Advertisement

ರಕ್ತದಾನ: ತಪ್ಪು ತಿಳಿವಳಿಕೆ ದೂರ ಮಾಡುತ್ತಿರುವ ಕುಸುಮಾ

06:00 AM Jun 15, 2018 | Team Udayavani |

ಉಡುಪಿ: “ಮಹಿಳೆಯರು ರಕ್ತದಾನ ಮಾಡಬಾರದೆಂಬ ಅತ್ಯಂತ ತಪ್ಪು ತಿಳುವಳಿಕೆ ನಮ್ಮ ಸಮಾಜದಲ್ಲಿ ತುಂಬಾ ಇತ್ತು. ಅದನ್ನು ದೂರ ಮಾಡುವಲ್ಲಿ ಸ್ವಲ್ಪ ಯಶಸ್ಸು ಸಾಧಿಸಿದ್ದೇನೆ. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಗುವಿನ ನೋವು ಕಂಡು ನನ್ನ 20ನೇ ವಯಸ್ಸಿನಲ್ಲಿ ರಕ್ತದಾನ ಆರಂಭಿಸಿದೆ. ಆ ಚೂಟಿ ಹುಡುಗನ ನೆನಪು ಈಗಲೂ ನನ್ನ ಮನಸ್ಸು ಆವರಿಸಿಕೊಂಡಿದೆ’.

Advertisement

ಹೀಗೆ ಹೇಳುತ್ತಿದ್ದಂತೆ  ಕುಸುಮಾ ಮಾರ್ಪಳ್ಳಿ ಅವರ ನೆನಪು 27 ವರ್ಷಗಳ ಹಿಂದಕ್ಕೆ ಓಡಿತು. “ಅಂದು ನಾನು ಮಣಿಪಾಲ ಬ್ಲಿಡ್‌ ಬ್ಯಾಂಕ್‌ನಲ್ಲಿದ್ದೆ. ಶಿವಮೊಗ್ಗ ಕಡೆಯ 8 ವಯಸ್ಸಿನ ಮಗು ರಕ್ತದ ಕ್ಯಾನ್ಸರ್‌ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಿತ್ತು. ಅದರ ಹೆತ್ತವರು ರಕ್ತಕ್ಕಾಗಿ ಪಡುತ್ತಿದ್ದ ಪರದಾಟ ನನ್ನನ್ನು ರಕ್ತದಾನಕ್ಕೆ ಪ್ರೇರೇಪಿಸಿತ್ತು. ನನ್ನದು ಬಿ ನೆಗೆಟಿವ್‌. ಆ ಮಗುವಿಗೆ ಬೇಕಿದ್ದುದು ಕೂಡ ಅದೇ’ ಎಂದರು ಕುಸುಮಾ ಮಾರ್ಪಳ್ಳಿ.

32ಕ್ಕೂ ಅಧಿಕ ಬಾರಿ ರಕ್ತದಾನ
ರಕ್ತದಾನ 32ಕ್ಕೂ ಅಧಿಕ ಬಾರಿ ಮಾಡಿದ್ದೇನೆ. 20ನೇ ವಯಸ್ಸಿನಲ್ಲಿ ರಕ್ತದಾನ ಶುರು ಮಾಡಿದೆ. ನನಗೀಗ 47 ವರ್ಷ. ಮಹಿಳೆಯರು ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಮುಟ್ಟಿನ ಅವಧಿಯಲ್ಲಿ 5 ದಿನಗಗಳ ಕಾಲ ರಕ್ತದಾನ ಮಾಡಿಲ್ಲ. ಉಳಿದಂತೆ ಎಲ್ಲಾ ಸಂದರ್ಭದಲ್ಲಿಯೂ 3-4 ತಿಂಗಳ ಅಂತರದಲ್ಲಿ ನಿಯಮಿತವಾಗಿ ರಕ್ತದಾನ ಮಾಡುತ್ತಾ ಬಂದಿದ್ದೇನೆ ಎನ್ನುತ್ತಾರೆ ಕುಸುಮಾ.

ಎಂ.ಎಸ್ಸಿ ಪದವೀಧರೆ
ಮಧ್ಯಮವರ್ಗದ ಕುಟುಂಬದ ಕುಸುಮಾ ಅವರು ಮೆಡಿಕಲ್‌ ಲ್ಯಾಬ್‌ ಟಿಕ್ನೀಷಿಯನ್‌ನಲ್ಲಿ ಡಿಪ್ಲೊಮಾ, ಬಿಎಸ್‌ಸಿ ಹಾಗೂ ಎನ್ವಿರಾನ್‌ಮೆಂಟಲ್‌ ಸೈನ್ಸ್‌ನಲ್ಲಿ ಎಂಎಸ್‌ಸಿ ಪೂರೈಸಿದ್ದಾರೆ. 1990ರಲ್ಲಿ ಮಣಿಪಾಲ ಬ್ಲಿಡ್‌ ಬ್ಯಾಂಕ್‌ನಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡರು. 2009ರಿಂದ ಮಣಿಪಾಲ ಫಾರ್ಮಾಸುÂಟಿಕಲ್‌ ಸೈನ್ಸ್‌ನ ಬಯೋ ಟೆಕ್ನಾಲಜಿ ವಿಭಾಗದಲ್ಲಿ ಸೀನಿಯರ್‌ ಲ್ಯಾಬ್‌ ಟೆಕ್ನೀಷಿಯನ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮನೆಯಲ್ಲಿಯೂ ಬೆಂಬಲ
ಹಿರಿಯಡಕ ಅಂಜಾರಿನಲ್ಲಿ ವಾಸ ವಾಗಿರುವ ಕುಸಮಾ ಅವರಿಗೆ ಪತಿ ಸೇರಿದಂತೆ ಕುಟುಂಬದ ಪೂರ್ಣ ಬೆಂಬಲ ವಿದೆ. ಇವರ ಪತಿ,  ತಮ್ಮ, ಮಾವನ ಮಗ ಕೆಲವು ಬಾರಿ ರಕ್ತದಾನ ಮಾಡಿದ್ದಾರೆ. ಅಕ್ಕ ಕೂಡ ಬಿ ನೆಗೆಟಿವ್‌ ಗುಂಪಿನ ರಕ್ತ ಹೊಂದಿದ್ದು ಆಕೆ ಕೂಡ ಆಗಾಗ್ಗೆ ರಕ್ತದಾನ ಮಾಡುತ್ತಿದ್ದಾರೆ. ಓರ್ವ ಪುತ್ರ ಏಳನೇ ತರಗತಿ, ಇನ್ನೋರ್ವ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

