Advertisement

ನೀಲಿತಲೆ ಕಲ್ಲು ಗುಟುರ 

11:31 AM Mar 10, 2018 | |

 ಬಿದಿರಿನ ತೋಪು, ಹರಿದ್ವರ್ಣ ಕಾಡುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳು ನೀಲಿ ತಲೆ ಕಲ್ಲು ಗುಟುಕ, ಸಂಕೋಚ ಸ್ವಭಾವದ ಪಕ್ಷಿ. blue headed rock-thrush (Monticola  cinclorhynchus (Vigors)   RM- Bul Bul +ಇದು ಸಿಳ್ಳೆ ಹಾಸುತ್ತಾ ಹಾಡಿನ ಧ್ವನಿ ಹೊರಡಿಸುವುದರಿಂದ ನೆಲ ಇಂಚರ ಎಂಬ ಹೆಸರನ್ನು ಪಡೆದಿದೆ. 

Advertisement

 ಈ ಹಕ್ಕಿಯನ್ನು ನೀಲಿತಲೆ ನೆಲ ಇಂಚರ‌ ಅಂತಲೂ ಕರೆಯುತ್ತಾರೆ.  ಇದು 17ಸೆಂ.ಮೀ ಉದ್ದದ ಹಕ್ಕಿ. 37-70ಗ್ರಾಂ ಭಾರ ಇದೆ. ಇದು ಉತ್ತರ ಭಾರತದಿಂದ ಪಶ್ಚಿಮ ಘಟ್ಟದ ಪ್ರದೇಶವಾದ, ಗೋವಾ, ಕರ್ನಾಟಕ, ಕೇರಳಗಳಿಗೆ ಚಳಿಗಾಲ ಕಳೆಯಲು ಬರುತ್ತದೆ.  ಭಾರತದಲ್ಲಿ ಪಶ್ಚಿಮ ವಲಯ ಪ್ರದೇಶವಾದ ಸಹ್ಯಾದ್ರಿ ಹರಿದ್ವರ್ಣ ಕಾಡಿನಲ್ಲಿ, ಹುಲ್ಲುಬೆಳೆದ ಕಲ್ಲು ಪ್ರದೇಶದಲ್ಲಿ ಕಾಣುವುದರಿಂದ ಟ್ರಷ್‌ ಎಂಬ ಹೆಸರು ಬಂದಿದೆ. ಇದು ನೆಲದಮೇಲೆ ಓಡಾಡಿ, ತರಗೆಲೆ ಮಧ್ಯ ಇಲ್ಲವೇ ನೆಲದಲ್ಲಿ, ಹುಲ್ಲುಗಳ ಮಧ್ಯ ಇರುವ ಮಿಡತೆ, ಚಿಕ್ಕ ಹುಳುಗಳನ್ನು ಕುಂಟೆಬಿಲ್ಲೆ ಆಟದಂತೆ ಸ್ಥಳದಿಂದ ಜಿಗಿದು  ಹಿಡಿಯುತ್ತದೆ.   ಈ ಕಾರಣದಿಂದ ಇದಕ್ಕೆ ನೆಲ ಇಂಚರ ಎಂಬ ಹೆಸರಿದೆ. ಇಂಚರ ಅಂದರೆ ಹಾಡು.  ಸಿಳ್ಳೆ ದನಿಯಲ್ಲಿ -ಭಿನ್ನ ದನಿ ಹೊರಡಿಸುವುದರಿಂದ ಇದಕ್ಕೆ ಇಂಚರ ಹೆಸರು ಸೇರಿದೆ.  

 ಇದು ಗಾತ್ರದಲ್ಲಿ ಪಿಕಳಾರ ಅಂದರೆ ಬುಲ್‌ ಬುಲ್‌ ಹಕ್ಕಿಯಷ್ಟು ದೊಡ್ಡದಿದೆ. ತಲೆ, ಕುತ್ತಿಗೆ, ಗಲ್ಲ ಮತ್ತು ರೆಕ್ಕೆಯ ಅಂಚು- ಪಚ್ಚೆ ನೀಲಿ ಬಣ್ಣದಿಂದ ಕೂಡಿದೆ.  ಕಣ್ಣಿನ ಸುತ್ತ ,ಕೆನ್ನೆ, ಬಾಲ, ಕಪ್ಪು ಗರಿ ಇದೆ. ಬೆನ್ನು ಮತ್ತು ರೆಕ್ಕೆ ಬುಡದಲ್ಲಿ ಚಿತ್ತಾರದಂತಿರುವ ಕಂದು-ಕಪ್ಪು ಬಣ್ಣದ ಗರಿ ಇದೆ. ಇದರ ರೆಕ್ಕೆಯ ಮಧ್ಯ ಇರುವ ಬಿಳಿಬಣ್ಣ -ಈ ಹಕ್ಕಿಯನ್ನು ಗುರುತಿಸಲು ಅನುಕೂಲವಾಗಿದೆ.  ಬೂದು ಬಣ್ಣದ ಉದ್ದ ಚುಂಚು, ಉದ್ದ ಕಾಲಿದೆ. ಇದರಿಂದ ನೆಲದಲ್ಲಿ ಓಡಾಡಿ ಬೇಟೆಯಾಡಲು ಸಹಕಾರಿಯಾಗಿದೆ. ಎದೆ, ಹೊಟ್ಟೆ, ಬಾಲದ ಪುಕ್ಕ ಆರಂಭವಾಗುವಲ್ಲಿ ಕೇಸರಿ ಬಣ್ಣ ಇದೆ. 

