Advertisement

ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠ

05:34 PM Sep 21, 2018 | Team Udayavani |

ಹರಪನಹಳ್ಳಿ: ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾಗಿದ್ದು, ಅಪಘಾತಕ್ಕೀಡಾದ ಸಂದರ್ಭದಲ್ಲಿ ರಕ್ತದ ಅನಿವಾರ್ಯತೆ
ಹೆಚ್ಚಾಗಿರುತ್ತದೆ. ಆಗ ರಕ್ತ ನೀಡುವವನು ನಿಜಕ್ಕೂ ದೇವರಾಗಿ ಕಾಣುತ್ತಾನೆ. ನಾವು ಯಾವುದೇ ದಾನ ಮಾಡದಿದ್ದರೂ ಕಷ್ಟ ಕಾಲದಲ್ಲಿ ರಕ್ತದಾನ ಮಾಡಬೇಕು ಎಂದು ದಾವಣಗೆರೆ ಎಸ್‌ಎಸ್‌ ವೈದ್ಯಕೀಯ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ| ನಂದೀಶ್‌ ಹೇಳಿದರು.

Advertisement

ಪಟ್ಟಣದ ಎಚ್‌ಪಿಎಸ್‌ ಕಾಲೇಜು ಆವರಣದಲ್ಲಿ ಗುರುವಾರ ಎಚ್‌ಪಿಎಸ್‌ ಪಪೂ ಮತ್ತು ಪದವಿ ಕಾಲೇಜು ಹಾಗೂ ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿ ಸಹಯೋಗದಲ್ಲಿ ತರಳಬಾಳು ಜಗದ್ಗುರು ಲಿಂ| ಶಿವಕುಮಾರ ಸ್ವಾಮೀಜಿಗಳಿಗೆ ಶ್ರದ್ಧಾಂಜಲಿ ಅಂಗವಾಗಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಬಹುತೇಕ ಜನರು ರಕ್ತದಾನ ಮಾಡಲು ಹೆದರುತ್ತಾರೆ. ಈ ಕುರಿತು ಜಾಗೃತಿ ಮೂಡಿಸಲು ಸರ್ಕಾರ
ಅನೇಕ ಅಭಿಯಾನಗಳನ್ನು ನಡೆಸಿದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಯುವಸಮೂಹ ರಕ್ತದಾನ ಮಾಡಲು
ಮುಂದೆ ಬರುತ್ತಿಲ್ಲ. ದುಶ್ಚಟಗಳಿಂದ ಯುವಕರು ದೂರ ಉಳಿದು ಇನ್ನೊಬ್ಬರ ಜೀವ ಉಳಿಸಲು ಮುಂದಾಗಬೇಕು
ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ರೆಡ್‌ಕ್ರಾಸ್‌ ಅಧ್ಯಕ್ಷ ಡಾ| ರಮೇಶಕುಮಾರ್‌ ಮಾತನಾಡಿ, ರಕ್ತದಾನ ಒಬ್ಬರ ಜೀವ ಉಳಿಸುತ್ತದೆ. ರಕ್ತದಾನ ಮಾಡಿದಾಗ ನಿಮ್ಮ ದೇಹ ಹೊಸ ರಕ್ತ ಪಡೆಯುವ ಅವಕಾಶ ಸಿಗುತ್ತದೆ. ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.

ಪದವಿ ಕಾಲೇಜ್‌ ಅಧ್ಯಕ್ಷ ವಕೀಲ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಪಪೂ ಕಾಲೇಜ್‌ ಪ್ರಾಚಾರ್ಯ ಕೆ.ನೀಲಮ್ಮ, ಪಾಲಿಟೆಟ್ನಿಕ್‌ ಪ್ರಾಚಾರ್ಯ ಯು.ಜಿ. ಶರಣಪ್ಪ, ಪದವಿ ಪ್ರಾಚಾರ್ಯ ಡಾ| ಬಸವಂತಪ್ಪ, ಸಂಸ್ಥೆಯ ಡಿ.ಸಿ.ಪ್ರದೀಪ್‌, ಮಂಜುನಾಥ ಮಾಳಗಿ, ರಾಜಪ್ಪ ಶಂಕ್ರಪ್ಪ, ಚಂದ್ರಪ್ಪ, ಎಚ್‌.ಉಮೇಶ್‌, ಡಿ.ಎಸ್‌. ಬಸವರಾಜ್‌, ಕೆ.ಪಿ.ವೆಂಕಟೇಶ್‌, ಕೆ.ಎಸ್‌.ನಾಗರಾಜ್‌, ಅರುಣಕುಮಾರ್‌, ಕೆ.ಬಿ.ರವೀಂದ್ರ, ಬಿ.ಟಿ.ಬಸವರಾಜ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next