ಮುಂಬಯಿ : ಭಾರತದ ದುರ್ಬಲ ಸಾರ್ವಜನಿಕ ಹಣಕಾಸು ಸ್ಥಿತಿಗತಿಯಿಂದ ಅದರ ಸಾರ್ವಭೌಮ ಕ್ರಮಾಂಕಕ್ಕೆ (sovereign ratings) ಧಕ್ಕೆ ಉಂಟಾಗಬಹುದೆಂದು Fitch Ratings ಹೇಳಿರುವುದನ್ನು ಅನುಸರಿಸಿ, ಈಗಾಗಲೇ ಬಜೆಟ್ ನಿರಾಶೆಯಲ್ಲಿ ತೊಳಲಾಡುತ್ತಿರುವ ಮುಂಬಯಿ ಶೇರು ಮಾರುಕಟ್ಟೆಯಲ್ಲಿ, ಇಂದು ಶುಕ್ರವಾರ ಶೇರುಗಳ ಮಾರಣ ಹೋಮವೇ ನಡೆಯಿತು. ವಹಿವಾಟುದಾರರು ಮತ್ತು ಹೂಡಿಕೆದಾರರು ತೀವ್ರ ಭೀತಿಯಲ್ಲಿ ಐಟಿ, ಫಾರ್ಮಾ ಮತ್ತು ಬ್ಯಾಂಕಿಂಗ್ ವಲಯದ ಶೇರುಗಳನ್ನು ಮನಬಂದಂತೆ ಮಾರತೊಡಗಿದರು.
ಪರಿಣಾಮವಾಗಿ ದಿನಾಂತ್ಯದ ವೇಳೆಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 839.91 ಅಂಕಗಳ (ಶೇ.2.34) ಭಾರೀ ನಷ್ಟಕ್ಕೆ ಗುರಿಯಾಗಿ 35,066.75 ಅಂಕಗಳ ಮಟ್ಟಕ್ಕೆ ಕುಸಿಯಿತು; ರಾಷ್ಟ್ರೀಯ ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 256.30 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 10,760.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ನಿನ್ನೆಯ ಬಜೆಟ್‌ನಲ್ಲಿ ಒಂದು ಲಕ್ಷ ರೂ. ಮೀರುವ ದೀರ್ಘಾವಧಿ ಶೇರು ಮಾರಾಟದ ಲಾಭದ ಮೇಲೆ ಶೇ.10ರ ತೆರಿಗೆಯನ್ನು ಹೇರಲಾಗಿತ್ತು. ಸರಕಾರದಿಂದ ಬಹಳಷ್ಟು ಉತ್ತೇಜಕ ಉಪಕ್ರಮಗಳನ್ನು ನಿರೀಕ್ಷಿಸಿದ್ದ ಶೇರು ಮಾರುಕಟ್ಟೆಗೆ ಅವ್ಯಾವೂ ದೊರಕಲಿಲ್ಲ; ಬದಲಾಗಿ ಶೇ.10ರ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ತೆರಿಗೆಯನ್ನು ಹೇರಲಾದದ್ದು ವಿನಾಶಕಾರಿ ಎಂದು ಅನ್ನಿಸಿತ್ತು.
ಮೇಲಾಗಿ ದೇಶದ ವಿತ್ತೀಯ ಕೊರತೆಯು ಈಗಿನ ಶೇ.3.2ರಿಂದ ಹೆಚ್ಚೆಂದರೆ ಶೇ.3.5ಕ್ಕೆ ಏರಬಹುದು ಎಂಬ ವಿತ್ತ ಸಚಿವರ ಸಮಜಾಯಿಸಿಕೆಯಿಂದ ಶೇರು ಮಾರುಕಟ್ಟೆ ತೃಪ್ತವಾಗಿರಲಿಲ್ಲ.
ಮುಂಬಯಿ ಶೇರು ಪೇಟೆಯಲ್ಲಿಂದು 2,961 ಶೇರುಗಳ ವಹಿವಾಟಿಗೆ ಒಳಪಟ್ಟವು. ಈ ಪೈಕಿ ಕೇವಲ 310 ಶೇರುಗಳು ಮಾತ್ರವೇ ಮುನ್ನಡೆ ಕಂಡವು; 2,527 ಶೇರುಗಳು ನಷ್ಟಕ್ಕೆ ಗುರಿಯಾದವು; 124 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ.