Advertisement

ಬ್ಲೂ ಬೇಬಿ ಸಿಂಡ್ರೋಮ್‌: ಬಾಲಕಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

06:50 PM Aug 12, 2021 | Team Udayavani |

ತುಮಕೂರು: ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ಸಿದ್ಧಾರ್ಥ ಅಡ್ವಾನ್ಸ್‌ ಹಾರ್ಟ್‌ ಸೆಂಟರ್‌ ಇದೀಗ ಬ್ಲೂ ಬೇಬಿ ಸಿಂಡ್ರೋಮ್‌ ಹೊಂದಿದ್ದ ಆರೂವರೆ ವರ್ಷದ ಪುಟ್ಟ ಬಾಲಕಿಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ತಿಳಿಸಿದರು.

Advertisement

ನಗರ ಸಮೀಪದ ಸಿದ್ಧಾರ್ಥ ಮೆಡಿಕಲ್‌ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆರೂವರೆ
ವರ್ಷದ ಮಗುವಿಗೆ ಸಂಕೀರ್ಣ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ತುಮಕೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನೆರವೇರಿಸಿದ್ದು, ಹೃದಯ ಶಸ್ತ್ರಚಿಕಿತ್ಸೆ ನಂತರ ಬಾಲಕಿ ಬ್ಲೂ ಬೇಬಿ ಸಿಂಡ್ರೋಮ್‌ನಿಂದ ಹೊರ ಬಂದಿದೆ. ಇದೀಗ ಬಾಲಕಿ ಚೇತರಿಸಿಕೊಂಡು ಸಾಮಾನ್ಯ ಸ್ಥಿತಿಗೆ ಮರಳಿದ್ದಾಳೆ ಎಂದು ಹೇಳಿದರು.

ತುಮಕೂರಿನ ಬಾಲಕಿ ಕಳೆದ ಆರು ವರ್ಷದಿಂದ ಕೇವಲ ಶೇ.20 ಸ್ಯಾಚುರೇಷನ್‌ ಮಟ್ಟದಲ್ಲೇ ಬದುಕು ನಡೆಸಿರುವುದು ಅಚ್ಚರಿಯ ಸಂಗತಿ. ತುಮಕೂರು ನಗರದಲ್ಲಿ ವಾಸಿಸುತ್ತಿರುವ ಬಾಲಕಿಗೆ ತಾಯಿ ಇಲ್ಲ. ಇಂಥ ಬಾಲಕಿಗೆ ಸಿದ್ಧಾರ್ಥ ಅಡ್ವಾನ್ಸ್‌ ಹಾರ್ಟ್‌ ಸೆಂಟರ್‌ನ ತಜ್ಞ ವೈದ್ಯರಾದ ತಮೀಮ್‌ ಅಹಮದ್‌ ಮತ್ತು ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದರಿಂದ ಬಾಲಕಿ ಸಾಮಾನ್ಯರಂತೆ ಬದುಕು ನಡೆಸುವಂತಾಗಿದೆ ಎಂದರು.

