Advertisement

ಭಾವನಾತ್ಮಕ, ದೈಹಿಕ ಆರೋಗ್ಯಕ್ಕೆ ರಕ್ತದಾನ ಪ್ರಯೋಜನಕಾರಿ: ಸಂಸದ ಗೋಪಾಲ್‌ ಶೆಟ್ಟಿ

10:51 AM Apr 05, 2021 | Team Udayavani |

ಮುಂಬಯಿ: ಅಗತ್ಯವಿರುವವರಿಗೆ ರಕ್ತದಾನ ಮಾಡುವುದರಿಂದ ಮಾನಸಿಕ ನೆಮ್ಮದಿಯ ಜತೆ ಆರೋಗ್ಯವೂ ಸುಧಾರಿಸುತ್ತದೆ. ರಕ್ತದಾನ ಭಾವನಾತ್ಮಕ ಮತ್ತು ದೈಹಿಕ ಆರೋಗ್ಯಕ್ಕೂ ಸಹ ಪ್ರಯೋಜನಕಾರಿಯಾಗಿದೆ. ರಕ್ತ ಪಡೆದುಕೊಂಡ ವರಿಗಿಂತ ರಕ್ತದಾನ ಮಾಡಿದವರಿಗೆ ಇದರಿಂದ ಹೆಚ್ಚಿನ ಪ್ರಯೋಜನ ಲಭಿಸುತ್ತದೆ. ಒಂದು ಬಾಟಲಿ ರಕ್ತ ಮೂರು ಜೀವಗಳನ್ನು ಉಳಿಸು ಸಾಮರ್ಥ್ಯ ಹೊಂದಿದೆ. ಆದ್ದರಿಂದ ರಕ್ತದಾನ ಅಂದರೆ ಜೀವದಾನ ಎಂದರ್ಥ. ಆರೋಗ್ಯವಂತ ನಾಗರೀಕರು ರಕ್ತದಾನ ಮಾಡಿ ಪುಣ್ಯಕ್ಕೆ ಭಾಜನರಾಗಬೇಕು ಎಂದು ಉತ್ತರ ಮುಂಬಯಿ (ಬೋರಿವಿಲಿ) ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್‌ ಸಿ. ಶೆಟ್ಟಿ ಹೇಳಿದರು.

Advertisement

ಕೋವಿಡ್ ಸೋಂಕಿತರ ರಕ್ಷಣೆಗಾಗಿ ಸುಮಾರು 5,000 ಬಾಟಲು ರಕ್ತ ಸಂಗ್ರಹ ಅಭಿಯಾನ ಸಮಿತಿ ಹಮ್ಮಿ ಕೊಂಡಿದ್ದು, ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಬಂಟರ ಸಂಘ ಮುಂಬಯಿ ಇದರ ಶೈಕ್ಷಣಿಕ ನೂತನ ಯೋಜನಾ ಸಮಿತಿ ಉಪಾಧ್ಯಕ್ಷ ಎರ್ಮಾಳ್‌ ಹರೀಶ್‌ ಶೆಟ್ಟಿ ಮುಂದಾಳತ್ವದಲ್ಲಿ ಬಂಟ್ಸ್‌ ಸಂಘ ಮುಂಬಯಿ ಜೋಗೇಶ್ವರಿ ದಹಿಸರ್‌ ಪ್ರಾದೇಶಿಕ ಸಮಿತಿ ರವಿವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಬೋರಿವಿಲಿ ಪಶ್ಚಿಮದ ನ್ಯೂಲಿಂಕ್‌ ರೋಡ್‌ನ‌ಲ್ಲಿನ ಲಿಂಕ್‌ ವೀವ್‌ ಹೊಟೇಲ್‌ನಲ್ಲಿ ಆಯೋಜಿಸಿದ್ದ ಬೃಹತ್‌ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಸಂಸದರು ಮಾತನಾಡಿದರು.