  ಗಂಡು-ಹೆಣ್ಣು ಬೇರೆ ಬಣ್ಣ ಹೊಂದಿವೆ. ಹೆಣ್ಣು ಹಕ್ಕಿಯ ಮೈ ತಿಳಿ ಕಂದು ಬಣ್ಣ ಇದ್ದು, ದಟ್ಟ ಕಂದುಬಣ್ಣದ ಚಿತ್ತಾರ -ರೆಕ್ಕೆ ಮತ್ತು ಮೈಮೇಲೆ ಇದೆ. ಹೊಳೆವ ತೀಕ್ಷ್ಣ ಕಣ್ಣು  ಈ ಹಕ್ಕಿಗೆ ಇದೆ. ಮರಿ ಮಾಡುವ ಸಮಯದಲ್ಲಿ -ಗಂಡು ಸುಂದರ ಸಿಳ್ಳಿನ ರಾಗಾಲಾಪ ಮಾಡುತ್ತದೆ.  ಎಷ್ಟು ವಿಧದ ಸಿಳ್ಳೆ ಹೊಡೆಯುವುದು, ಈ ಸಿಳ್ಳೆಯ ವೈವಿಧ್ಯದ ಅರ್ಥ ಏನು? ಈ ವಿಷಯದಲ್ಲಿ ಅಧ್ಯಯನ ನಡೆಯಬೇಕಿದೆ. 

  ಪಶ್ಚಿಮ ಘಟ್ಟದ ಕಾಡಿನ ಪ್ರದೇಶ, ಕರ್ನಾಟಕದ ಗಣೇಶ ಗುಡಿ, ಕುಮಟಾ ಹೊನ್ನಾವರ, ಕೇರಳದಲ್ಲೂ ಈ ಹಕ್ಕಿ ಕಾಣಸಿಗುತ್ತದೆ. ಅಕ್ಟೋಬರ್‌ ನಿಂದ ಏಪ್ರಿಲ್‌ ಅವಧಿಯಲ್ಲಿ ಈ ಭಾಗದಲ್ಲಿ ಇವು ಬೀಡು ಬಿಡುತ್ತವೆ.  ಬಿದಿರು ಮೆಳೆ ಹಾಗೂ ನಿತ್ಯ ಹರಿದ್ವರ್ಣ ಕಾಡುಗಳಲ್ಲೂ ಕೀಟವನ್ನು ಹುಡುಕುತ್ತವೆ. ಚಳಿಗಾಲದಲ್ಲಿ ಮರಗಳ ಎಲೆ ಉದುರಿರುವುದರಿಂದ ಇವುಗಳನ್ನು ಗುರುತಿಸುವುದು ಸುಲಭ. ಇಲ್ಲವಾದರೆ ಗಿಡ ಮರಗಳ ನಡುವೆ ಇದನ್ನು ಹುಡುಕುವುದೇ ಕಷ್ಟ. ನೆಲದಲ್ಲಿ ಹುಳುಗಳನ್ನು ತಿನ್ನುತ್ತಿದ್ದಾಗ ಸ್ವಲ್ಪ ತೊಂದರೆಯಾದರೂ ಈ ಹಕ್ಕಿ ತಟ್ಟನೆ ಹಾರಿ ಸಮೀಪದ ಎತ್ತರದ ಮರಗಳ ಟೊಂಗೆಗಳ ನಡುವೆ ಸೇರಿ ಸುಮ್ಮನೆ ಕುಳಿತುಕೊಳ್ಳುತ್ತದೆ.  ಇದೊಂದು ಸಂಕೋಚ ಸ್ವಭಾವದ ಹಕ್ಕಿ. ಈ ವಲಸೆ ಹಕ್ಕಿಯ ಪ್ರಬೇಧದ ಕೆಲವು ಮಧ್ಯ ಏಷಿಯಾದಲ್ಲೂ, ಮಿಕ್ಕವು ಹಿಮಾಲಯದ ತಪ್ಪಲು ಪ್ರದೇಶದ 2700 ರಿಂದ  4000 ಮೀಟರ್‌ ಎತ್ತರದ ಪರ್ವತ ಪ್ರದೇಶಗಳಲ್ಲೂ ಗೂಡು ಮಾಡಿ ಮರಿಮಾಡುತ್ತವೆ.  