ಸಿದ್ಧಾರ್ಥ ಹಾರ್ಟ್‌ ಸೆಂಟರ್‌ನ ಮೇಲ್ವಿಚಾರಕರು ಹಾಗೂ ಕಾರ್ಡಿಯಾಕ್‌ ಫ್ರಾಂಟಿಡಾ ಸಂಸ್ಥೆಯ ನಿರ್ದೇಶಕರಾದ ಡಾ. ತಮೀಮ್‌ ಅಹಮದ್‌ ಮಾತನಾಡಿ, ಬಾಲಕಿ ಬ್ಲೂ ಬೇಬಿ ಸಿಂಡ್ರೋಮ್‌ನೊಂದಿಗೆ ಜನಿಸಿದ್ದಳು. ಸಾಮಾನ್ಯ ಮಗುವಿನಂತೆ ಜನಿಸದ ಕಾರಣ ಸಾಮಾನ್ಯ ಜೀವನ ನಡೆಸಲು ಸಾಕಷ್ಟು ಕಷ್ಟಪಟ್ಟಿದ್ದಳು. ಅವಳ ಹೃದಯದಲ್ಲಿ ಜನ್ಮಜಾತ ದೋಷವಿದ್ದು, ಹೃದಯವು ಆಮ್ಲಜನಕ ಯುಕ್ತ ರಕ್ತವನ್ನು ಪ್ರತ್ಯೇಕಿಸಲು ಸಾಧ್ಯವಾಗುತ್ತಿರಲಿಲ್ಲ. ರಕ್ತ ಶ್ವಾಸಕೋಶಕ್ಕೆ ಹೋಗಿ ಶುದ್ಧಿಯಾಗಿ ವಾಪಸ್‌ ಹೃದಯಕ್ಕೆ ಬಂದು ರಕ್ತನಾಳದ ಮೂಲಕ ಸಂಚರಿಸುತ್ತಿರಲಿಲ್ಲ. ಶುದ್ಧ ರಕ್ತ ಮತ್ತು ಅಶುದ್ಧ ರಕ್ತ ಎರಡೂ ಒಂದೇ ಸ್ಥಳದಲ್ಲಿ ಸೇರುತ್ತಿತ್ತು. ಇದರ ಪರಿಣಾಮ ದೇಹದ ಪ್ರಮುಖ ಅಂಗಗಳಿಗೆ ಅಗತ್ಯವಾದ ಆಮ್ಲ
ಜನಕದ ಪೂರೈಕೆ ಸಾಧ್ಯವಾಗುತ್ತಿರಲಿಲ್ಲ ಎಂದರು.

ಮೊದಲು ಆಮ್ಲಜನಕ ಪ್ರಮಾಣ ಶೇ. 80ರಷ್ಟು ಕಡಿಮೆ ಇತ್ತು. ಇಂತಹ ಪರಿಸ್ಥಿತಿಯಿಂದ ಹೊರ ಬರಲು ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈಗ ಶೇ. 95ರಷ್ಟುಆಮ್ಲಜನಕ ಪೂರೈಕೆಯಾಗುತ್ತಿದ್ದು, ಸಾಮಾನ್ಯ ಸ್ಥಿತಿಗೆ ತಲುಪಿದ್ದಾಳೆ ಎಂದರು.

Advertisement

ಇದನ್ನೂ ಓದಿ:ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ : ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಡಾ. ತಮೀಮ್‌ ಅಹಮದ್‌ ನೇತೃತ್ವದಲ್ಲಿ ಡಾ. ಅಬ್ದುಲ್‌, ಡಾ. ವಾಸುದೇವ್‌ ಬಾಬು, ಡಾ. ತಹೂರ್‌, ಡಾ. ನವೀನ್‌, ಡಾ. ಸುರೇಶ್‌, ಡಾ. ಆಶಿತ ಕಾಮತ್‌, ಡಾ. ನಾಗಾರ್ಜುನ್‌, ವಿವೇಕ್‌, ಜಾನ್‌, ಡಾ. ನಿಖೀತಾ ಮತ್ತು ತಾಂತ್ರಿ ಸಿಬ್ಬಂದಿ ಬಾಲಕಿಯ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲು ಶ್ರಮಿಸಿದ್ದಾರೆ. ಸಿದ್ಧಾರ್ಥ ಆಸ್ಪತ್ರೆಯ ಸಿಇಓ ಡಾ. ಪ್ರಭಾಕರ್‌ ಇತರರಿದ್ದರು.

