Advertisement

ಎಲ್ಲ ದಾನಕ್ಕಿಂತ ಶ್ರೇಷ್ಠ ದಾನ ರಕ್ತದಾನ: ಚಂದ್ರಹಾಸ್‌ ಕೆ. ಶೆಟ್ಟಿ  

12:04 PM Dec 12, 2021 | Team Udayavani |

ಥಾಣೆ: ನವೋದಯ ಕನ್ನಡ ಸೇವಾ ಸಂಘ ಹಾಗೂ ನವೋದಯ ಇಂಗ್ಲೀಷ್‌ ಹೈಸ್ಕೂಲ್‌ ಮತ್ತು ಜೂನಿಯರ್‌ ಕಾಲೇಜಿನ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವು ಸಂಘದ ಅಧಕ್ಷ ಎಳತ್ತೂರುಗುತ್ತು ದಯಾನಂದ ಎಸ್‌. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನ. 28ರಂದು ಥಾಣೆ ಪಶ್ಚಿಮ ಮುಲುಂಡ್‌ ಚೆಕ್‌ನಾಕಾದ ನವೋದಯ ಜೂನಿಯರ್‌ ಕಾಲೇಜು ಸಭಾಂಗಣದಲ್ಲಿ ನಡೆಯಿತು.

Advertisement

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ ಅವರು ದೀಪ ಬೆಳಗಿಸಿ, ಶಿಬಿರಕ್ಕೆ ಚಾಲನೆಯನ್ನು ನೀಡಿ ಮಾತನಾಡಿ, ಯಾವುದೇ ಖರ್ಚು ಇಲ್ಲದೆ ಆರೋಗ್ಯವಂತ ನಾಗರಿಕರು ಮಾಡಬಹುದಾದ ಸುಲಭವಾದ ದಾನ ರಕ್ತದಾನ. ಆದ್ದರಿಂದ ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠ ದಾನವೆಂದೇ ಹೇಳಬಹುದು. ಇಂತಹ ಉತ್ತಮ ಶಿಬಿರವನ್ನು ಹಮ್ಮಿಕೊಂಡಿರುವುದು ನಿಜವಾಗಿಯೂ ಒಂದು ಅರ್ಥಪೂರ್ಣವಾದ ಕಾರ್ಯಕ್ರಮ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.

ಮುಲುಂಡ್‌ ಪರಿಸರದ ಖ್ಯಾತ ಶಿಶುತಜ್ಞ ಹಾಗೂ ರಕ್ತದಾನ ಶಿಬಿರದ ಮಾರ್ಗದರ್ಶಕರಾದ ಡಾ| ಸತ್ಯಪ್ರಕಾಶ್‌ ಶೆಟ್ಟಿ ಅವರು ಮಾತನಾಡಿ, ಮನುಷ್ಯನ ಜೀವವನ್ನು ಕಾಪಾಡುದರಲ್ಲಿ ರಕ್ತದ ಪಾತ್ರ ಬಹಳ ಮಹತ್ವದಾಗಿದೆ. ಕೊರೊನಾ ಸಂದರ್ಭದಲ್ಲಿ ಮುಂಬಯಿಯ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ರಕ್ತ ನಿಧಿ ಲಭ್ಯವಿಲ್ಲದೆ ಅನೇಕರು ತೊಂದರೆ ಅನುಭವಿಸಿದ್ದಾರೆ. ಮಾತ್ರವಲ್ಲದೆ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ನಾವು ಮೂರು ತಿಂಗಳಲ್ಲಿ ಆರು ರಕ್ತದಾನ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ. ಇದು ಏಳನೇ ಶಿಬಿರ ಎಂದು ಹೇಳಲು ಅಭಿಮಾನವಾಗುತ್ತಿದೆ. ಆದ್ದರಿಂದ 18 ರಿಂದ 65 ವಯೋಮಿತಿಯ ಆರೋಗ್ಯ

ವಂತರು ರಕ್ತದಾನ ಮಾಡಿ, ಹಲವಾರು ಮಂದಿಯ ಜೀವವನ್ನು ಉಳಿಸಬಹುದು. ಇಂತಹ ಸತ್ಕಾರ್ಯವನ್ನು ಆಯೋಜಿಸಿದ ನವೋದಯ ಕನ್ನಡ ಸೇವಾ ಸಂಘದ ಎಲ್ಲ ಪದಾಧಿಕಾರಿಗಳನ್ನು ಹಾಗೂ ಶಿಕ್ಷಣ ಸಂಸ್ಥೆಯವರನ್ನು ಅವರು ಅಭಿನಂದಿಸಿದರು.