Advertisement

  ಇದು ಭಿನ್ನ ರೀತಿಯ ಹುಳಗಳನ್ನು ಕಾಳು, ಚಿಕ್ಕ ಕ್ರಿಮಿ, ಮಿಡತೆ, ಜೇಡ, ರೆಕ್ಕೆ ಹುಳಗಳ ಮೊಟ್ಟೆ, ಲಾರ್ವಾಗಳನ್ನು ತಿನ್ನವುದರಿಂದ ಕಾಡಿನ ಮರಗಳಿಗೆ ಮಾರಕವಾದ ಅನೇಕ ಕೀಟಗಳು ಸೇರಿ, ಕಾಡಿನ ಉಳಿವಿಗೆ ಬಹುಪಯೋಗವಾಗುತ್ತದೆ. 

ಸಾಮಾನ್ಯವಾಗಿ  ಏಪ್ರಿಲ್‌- ಜೂನ್‌ ಮರಿಮಾಡುವ ಸಮಯ. ಪ್ರಾದೇಶಿಕ ಪರಿಸ್ಥಿತಿಗನುಗುಣವಾಗಿ ಈ ಕಾಲಮಾನದಲ್ಲಿ ಸ್ವಲ್ಪ ವ್ಯತ್ಯಾಸವಾಗುವುದೂ ಇದೆ. 2-5 ಮೀ. ಎತ್ತರದಲ್ಲಿ ಇದು ಗೂಡು ನಿರ್ಮಿಸುತ್ತದೆ.  ಒಮ್ಮೆ ನಿರ್ಮಿಸಿದ ಗೂಡುಗಳನ್ನೇ  ಅನೇಕ ದಿನಗಳವರೆಗೆ ಉಪಯೋಗಿಸುವುದು. ಕಲ್ಲು ಬಂಡೆಯ ಬಿರುಕು, ಮರದ ಡೊಗರು, ಗಿಡಗಳ ಒಟ್ಟೆ -ಕಟ್ಟಡಗಳ ಸಂದು, ಹಳೆಯ ಕೋಟೆಯ ಬಿರುಕು ಹೀಗೆ ನಾನಾ ಸ್ಥಳಗಳಲ್ಲಿ ಮೊಟ್ಟೆ ಇಡುತ್ತದೆ. ದಟ್ಟ ಕಂದು ಬಣ್ಣದ ಚುಕ್ಕೆ ಇರುವ ತಿಳಿ ನೀಲಿ ಅಥವಾ ತಿಳಿ ಹಸಿರು ಮಿಶ್ರಿತ ನೀಲಿಬಣ್ಣದ 4-5 ಮೊಟ್ಟೆ ಇಡುವುದು. 14-16 ದಿನ ಕಾವುಕೊಟ್ಟು ಮರಿಮಾಡುತ್ತದೆ. ಕಾವುಕೊಡುವ ಕಾರ್ಯದಲ್ಲಿ ಹೆಣ್ಣು ಹಕ್ಕಿ ಮುತುವರ್ಜಿ ತೆಗೆದುಕೊಳ್ಳುತ್ತದೆ. ಗಂಡು-ಹೆಣ್ಣು ಸುಮಾರು 2 ವಾರಗಳವರೆಗೆ ಗುಟುಕುಕೊಟ್ಟು ಮರಿಗಳ ಆರೈಕೆ ಮಾಡುತ್ತವೆ. ಮರಿಗಳಿಗೆ 3 ವಾರವಾದಾಗ ಹಾರಲು ಕಲಿಯುತ್ತದೆ.  ಹಾರಲು ಕಲಿತ ಮರಿಗಳನ್ನು ಮತ್ತೆ 15 ದಿನಗಳ ಕಾಲ ತಮ್ಮ ಜೊತೆಯಲ್ಲಿ ಇರಿಸಿಕೊಂಡು ಗುಂಡು-ಹೆಣ್ಣು ಹಕ್ಕಿಗಳು ಆರೈಕೆ ಮಾಡುತ್ತವೆ.  

ಪಿ.ವಿ.ಭಟ್‌ ಮೂರೂರು

Advertisement

Udayavani is now on Telegram. Click here to join our channel and stay updated with the latest news.

Next