ಉಡುಪಿ: ದೇಶ ಪ್ರತಿ ವರ್ಷ 20 ಲಕ್ಷ ಯೂನಿಟ್ ರಕ್ತದ ಕೊರತೆ ಎದುರಿಸುತ್ತಿದೆ. ಪ್ರಸ್ತುತ ಕೋವಿಡ್-19 ಸೋಂಕು ಬಂದ ಬಳಿಕ ಕೊರತೆ ಪ್ರಮಾಣ ಹೆಚ್ಚಿದೆ. ಇಂತಹ ಸಂದರ್ಭ ಅರಣ್ಯ ಇಲಾಖೆಯ ಅರಣ್ಯರಕ್ಷಕರು ಮತ್ತು ವೀಕ್ಷಕರು ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ರಕ್ತದಾನ ಜೀವ ಕೊಡುವ ವಿಷಯ ಎಂದು ಕುಂದಾಪುರ ಅರಣ್ಯ ಪ್ರಾದೇಶಿಕ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಆಶಿಷ್ ಎಂ.ವಿ. ರೆಡ್ಡಿ ಹೇಳಿದರು.
ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘ ಕುಂದಾಪುರ ಪ್ರಾದೇಶಿಕ ಹಾಗೂ ಕುದುರೆಮುಖ ವನ್ಯಜೀವಿ ವಿಭಾಗ ಮತ್ತು ರಕ್ತನಿಧಿ ಕೇಂದ್ರ, ಜಿಲ್ಲಾ ಸರಕಾರಿ ಆಸ್ಪತ್ರೆ ಆಶ್ರಯದಲ್ಲಿ ಶನಿವಾರ ಟೌನ್ ಹಾಲ್ ಸಮೀಪದ ನೂತನ ಗ್ರಂಥಾಲಯ ಕಟ್ಟಡದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮಾತನಾಡಿ, ಕೋವಿಡ್-19 ವ್ಯಾಪಕವಾಗಿರುವ ಸಂದರ್ಭ ರಕ್ತದಾನ ಮಾಡಲು ವಿವಿಧ ಸಂಘಟನೆಗಳು ಮುಂದೆ ಬಂದಿರುವುದು ಸಂತೋಷದ ಸಂಗತಿ. ಅರಣ್ಯ ಇಲಾಖೆಯವರು ಪ್ರತಿ ವರ್ಷ ಅರಣ್ಯ ಹುತಾತ್ಮ ದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಿದ್ದರು. ಈ ಬಾರಿ ಕೋವಿಡ್-19 ಸಂದರ್ಭ ರಕ್ತದಾನ ಶಿಬಿರ ಏರ್ಪಡಿಸಿದ್ದಾರೆ ಎಂದರು.
ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ಜಿ. ನಾಯಕ್, ಗೌರವಾಧ್ಯಕ್ಷ ದೇವರಾಜ್ ಪಾಣ, ಪ್ರಧಾನ ಕಾರ್ಯದರ್ಶಿ ಕೇಶವ ಪೂಜಾರಿ, ಖಜಾಂಚಿ ಅಭಿಲಾಷ್ ಎಸ್.ಬಿ, ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕಿರಣ್ ಹೆಗ್ಡೆ, ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ| ವೀಣಾಕುಮಾರಿ, ಉಡುಪಿ ವಲಯ ಅರಣ್ಯಾಧಿಕಾರಿ ರಿಚರ್ಡ್ ಲೋಬೋ ಉಪಸ್ಥಿತರಿದ್ದರು.
ರಕ್ತದಾನ ಶಿಬಿರ ಉದ್ಘಾಟಿಸಿದ ಕುಂದಾಪುರ ಅರಣ್ಯ ಪ್ರಾದೇಶಿಕ ವಿಭಾಗದ ಉಪಅರಣ್ಯ ಸಂರಕ್ಷಣಾ ಧಿಕಾರಿ ಆಶಿಷ್ ಎಂ.ವಿ. ರೆಡ್ಡಿ ಶಿಬಿರದಲ್ಲಿ ಸ್ವತಃ ರಕ್ತದಾನ ಮಾಡುವ ಮೂಲಕ ರಕ್ತದಾನದ ಮಹತ್ವ ಸಾರಿದರು.
ಪರಿಹಾರ ನಿಧಿಗೆ ಕೊಡುಗೆ
ಕೋವಿಡ್-19 ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ ಒಂದು ದಿನದ ವೇತನವನ್ನು ಈಗಾಗಲೇ ನೀಡಲಾಗಿದೆ. ಅಲ್ಲದೆ 66,666 ರೂ. ಸಹಾಯಧನವನ್ನು ಶೀಘ್ರ ಜಿಲ್ಲಾಧಿಕಾರಿಗಳ ಮೂಲಕ ಪರಿಹಾರ ನಿಧಿಗೆ ಕಳುಹಿಸಿಕೊಡಲಾಗುವುದು ಎಂದು ಅರಣ್ಯ ವೀಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು ಘೋಷಣೆ ಮಾಡಿದರು.