ಥಿಂಕ್‌ ಫೌಂಡೇಶನ್‌ ಮುಂಬಯಿ ಇದರ ಉಪಾಧ್ಯಕ್ಷ ವಿನಯ್‌ ಶೆಟ್ಟಿ, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುನಿಲ್‌ ಎಸ್‌. ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ದಯಾನಂದ್‌ ಬಿ. ಹೆಗ್ಡೆ ಹಾಗೂ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ಮತ್ತು ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಮತ್ತು ನವೋದಯ ಇಂಗ್ಲೀಷ್‌ ಹೈಸ್ಕೂಲ್‌ನ ಪ್ರಾಂಶುಪಾಲೆ ಡಾ| ಉಷಾವತಿ ಶೆಟ್ಟಿ, ಶಾಲಾ ಶಿಕ್ಷಕ-ಶಿಕ್ಷಕೇತರ ಸಿಬಂದಿ ಉಪಸ್ಥಿತರಿದ್ದರು.

Advertisement

ಅತಿಥಿಗಳನ್ನು ನವೋದಯ ಇಂಗ್ಲೀಷ್‌ ಹೈಸ್ಕೂಲ್‌ ಮತ್ತು ಜೂನಿರ್ಯರ್‌ ಕಾಲೇಜಿನ ಪ್ರಾಂಶುಪಾಲೆಯಾದ ಡಾ| ಉಷಾವತಿ ಶೆಟ್ಟಿಯವರು ಪರಿಚಯಿಸಿದರು. ಶಾಲಾ ಶಿಕ್ಷಕಿ ಹರ್ಷಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಅನೇಕ ದಾನಿಗಳು ಯಾವುದೇ ರೀತಿಯ ಜಾತಿ ಮತ, ಬೇಧವಿಲ್ಲದೆ ಅಧಿಕ ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು. ಒಟ್ಟು 630 ಯುನಿಟ್‌ ರಕ್ತ ಸಂಗ್ರಹಿಸಿ ಮಹಾತ್ಮ ಗಾಂಧಿ ಬ್ಲಿಡ್‌ ಬ್ಯಾಂಕ್‌, ರೆಡ್‌ಕ್ರಾಸ್‌ ಬ್ಲಿಡ್‌ ಬ್ಯಾಂಕ್‌, ಅರ್ಪಣಾ ಬ್ಲಿಡ್‌ ಬ್ಯಾಂಕ್‌ಗಳಿಗೆ ನೀಡಲಾಯಿತು. ಶಿಬಿರದಲ್ಲಿ ದಾನಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ನಮ್ಮ ನವೋದಯ ಕನ್ನಡ ಸೇವಾ ಸಂಘದ ಪರವಾಗಿ ಇದೇ ಮೊದಲ ಬಾರಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎನ್ನಲು ನಮಗೆ ಹೆಮ್ಮೆ ಅನಿಸುತ್ತದೆ. ಇದಕ್ಕೆ ಸಂಘದ ಎಲ್ಲ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ಮತ್ತು ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು, ಶಾಲೆಯ ಪ್ರಾಂಶುಪಾಲೆ ಮತ್ತು ಎಲ್ಲ ಸಿಬಂದಿ ವರ್ಗದವರು ಬಹಳ ಶ್ರಮ ವಹಿಸಿದ್ದಾರೆ. ಈ ಶಿಬಿರದಲ್ಲಿ ಅವರೆಲ್ಲರ ಶ್ರಮದ ಫಲವಾಗಿ ನಾವು ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರಕ್ತವನ್ನು ಸಂಗ್ರಹಿಸಿದ್ದೇವೆ. ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.-ಎಳತ್ತೂರುಗುತ್ತು ದಯಾನಂದ ಎಸ್‌. ಶೆಟ್ಟಿ,ಅಧ್ಯಕ್ಷ, ನವೋದಯ ಕನ್ನಡ ಸಂಘ ಥಾಣೆ

Advertisement

Udayavani is now on Telegram. Click here to join our channel and stay updated with the latest news.

Next