ಉಡುಪಿ: ಡಾ| ಜಿ. ಶಂಕರ್ ಅವರ ಮಾರ್ಗದರ್ಶನದಲ್ಲಿ ಮೊಗವೀರ ಯುವ ಸಂಘಟನೆ ರಕ್ತದಾನವನ್ನು ನಡೆಸುವ ಮೂಲಕ ಉಡುಪಿ ಜಿಲ್ಲೆ ಈಗಾಗಲೇ ರಕ್ತದಾನಿಗಳ ಜಿಲ್ಲೆ ಎಂದು ಘೋಷಣೆಯಾಗಿದ್ದು ಆ ಮೂಲಕ ಜಿಲ್ಲೆಯಲ್ಲಿ ರಕ್ತದ ಅಭಾವ ಇಲ್ಲವಾಗಿಸಿದ್ದಾರೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಯುವಕರು ರಕ್ತದಾನಕ್ಕೆ ಹಿಂಜರಿಯುತ್ತಿರುವಾಗ ಯುವಕರಲ್ಲಿ ಧೈರ್ಯ ತುಂಬಿ ಅವರನ್ನು ರಕ್ತದಾನಕ್ಕೆ ಪ್ರೇರೆಪಿಸುವ ಜಿ. ಶಂಕರ್ ಅವರ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ| ಚಿದಾನಂದ ಸಂಜು ಅವರು ಹೇಳಿದರು.
ಅವರು ರವಿವಾರ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಜಿಲ್ಲಾ ಮೊಗವೀರ ಯುವ ಸಂಘಟನೆ, ರಕ್ತನಿಧಿ ಕೇಂದ್ರ ಕೆಎಂಸಿ ಮಣಿಪಾಲ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ಮಣಿಪಾಲ ಕೆಎಂಸಿ ರಕ್ತನಿಧಿ ಕೇಂದ್ರದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಶಿವರಾಮ ಕೆ.ಎಂ. ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಶಮೀ ಶಾಸ್ತ್ರಿ, ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷರಾದ ಸಂಜೀವ ಎಂ. ಎಸ್., ಸತೀಶ್ ನಾಯ್ಕ, ಸದಾನಂದ ಬಳ್ಕೂರು, ಗಣೇಶ್ ಕಾಂಚನ್ ಪದಾಧಿಕಾರಿಗಳಾದ ಯತೀಶ್ ಕಿದಿಯೂರು, ರಾಜು ಶ್ರೀಯಾನ್ ಉಪಸ್ಥಿತರಿದ್ದರು.
ರಕ್ತದ ಆಪತ್ಭಾಂಧವ ಸತೀಶ್ ಸಾಲ್ಯಾನ್ ಮತ್ತು ನಿರಂತರ ರಕ್ತದಾನ ಶಿಬಿರವನ್ನು ನಡೆಸುತ್ತಿರುವ ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಶಿವರಾಮ ಕೆ.ಎಂ. ಅವರನ್ನು ಸಮ್ಮಾನಿಸಲಾಯಿತು. ರಕ್ತನಿಧಿಯ ಹಿರಿಯ ಟೆಕ್ನಿಶಿಯನ್ ವಿಶ್ವೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಹಿರಿಯಡ್ಕ ವಂದಿಸಿದರು.
ರಕ್ತದಾನ ಅಭಿಯಾನ ಈಗಾಗಲೇ ಆರಂಭಗೊಂಡಿದ್ದು ರಕ್ತದಾನಿ ಗಳಿಗೆ ಸಾರಿಗೆ ವ್ಯವಸ್ಥೆ, ಉಪಾಹಾರದ ವ್ಯವಸ್ಥೆಗಳೊಂದಿಗೆ ಅತ್ಯಂತ ಹೆಚ್ಚು ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರ ಪ್ರಾಣ ಉಳಿಸುವ ಸಲುವಾಗಿ ಯುವ ಸಮುದಾಯ ನಿರ್ಭೀತಿಯಿಂದ ರಕ್ತದಾನ ಮಾಡಲು ಮುಂದೆ ಬರಬೇಕು.
-ಡಾ| ಜಿ. ಶಂಕರ್ ಪ್ರವರ್ತಕರು, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್