ಆಸ್ಪತ್ರೆಯ ಮೂಲ ಧ್ಯೇಯ
ಸಿದ್ಧಾರ್ಥ ಹಾರ್ಟ್‌ ಸೆಂಟರ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, 24 ಗಂಟೆಗಳ ತುರ್ತು ನಿಗಾ ಘಟಕ, ಪ್ರಯೋಗಾಲಯಗಳು, ವಿಕಿರಣ ಘಟಕ, ಸಿಟಿ ಸ್ಕ್ಯಾನರ್ , ಎಂ.ಆರ್‌.ಐ. ಸ್ಕ್ಯಾನರ್ ಸೌಲಭ್ಯವನ್ನು ಒಳಗೊಂಡಿದೆ. ಪೂರ್ಣ ಪ್ರಮಾಣದ ರೋಗಪತ್ತೆ, ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿ,ವಾಲ್‌ವ್ಲೋಪ್ಲಾಸ್ಟಿ ಸೌಲಭ್ಯವೂ ಲಭ್ಯವಿದೆ. ಗ್ರಾಮಾಂತರ ಪ್ರದೇಶದ ಜನ ದೂರದ ಮಹಾನಗರಗಳಿಗೆ ತೆರಳಿ ದುಬಾರಿ ಖರ್ಚು-ವೆಚ್ಚಗಳಿಗೆ ಸಿಲುಕಿಕೊಳ್ಳಬಾರದು ಎಂಬ ಉದ್ದೇಶದಿಂದ ಜನ ಸಾಮಾನ್ಯರಿಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡುವ ಗುರಿಯಿಂದ ಆರಂಭಿಸಲಾದ ಸಿದ್ಧಾರ್ಥ ಅಡ್ವಾನ್ಸ್‌ ಹಾರ್ಟ್‌ ಸೆಂಟರ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಚಿಕಿತ್ಸೆಯನ್ನು ಕೈಕೆಟುವ ಮಟ್ಟದಲ್ಲಿ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ನಿರ್ದೇಶಕರು ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರು ವೈದ್ಯರ ಸೇವಾಮನೋಭಾವ ಮತ್ತು ಕಾರ್ಯ ತತ್ಪರತೆಯನ್ನು ಮುಕ್ತವಾಗಿ ಶ್ಲಾಘಿಸಿದರು.

ಸಿದ್ಧಾರ್ಥ ಹಾರ್ಟ್‌ ಸೆಂಟರ್‌ನಲ್ಲಿ ಐತಿಹಾಸಿಕವಾಗಿ ಶಸ್ತ್ರಚಿಕಿತ್ಸೆಗಳನ್ನು ಕೇವಲ 2-3 ತಿಂಗಳಲ್ಲಿ ನಡೆಸಲಾಗಿದೆ. ನಮ್ಮ ಆಸ್ಪತ್ರೆಯ ಹಾರ್ಟ್‌ಸೆಂಟರ್‌ನಲ್ಲಿ ಇರುವ ವ್ಯವಸ್ಥೆಕೆಲವೇಕೆಲವು ನಗರಗಳಲ್ಲಿ ಮಾತ್ರ ಇದೆ, ಸಿದ್ಧಾರ್ಥ ಹಾರ್ಟ್‌ ಸೆಂಟರ್‌ನಲ್ಲಿ ಇದುವರೆಗೂ 300ಕ್ಕೂ ಹೆಚ್ಚು ರೋಗಿಗಳ ತಪಾಸಣೆ ನಡೆಸಲಾ ಗಿದ್ದು, 27 ರೋಗಿಗಳಿಗೆ ಸಂಕೀರ್ಣ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ, 350ಕ್ಕೂ ಹೆಚ್ಚು ಆಂಜಿಯೋಗ್ರಾಮ್‌, 50ಕ್ಕೂ ಅಧಿಕ ಆಂಜಿಯೋಪ್ಲಾಸ್ಟಿ ನಡೆಸಲಾಗಿದೆ.
-ಡಾ.ಜಿ.ಪರಮೇಶ್ವರ್‌, ಶ್ರೀ ಸಿದ್ಧಾರ್ಥ ಶಿಕ್ಷಣ
ಸಂಸ್ಥೆಯ ಕಾರ್ಯದರ್ಶಿ, ಮಾಜಿ ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next