ಬಂಟ್ವಾಳ: ದಾನಗಳಲ್ಲಿ ರಕ್ತದಾನ ಪುಣ್ಯದ ಕೆಲಸ. ಇತರ ದಾನಗಳಲ್ಲಿ ತಾನು ಗಳಿಸಿದರಲ್ಲಿ ಉಳಿಸಿದ್ದನ್ನು ದಾನ ಮಾಡುವುದು. ರಕ್ತದಾನದಲ್ಲಿ ರಕ್ತವನ್ನು ಇತರರ ಪ್ರಾಣ ಉಳಿಸುವ ಉದ್ದೇಶಕ್ಕೆ ಹಂಚಿಕೊಳ್ಳುವುದಾಗಿದೆ. ಪೊಲೀಸ್ ಸಿಬಂದಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತ ನೀಡಲು ಮುಂದಾ ಗಿರುವುದು ಶ್ಲಾಘನೀಯ ಎಂದು ಬಂಟ್ವಾಳ ಉಪ ವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕ ಸೈದುಲ್ ಅಡಾವತ್ ಹೇಳಿದರು.
ಅವರು ಜೂ. 2ರಂದು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಸೇವಾ ಕಾರ್ಯ ಗಳು ಅಭಿನಂದನೀಯ. ದ.ಕ. ಪೊಲೀಸ್ ಇಲಾಖೆ ಸಹಕಾರದಿಂದ, ಕೆಎಂಸಿ ಮಂಗಳೂರು ಸಹಯೋಗದಿಂದ ನಡೆದ ರಕ್ತದಾನ ಶಿಬಿರ ನೈಜ ಸೇವಾ ಉದ್ದೇಶ ಹೊಂದಿದೆ ಎಂದರು.
ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಎಂ.ಎಸ್., ಬಂಟ್ವಾಳ ನಗರ ಠಾಣಾಧಿಕಾರಿ ಚಂದ್ರಶೇಖರ್ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋಟರಿ ಕ್ಲಬ್ ಸಹಾಯಕ ಗವರ್ನರ್ ಎನ್. ಪ್ರಕಾಶ್ ಕಾರಂತ, ಶ್ರೀನಿವಾಸ್ ಎಂಜಿನಿಯರ್ ಕಾಲೇಜು ಸಹಪ್ರಾಧ್ಯಾಪಕ ಸುಧೀಂದ್ರ ಎಚ್.ಎನ್., ಫರಂಗಿಪೇಟೆ ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ್ ಶೇಕ, ತಾ.ಪಂ. ಸದಸ್ಯ ಗಣೇಶ್ ಸುವರ್ಣ, ಸೇವಾಂಜಲಿ ಅಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ಕೋಶಾಧಿಕಾರಿ ಗೋವಿಂದ ಶೆಣೈ, ಪದ್ಮನಾಭ ಶೆಟ್ಟಿ ಪುಂಚಮೆ, ಪ್ರಕಾಶ್ ಕಿದೆಬೆಟ್ಟು , ಪಿ.ಎ. ರಹೀಂ ಬಿ.ಸಿ. ರೋಡ್ ಉಪಸ್ಥಿತರಿದ್ದರು. ತಾರಾನಾಥ್ ಕೊಟ್ಟಾರಿ ತೇವು ಸ್ವಾಗತಿಸಿ, ದೇವದಾಸ್ ಶೆಟ್ಟಿ ಕೊಡಾ¾ಣ್ ನಿರೂಪಿಸಿ, ವಂದಿಸಿದರು
24 ವರ್ಷಗಳಿಂದ ನಿರಂತರ ರಕ್ತದಾನ ಶಿಬಿರ
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಸ್ತಾವಿಸಿ ಸುಮಾರು 24 ವರ್ಷಗಳಿಂದ ನಿರಂತರ ರಕ್ತದಾನ ಶಿಬಿರಗಳನ್ನು ಆಯೋಜಿಸಿಸಲಾಗಿದೆ. ಈಗಾಗಲೇ 102 ಶಿಬಿರಗಳು ಯಶಸ್ವಿಯಾಗಿದ್ದು, ಇಂದಿನ ಶಿಬಿರ ಮಹತ್ವದ್ದಾಗಿದೆ. ಜಿಲ್ಲೆಯಾದ್ಯಂತ ರಕ್ತದ ಕೊರತೆ ಇರುವಾಗ ಕಳೆದ ಮೂರು ತಿಂಗಳಲ್ಲಿ 3 ಶಿಬಿರಗಳನ್ನು ಆಯೋಜಿಸಿದ್ದೇವೆ ಎಂದರು.