ಕೋವಿಡ್ ಸೋಂಕಿನಿಂದ ಭಯಗೊಂಡಿರುವ ಜನರು ಅನಾವಶ್ಯಕವಾಗಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ. ಇದರಿಂದ ಚಿಕಿತ್ಸೆಯ ಅಗತ್ಯವಿರುವವರಿಗೆ ಹಾಸಿಗೆಗಳು ಸಿಗುತ್ತಿಲ್ಲ. ಈ ಕುರಿತಂತೆ ಸರಕಾರ ಮಾರ್ಗಸೂಚಿ ಹೊರಡಿಸಬೇಕು. ಕೊರೊನಾ ಕುರಿತು ಜನತೆ ನಿಶ್ಚಿಂತಿರಾಗದೆ ಜಾಗ್ರತೆ ವಹಿಸುವ ಅಗತ್ಯವಿದೆ. ಕೋವಿಡ್‌ ಸಮಯದಲ್ಲಿ ಹೊಟೇಲು ಉದ್ಯಮಿಗಳ ಸೇವೆ ಪ್ರಮುಖವಾಗಿದೆ. ಇಡೀ ವರ್ಷವನ್ನು ಜನತಾ ಸೇವೆಯಲ್ಲಿ ಮುಡಿಪಾಗಿರಿ ಸಿದ ಹೊಟೇಲು ಉದ್ಯಮಿಗಳ ಸಮಸ್ಯೆಗಳನ್ನು ಸರಕಾರಕ್ಕೆ ಮನವರಿಸಲು ಯಾವುದೇ ರಾಜಕೀಯ ಪಕ್ಷಗಳು ಸಹಕರಿಸುತ್ತಿಲ್ಲ ಎನ್ನವುದು ದುರದೃಷ್ಟ. ಸದ್ಯ ರಾತ್ರಿ 8 ಗಂಟೆಗೆ ಹೊಟೇಲುಗಳನ್ನು ಮುಚ್ಚುವಂತೆ ಸರಕಾರ ಆದೇಶ ಹೊರಡಿಸಿದೆ. ಇವುಗಳನ್ನೆಲ್ಲಾ ಮರೆತು ಹೊಟೇಲಿಗರು ಇಂತಹ ರಕ್ತದಾನದಂತಹ ಪುಣ್ಯ ಕಾರ್ಯಕ್ರಮ ಆಯೋಜಿಸುತ್ತಿರುವುದು ಸ್ವಾಗತಾರ್ಹ ಎಂದೂ ಗೋಪಾಲ್‌ ಶೆಟ್ಟಿ ಹೊಟೇಲು ಉದ್ಯಮಿಗಳ ಸೇವೆಯನ್ನು ಪ್ರಶಂಸಿದರು.

ಬಂಟ್ಸ್‌ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ನಗರ ಸೇವಕರಾದ ಶಿವಾನಂದ ಶೆಟ್ಟಿ, ಅಂಜಲಿ ಖೇಡೆಕರ್‌, ಬೀನಾ ಧೋಶಿ, ಬಿಜೆಪಿ ಧುರೀಣ ಎಸ್‌.ಗಣೇಶ್‌, ಬಂಟ್ಸ್‌ ಸಂಘದ ಗೌ| ಪ್ರ| ಕಾರ್ಯದರ್ಶಿ ಡಾ| ಆರ್‌.ಕೆ ಶೆಟ್ಟಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್‌.ಪಯ್ಯಡೆ, ಸ್ಥಿರಾಸ್ತಿ ಆಡಳಿತ ಸಮಿತಿ ಕಾರ್ಯಧ್ಯಕ್ಷ ವಿಠಲ್‌ ಎಸ್‌.ಆಳ್ವ,  ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಗಿರೀಶ್‌ ಶೆಟ್ಟಿ ತೆಳ್ಳಾರ್‌, ಜೋಗೆಶ್ವರಿ ದಹಿಸರ್‌ ಪ್ರಾದೇಶಿಕ ಸಮಿತಿ ಗೌ| ಪ್ರ| ಕಾರ್ಯದರ್ಶಿ ಅಶೋಕ್‌ ವಿ.ಶೆಟ್ಟಿ, ಆರೋಗ್ಯ ಸಮಿತಿ ಕಾರ್ಯಾಧ್ಯಕ್ಷ ನಾಗರಾಜ್‌ ಶೆಟ್ಟಿ, ಮಾಜಿ ಕಾರ್ಯಧ್ಯಕ್ಷ ವಿಜಯ ಆರ್‌.

ಭಂಡಾರಿ, ಸಂಘಟಕ ರವೀಂದ್ರ ಎಸ್‌.ಶೆಟ್ಟಿ, ಭಾರತ್‌ ಬ್ಯಾಂಕ್‌ನ ನಿರ್ದೇಶಕ ಗಂಗಾಧರ್‌ ಜೆ. ಪೂಜಾರಿ ವೇದಿಕೆಯಲ್ಲಿದ್ದರು.

Advertisement

ಈ ಸಂದರ್ಭ ಮಾತನಾಡಿದ ಚದ್ರಹಾಸ ಶೆಟ್ಟಿ ಅವರು, ಸದ್ಯದ ಪರಿಸ್ಥಿತಿಯಲ್ಲಿ ರಕ್ತದ ಅತ್ಯ ಆವಶ್ಯಕತೆಯಿದೆ. ಇದನ್ನು ಅರಿತುಕೊಂಡು ಶಿಬಿರ ಆಯೋಜಿಸಿದ ಸಂಸದ ಗೋಪಾಲ್‌ ಶೆಟ್ಟಿ ಅವರ ಮಾನವೀಯ ಕಳಕಳಿ ಪ್ರಶಂಸನೀಯ. ರಕ್ತದಾನದಿಂದ ದಾನಿಗೆ ಅನುಕೂಲಗಳೇ ಜಾಸ್ತಿ. ಇದರಿಂದ ಸ್ವತಃ ದೇಹದಲ್ಲಿನ ರೋಗ, ಅನಾನೂಕೂಲತೆಗಳು ದೂರ ಸರಿದು ಮತ್ತೂಬ್ಬರ ಅನುಕೂಲಕ್ಕೆ ಪೂರಕ  ಆಗಬಲ್ಲದು ಎಂದರು.

