫೋಟೊಗ್ರಾಫರ್‌ಗಳಿಂದ ಈ ಹಕ್ಕಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರ ವಹಿಸಲು, ನಿಯಮ ಫಲಕಗಳನ್ನು ಅಳವಡಿಸುವುದು ಸೂಕ್ತವೆನಿಸುತ್ತದೆ.
– ಪ್ರದೀಪ್ ಗಾಣಕಲ್