Advertisement

ಜೀವ ಉಳಿಸುವ ಕಾರ್ಯ
ಒಂದು ಯುನಿಟ್‌ ರಕ್ತ ಮೂವರ ಜೀವ ಉಳಿಸುತ್ತದೆ. ಪುರುಷರು 3 ತಿಂಗಳಿಗೊಮ್ಮೆ, ಮಹಿಳೆಯರೂ 6 ತಿಂಗಳಿಗೊಮ್ಮೆ ನೀಡಬಹುದು. ಆದರೆ  ಅನಿವಾರ್ಯವಾದರೆ ಅದಕ್ಕಿಂತ ಮೊದಲು ಕೂಡ ಕೊಡುವುದುಂಟು. ರಕ್ತ ನೀಡುವವರ ಹಿಮೋಗ್ಲೋಬಿನ್‌ ಕನಿಷ್ಠ 12.5 ಗ್ರಾಂ. ಇರುವುದು ಅಗತ್ಯ. ಇದು ನನ್ನಲ್ಲಿ ಯಾವತ್ತು ಕೂಡ ಕೊರತೆ ಆಗಿಲ್ಲ. ರಕ್ತ ನೀಡಿದ ಎರಡೇ ದಿನದಲ್ಲಿ ಅಷ್ಟೇ ರಕ್ತ ಉತ್ಪತ್ತಿಯಾಗುತ್ತದೆ. 58 ವಯಸ್ಸಿನವರೆಗೂ ರಕ್ತ ಕೊಡಬೇಕೆಂಬ ನಿರ್ಧಾರ ನನ್ನದು ಎನ್ನುತ್ತಾರೆ ಕುಸುಮಾ.

 ಒಮ್ಮೆ ಕೊಟ್ಟರೆ ಮತ್ತೆ ಕೊಡುವ ಮನಸ್ಸು
ಒಮ್ಮೆ ನಾವು ರಕ್ತದಾನಕ್ಕೆ ಮುಂದಾದರೆ ಮತ್ತೆ ಮತ್ತೆ ರಕ್ತದಾನ ಮಾಡಲು ಮನಸ್ಸಾಗುತ್ತದೆ. ನಾನು ಅನೇಕ ಮಂದಿ ಯುವತಿಯರು, ಮಹಿಳೆಯರಿಗೂ ತಿಳಿಹೇಳಿ ಅವರು ಕೂಡ ರಕ್ತದಾನ ಮಾಡುವಂತೆ ಪ್ರೇರೇಪಿಸುತ್ತೇನೆ.
– ಕುಸುಮಾ ಮಾರ್ಪಳ್ಳಿ ರಕ್ತದಾನಿ 

 ಮಹಿಳೆಯರು ರಕ್ತದಾನ ಮಾಡಲು ಭಯಬೇಡ 
“ಋತುಚಕ್ರದ ಅವಧಿಯಲ್ಲಿ 6 ದಿನಗಳ ಕಾಲ ಮತ್ತು ಗರ್ಭಿಣಿಯಾಗಿರುವಾಗ ಹಾಗೂ ಹಾಲುಣಿಸುವ ದಿನಗಳಲ್ಲಿ ಸಾಮಾನ್ಯವಾಗಿ ರಕ್ತ ಪಡೆಯುವುದಿಲ್ಲ. ಆ ಸಂದರ್ಭದಲ್ಲಿ ಹಿಮೋಗ್ಲೋಬಿನ್‌ ಪ್ರಮಾಣ ಕಡಿಮೆಯಾಗಿರುವ ಸಾಧ್ಯತೆಗಳಿರುತ್ತವೆ. ಉಳಿದಂತೆ ಎಲ್ಲಾ ಆರೋಗ್ಯವಂತ ಮಹಿಳೆಯರು ರಕ್ತದಾನ ಮಾಡಬಹುದು. ಮಹಿಳೆಯರಿಂದ ರಕ್ತ ಪಡೆಯುವಾಗ ವಿಶೇಷವಾಗಿ ತಪಾಸಣೆ ಮಾಡುತ್ತೇವೆ. ಯಾವುದೇ ಆತಂಕ, ತಪ್ಪು ತಿಳಿವಳಿಕೆ ಬೇಡ. 
– ಡಾ| ವೀಣಾ ಕುಮಾರಿ ವೈದ್ಯಾಧಿಕಾರಿ, ರಕ್ತನಿಧಿ ಕೇಂದ್ರ 
ಜಿಲ್ಲಾಸ್ಪತ್ರೆ ಉಡುಪಿ

– ಸಂತೋಷ್‌ ಬೊಳ್ಳೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next