ನವದೆಹಲಿ: ಪೂರ್ವ ಲಡಾಖ್ ನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ ಎಸಿ) ಬಳಿ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಮುಂದುವರಿದಿದ್ದು, ಏತನ್ಮಧ್ಯೆ ಭಾರತೀಯ ಸೇನಾ ಪಡೆ ಬೆಟ್ಟ ಪ್ರದೇಶಗಳಲ್ಲಿನ ಆರು ಸ್ಥಳಗಳನ್ನು ತನ್ನ ವಶಕ್ಕೆ ಪಡೆಯಲು ಯಶಸ್ವಿಯಾಗಿದ್ದು, ಚೀನಾಪಡೆಗೆ ತೀವ್ರ ಮುಖಭಂಗವಾಗಿರುವುದಾಗಿ ವರದಿ ತಿಳಿಸಿದೆ.
ಭಾರತೀಯ ಸೇನಾಪಡೆ ಆರು ಪ್ರಮುಖ ಪರ್ವತ ಶ್ರೇಣಿ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಮೂಲಕ ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ ಎ)ಯ ಚಲನವಲನದ ಮೇಲೆ ಸ್ಪಷ್ಟವಾದ ಕಣ್ಗಾವಲು ಇಡಲು ಸಾಧ್ಯವಾಗಿದೆ ಎಂದು ವರದಿ ವಿವರಿಸಿದೆ.
ಚೀನಾ ಯುದ್ಧ ವಿಮಾನಗಳ ಹಾಗೂ ಚೀನಾ ಸೈನಿಕರ ಚಟುವಟಿಕೆ ಪರಿಶೀಲಿಸುವ ನಿಟ್ಟಿನಲ್ಲಿ ಭಾರತೀಯ ವಾಯುಪಡೆಯ ರಫೇಲ್ ಯುದ್ಧ ವಿಮಾನ ಎಲ್ ಎಸಿಯಲ್ಲಿ ಹಾರಾಟ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ. ಮಾಧ್ಯಮಗಳ ವರದಿ ಪ್ರಕಾರ, ಸೆಪ್ಟೆಂಬರ್ 10ರಂದು ರಾಜಸ್ಥಾನದ ಅಂಬಾಲಾ ವಾಯುನೆಲೆಗೆ ಐದು ರಫೇಲ್ ಯುದ್ಧ ವಿಮಾನ ಬಂದಿಳಿದಿತ್ತು. ಇದೀಗ ಲಡಾಖ್ ನಲ್ಲಿ ರಫೇಲ್ ಯುದ್ಧ ವಿಮಾನ ಹಾರಾಟ ನಡೆಸುತ್ತಿರುವುದಾಗಿ ತಿಳಿಸಿದೆ.
ಏತನ್ಮಧ್ಯೆ ಪ್ಯಾಂಗಾಮಗ್ ಸರೋವರ ಪ್ರದೇಶದ ಸುತ್ತಮುತ್ತ 20ಕ್ಕೂ ಹೆಚ್ಚು ಬೆಟ್ಟ ಪ್ರದೇಶಗಳನ್ನು ಭಾರತೀಯ ಸೇನಾಪಡೆ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಪ್ಯಾಂಗಾಂಗ್ ಉತ್ತರ, ದಕ್ಷಿಣ ದಂಡೆಯ ಬೆಟ್ಟ ಸೇರಿ ಚೂಶುಲ್ ಪ್ರದೇಶದ ಎತ್ತರದ ಪ್ರದೇಶಗಳನ್ನು ಭಾರತೀಯ ಸೇನೆ ತನ್ನ ಸುಪರ್ದಿಗೆ ಪಡೆದಿದೆ ಎಂದು ಸೇನಾ ಮೂಲಗಳು ಹೇಳಿವೆ.
ಆಗಸ್ಟ್ 29ರಿಂದ ಸೆಪ್ಟೆಂಬರ್ 2ನೇ ವಾರದ ಅವಧಿಯಲ್ಲಿ ಭಾರತೀಯ ಯೋಧರು ಮಗರ್, ಗುರುಂಗ್, ರೆಸೆಹೆನ್ ಲಾ, ರೆಜಾಂಗ್ ಲಾ, ಮೋಖ್ ಪರಿ ಬೆಟ್ಟಗಳನ್ನು ತಮ್ಮ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುವುದಾಗಿ ವರದಿ ತಿಳಿಸಿದೆ.