ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಇಂದು ಶುಕ್ರವಾರ ಕೆಂಬಣ್ಣದ ಓಕುಳಿಯೇ ಕಂಡು ಬಂತು. ತೈಲ, ಅನಿಲ, ಲೋಹ, ಆಟೋ ಮತ್ತು ಬ್ಯಾಂಕಿಂಗ್ ರಂಗದ ಶೇರುಗಳನ್ನು ವಹಿವಾಟುದಾರರು ಮತ್ತು ಹೂಡಿಕೆದಾರರು ಭಯಭೀತರಾಗಿ ಬೇಕಾಬಿಟ್ಟಿ ಮಾರಾಟ ಮಾಡಿದುದರ ಪರಿಣಾಮವಾಗಿ ಸೆನ್ಸೆಕ್ 509.54 ಅಂಕಗಳ (ಶೇ.1.51) ನಷ್ಟಕ್ಕೆ ಗುರಿಯಾಗಿ 33,128.99
ಅಂಕಗಳ ಮಟ್ಟಕ್ಕೆ ಕುಸಿಯಿತು.
ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 165 ಅಂಕಗಳ ನಷ್ಟಕ್ಕೆ (ಶೇ.1.59) ಗುರಿಯಾಗಿ ದಿನದ ವಹಿವಾಟನ್ನು 10,195.15ರ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ಶೇರು ಮಾರುಕಟ್ಟೆಯಲ್ಲಿ ವಹಿವಾಟಿಗೆ ಗುರಿಯಾದ ಶೇರುಗಳ ಪೈಕಿ 1,838 ಕಂಪೆನಿಗಳ ಶೇರುಗಳು ಹಿನ್ನಡೆಗೆ ಗುರಿಯಾದವು; ಕೇವಲ 796 ಶೇರುಗಳು ಮಾತ್ರವೇ ಮುನ್ನಡೆ ಸಾಧಿಸಿದವು;
ಟಾಟಾ ಮೋಟರ್, ಅದಾನಿ ಪೋರ್ಟ್, ಸನ್ ಫಾರ್ಮಾ, ಏಶ್ಯನ್ ಪೇಂಟ್, ಎನ್‌ಟಿಪಿಸಿ ಮತ್ತು ಹೀರೋ ಮೋಟೋ ಕಾರ್ಪ್ ಶೇರುಗಳು ಇಂದು ಭಾರೀ ಹಿನ್ನಡೆಗೆ ಗುರಿಯಾದವು.
ನಿನ್ನೆ ಗುರುವಾರ ಸೆನ್ಸೆಕ್ಸ್ 150.20 ಅಂಕಗಳ ನಷ್ಟದೊಂದಿಗೆ 33,685.54 ಅಂಕಗಳ ಮಟ್ಟದಲ್ಲಿ ವ್ಯವಹಾರ ಕೊನೆಗೊಳಿಸಿತ್ತು. ಅಂತೆಯೇ ನಿಫ್ಟಿ 50.75 ಅಂಕಗಳ ನಷ್ಟದೊಂದಿಗೆ 10,360.15 ಅಂಕಗಳ ಮಟ್ಟಕ್ಕೆ ಕುಸಿದಿತ್ತು.