Advertisement

ಬ್ಲೂಫ್ಲ್ಯಾಗ್ ಬೀಚ್‌ ಮೂಲಸೌಕರ್ಯ ಅಭಿವೃದ್ಧಿ: ಸಚಿವ ಸಾ.ರಾ. ಮಹೇಶ್‌

10:51 AM Dec 11, 2018 | |

ಪಡುಬಿದ್ರಿ: ಬ್ಲೂ ಫ್ಲ್ಯಾಗ್‌ ಬೀಚ್‌ ಆಗಲಿರುವ ಪಡುಬಿದ್ರಿ ಕಡಲ ಕಿನಾರೆಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ರಸ್ತೆ ಅಗಲ ಹಾಗೂ ಅಭಿವೃದ್ಧಿ, ಕಿರು ಸೇತುವೆ ರಚನೆ ಮುಂತಾದ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಯು ಸಹಕರಿಸಲಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ಹೇಳಿದರು. 

Advertisement

ಅವರು ತಮ್ಮ ಖಾಸಗಿ ಪ್ರವಾಸದ ವೇಳೆ ಸೋಮವಾರ ಪಡುಬಿದ್ರಿಯ ಎಂಡ್‌ ಪಾಯಿಂಟ್‌ಗೆ ಆಗಮಿಸಿದ್ದು,
ಬ್ಲೂಫ್ಲ್ಯಾಗ್‌ ಬೀಚ್‌ ಅಭಿವೃದ್ಧಿಗಾಗಿ ಗುರುತಿಸಲಾದ ಪ್ರದೇಶವನ್ನು ಪರಿಶೀಲಿಸಿದರು. ಉಡುಪಿ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚಿಸಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. 

ರಸ್ತೆ ಅಭಿವೃದ್ಧಿಗೆ ಇಲಾಖಾ ಅನುದಾನ
ಬ್ಲೂ ಫ್ಲ್ಯಾಗ್‌ ಪ್ರದೇಶಕ್ಕೆ ಆಗಮಿಸಲು ಸಂಪರ್ಕ ರಸ್ತೆ ಅಗತ್ಯ ಎಂಬುದನ್ನು ಮನಗಂಡಿದ್ದೇನೆ. ಪ್ರವಾಸೋದ್ಯಮ ಇಲಾಖೆಯಿಂದ ಈ ಪ್ರದೇಶದ ಅಭಿವೃದ್ಧಿಗಾಗಿ 2.68 ಕೋಟಿ ರೂ. ನೀಡಲಾಗುತ್ತಿದೆ. ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ. ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸುವಂತೆ ಕೆಆರ್‌ಐಡಿಎಲ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ಜ. 24, 25ರ ವೇಳೆಗೆ ದ.ಕ., ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದು, ಆಗ ರಸ್ತೆ ಅಭಿವೃದ್ಧಿಗೂ ಇಲಾಖಾ ಅನುದಾನ ಘೋಷಿಸುವುದಾಗಿ ಸಚಿವರು ಹೇಳಿದರು. 

ಸ್ಟಾರ್‌ ಹೊಟೇಲ್‌ ಅಭಿವೃದ್ಧಿಗೆ ಭರವಸೆ
ಬ್ಲೂಫ್ಲ್ಯಾಗ್‌ ಬೀಚ್‌ ಆದ ಬಳಿಕ ದೇಶ ವಿದೇಶದ ಪ್ರವಾಸಿಗರು ಉಡುಪಿ ಜಿಲ್ಲೆಗೆ ಬರಬಹುದಾಗಿದ್ದು, ಸ್ಟಾರ್‌ ಹೊಟೇಲ್‌ಗ‌ಳ ಕೊರತೆ ಇದೆ. ಪ್ರವಾಸೋದ್ಯಮ ಇಲಾಖೆ ಅಥವಾ ಕೆಎಸ್‌ಟಿಡಿಸಿ ಮೂಲಕ 10 – 15 ಕೋ.ರೂ.ಗಳನ್ನು ಮೀಸಲಿರಿಸಿ ಬ್ಲೂಫ್ಲ್ಯಾಗ್‌ ಬೀಚ್‌ನ ಈ ಪ್ರದೇಶವನ್ನು ಗಮನದಲ್ಲಿ ಇರಿಸಿಕೊಂಡು ಸ್ಟಾರ್‌ ಹೊಟೇಲ್‌ಗ‌ಳ ನಿರ್ಮಾಣಕ್ಕೆ ಇಲಾಖೆ ಗಮನಹರಿಸಲಿದೆ. ಜಿಲ್ಲೆಯ ಉದ್ಯಮಪತಿಗಳನ್ನು ಕರೆಸಿ ಹೊಟೇಲ್‌ ಉದ್ಯಮವನ್ನು ಉಡುಪಿ ಜಿಲ್ಲೆಯ ಈ ಭಾಗದಲ್ಲೇ ಆರಂಭಿಸುವ ಕುರಿತು ಚರ್ಚಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಪ್ರವಾಸೋದ್ಯಮ ಇಲಾಖೆಯ ಉಡುಪಿ ಜಿಲ್ಲಾ ಉಪ ನಿರ್ದೇಶಕಿ ಅನಿತಾ ಭಾಸ್ಕರ್‌, ಕೆಆರ್‌ಐಡಿಎಲ್‌ನ ಕೃಷ್ಣ ಹೆಬೂರ್‌, ಆ್ಯಕ್ಟ್‌ನ ಅಧ್ಯಕ್ಷ ಮನೋಹರ ಕೆ. ಶೆಟ್ಟಿ, ಬ್ಲೂಫ್ಲ್ಯಾಗ್‌ ಬೀಚ್‌ ಅಭಿವೃದ್ಧಿಯ ಗುತ್ತಿಗೆದಾರ ಕಂಪೆನಿ ಎಟುಝಡ್‌ನ‌ ಅಧಿಕಾರಿಗಳು, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಯೋಗೀಶ್‌ ಶೆಟ್ಟಿ ಬಾಲಾಜಿ, ಕಾಪು ಕ್ಷೇತ್ರ ಜೆಡಿಎಸ್‌ ಅಧ್ಯಕ್ಷ ಸುಧಾಕರ ಶೆಟ್ಟಿ ಹೆಜಮಾಡಿ ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next