ಡಾ| ಆರ್‌.ಕೆ ಶೆಟ್ಟಿ ಅವರು ಮಾತನಾಡಿ, ನಿಯಮಿತವಾಗಿ ರಕ್ತದಾನ ಮಾಡಿದರೆ ನಮ್ಮಲ್ಲಿ ರಕ್ತದೊತ್ತಡ ಕಡಿಮೆಯಾಗಲು ಅನುಕೂಲ ಕರವಾಗುತ್ತದೆ. ನಾವು ರಕ್ತದಾನ ಮಾಡಿ ಬೇರೆಯವರಿಗೆ ಪ್ರೇರಣೆಯಾಗಬಹುದು. ಪರರ ಜೀವನಕ್ಕಾಗಿ ನಮ್ಮ ಜೀವನ ಎಂದು ಅರಿತಾಗ ಮಾತ್ರ ಇಂತಹ ಸೇವೆಗಳು ನಡೆಯಲು ಸಾದ್ಯ ಎಂದು ತಿಳಿಸಿದರು.

ಶಿಬಿರದ ಪ್ರಧಾನ ಸಂಘಟಕ, ಸಂಸದ ಗೋಪಾಲ್‌ ಸಿ.ಶೆಟ್ಟಿ ತುಳು ಕನ್ನಡಿಗರ ಅಭಿಮಾನಿ ಬಳಗದ ಸಂಚಾಲಕ ಎರ್ಮಾಳ್‌ ಹರೀಶ್‌ ಶೆಟ್ಟಿ ಅವರು ಮಾತನಾಡಿ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಮತ್ತು ಆಹಾರ್‌ ಇನ್ನಿತರ ಸಂಸ್ಥೆಗಳೂ ಈ ಕಾರ್ಯಕ್ರಮದಲ್ಲಿ ಸಹಯೋಗ ನೀಡಿದ್ದು, ನಮ್ಮಿಂದ ಸಾಧ್ಯವಾದಷ್ಟು ರಕ್ತ ಸಂಗ್ರಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು. ನವಜೀವನ್‌ ಬ್ಲಿಡ್‌ ಬ್ಯಾಂಕ್‌ ಮುಖೇನ ಸುಮಾರು 300 ಬಾಟಲಿ ರಕ್ತ ಸಂಗ್ರಹಿಸುವ ಆಶಯ ಹೊಂದಿದ್ದು, 160 ಬಾಟಲಿ ಸಗ್ರಹಿಸಲಾಗಿದೆ ಎಂದು ತಿಳಿಸಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಉಪಾಧ್ಯಕ್ಷರಾದ ಶಂಕರ ಡಿ. ಪೂಜಾರಿ, ಶ್ರೀನಿವಾಸ ಆರ್‌. ಕರ್ಕೆàರ, ಹಾಗೂ ಕೇಶವ ಕೆ. ಕೋಟ್ಯಾನ್‌, ಸದಾಶಿವ ಎ. ಕರ್ಕೆರ, ಧರ್ಮಪಾಲ ಜಿ. ಅಂಚನ್‌, ಮೋಹನ್‌ ಡಿ. ಪೂಜಾರಿ, ನಾಗೇಶ್‌ ಎಂ. ಕೋಟ್ಯಾನ್‌, ರಜಿತ್‌ ಎಂ. ಸುವರ್ಣ, ಪ್ರೇಮನಾಥ್‌ ಪಿ. ಕೋಟ್ಯಾನ್‌, ಸುರೇಶ್‌ ಅಂಚನ್‌, ಆಹಾರ್‌ (ಇಂಡಿಯನ್‌ ಹೊಟೇಲ್‌ ಆ್ಯಂಡ್‌ ರೆಸ್ಟೋರೆಂಟ್‌ ಅಸೋಸಿಯೇಶನ್‌) ವಲಯ 10ರ ಕಾರ್ಯಾಧ್ಯಕ್ಷ ಸತೀಶ್‌ ಶೆಟ್ಟಿ ಮತ್ತಿತರ ಪದಾಧಿಕಾರಿಗಳು, ಅನಿಲ್‌ ಸಾಲ್ಯಾನ್‌, ಸುರೇಶ್‌ ಶೆಟ್ಟಿ, ಪ್ರಕಾಶ್‌ ಎ. ಶೆಟ್ಟಿ (ಎಲ್‌ಐಸಿ), ರಘುನಾಥ್‌ ಎನ್‌. ಶೆಟ್ಟಿ, ಅಶೋಕ್‌ ಶೆಟ್ಟಿ, ನಿಲೇಶ್‌ ಶೆಟ್ಟಿ, ನಾಗರಾಜ ಶೆಟ್ಟಿ, ಶೈಲಜಾ ಶೆಟ್ಟಿ, ಧೀರಜ್‌ ಡಿ. ರೈ, ಪೇಟೆಮನೆ ಪ್ರಕಾಶ್‌ ಶೆಟ್ಟಿ, ಕಾರ್ತಿಕ್‌ ಶೆಟ್ಟಿ ಎರ್ಮಾಳ್‌, ವಾಸು ಪುತ್ರನ್‌ ