Advertisement

ರಕ್ತದಾನ ಕಡಿಮೆಯಾದರೂ ದಾಸ್ತಾನು ಇದೆ: ವೈದ್ಯರು

10:09 AM Mar 18, 2020 | mahesh |

ಮಂಗಳೂರು: ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಬಾಧಿತರ ಚಿಕಿತ್ಸೆಗಾಗಿ ಮೀಸಲಿರಿಸಲಾದ ವಿಶೇಷ ಐಸೋಲೇಶನ್‌ ವಾರ್ಡ್‌ಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ವೈದ್ಯರೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.

Advertisement

ರಕ್ತ ಸಂಗ್ರಹ ಇದೆ
ಆಸ್ಪತ್ರೆಯ ರಕ್ತ ಮರುಪೂರಣ ಕೇಂದ್ರದ ಮುಖ್ಯಸ್ಥ ಡಾ| ಶರತ್‌ ಕುಮಾರ್‌ ಮಾತನಾಡಿ, ಪ್ರಸ್ತುತ ರಕ್ತದಾನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಕಾಲೇಜುಗಳಿಗೂ ರಜೆ ಇರುವುದರಿಂದ ವಿದ್ಯಾರ್ಥಿಗಳೂ ರಕ್ತದಾನ ಮಾಡುತ್ತಿಲ್ಲ. ಆದರೆ ಕೊರತೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮೊದಲೇ ರಕ್ತ ಸಂಗ್ರಹಿಸಿಡಲಾಗಿದ್ದು, ಪ್ರಸ್ತುತ 600ಕ್ಕೂ ಹೆಚ್ಚು ಯುನಿಟ್‌ ರಕ್ತ ಸಂಗ್ರಹವಿದೆ. ರೋಗಿಗಳಿಗೆ ರಕ್ತದ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

ಹಿಮೋಫೀಲಿಯಾ ರೋಗಿಗಳಿಗೆ ಸಮಸ್ಯೆ
ಫ್ಯಾಕ್ಟರ್‌ 8 ಔಷಧ ಅಲಭ್ಯತೆಯಿಂದಾಗಿ ಹೀಮೋಫೀಲಿಯಾ ರೋಗಿಗಳಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಸಾರ್ವಜನಿಕರೊಬ್ಬರು ಸಚಿವರ ಗಮನ ಸೆಳೆದರು. ಹಿಮೋಫೀಲಿಯಾ ರೋಗಿಗಳಿಗೆ ಫ್ಯಾಕ್ಟರ್‌ ಔಷಧ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಲಭ್ಯವಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದರೆ ಮಣಿಪಾಲಕ್ಕೆ ಹೋಗಬೇಕು. ಒಂದು ಬಾರಿಯ ಚಿಕಿತ್ಸೆಗೆ ಕನಿಷ್ಠ ಒಂದು ಲಕ್ಷ ರೂ. ಖರ್ಚಾಗುತ್ತದೆ. ಬಡರೋಗಿಗಳು ಇದರಿಂದ ಪರದಾಟ ಅನುಭವಿಸಬೇಕಾಗಿ ಬಂದಿದೆ ಎಂದರು.

ಫ್ಯಾಕ್ಟರ್‌ 8 ಔಷಧ ಖರೀದಿಗಾಗಿ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು ಈ ಬಗ್ಗೆ ಪರಿಶೀಲಿಸಿ ಫ್ಯಾಕ್ಟರ್‌ 8 ಔಷಧ ಲಭ್ಯವಾಗುವಂತೆ ನೋಡಿಕೊಳ್ಳುತ್ತೇನೆ ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಜೇಶ್‌ ಉಪಸ್ಥಿತರಿದ್ದರು.

ಮಾಸ್ಕ್ ಧರಿಸಿ ಪರಿಶೀಲನೆ
ಐಸೋಲೇಶನ್‌ ವಾರ್ಡ್‌ ಪರಿಶೀಲನೆ ಸಂದರ್ಭ ಸಚಿವರು ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸಿದ್ದರು. ಗಂಟಲು ನೋವು ಹಿನ್ನೆಲೆಯಲ್ಲಿ ವಾರ್ಡ್‌ನಲ್ಲಿ ನಿಗಾದಲ್ಲಿರುವ ದುಬಾೖಯಿಂದ ಸೋಮವಾರ ಬಂದ ಬೆಳ್ತಂಗಡಿ ಮೂಲದ ರೋಗಿಯೋರ್ವರ ಯೋಗಕ್ಷೇಮ ವಿಚಾರಿಸಿದರು.

Advertisement

ನಿರಂತರ ಸೊಳ್ಳೆ ಕಾಟ
ಆಸ್ಪತ್ರೆಯಲ್ಲಿ ನಿಗಾದಲ್ಲಿರುವ ರೋಗಿಯು ವಿಪರೀತ ಸೊಳ್ಳೆ ಕಾಟ ಇರುವ ಬಗ್ಗೆ ಸಚಿವರಲ್ಲಿ ದೂರಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆ ವ್ಯಕ್ತಿ, ಸೋಂಕು ಹರಡದಂತೆ ತಡೆಯುವ ಸಲುವಾಗಿ ತಪಾಸಣೆಗೊಳಪಡಿಸುವುದರಲ್ಲಿ ತಪ್ಪಿಲ್ಲ. ಆದರೆ ಆಸ್ಪತ್ರೆಯಲ್ಲಿ ವಿಪರೀತ ಸೊಳ್ಳೆ ಕಾಟದಿಂದಾಗಿ ಇನ್ನೊಂದು ರೋಗ ಹರಡುವ ಬಗ್ಗೆಯೇ ಆತಂಕವಾಗುತ್ತಿದೆ. ರೋಗ ಲಕ್ಷಣಗಳು ಗುಣವಾಗಲೆಂದು ಆಸ್ಪತ್ರೆಗೆ ಬಂದರೆ ಈ ಆಸ್ಪತ್ರೆಯಿಂದಲೇ ರೋಗ ಹರಡುವ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next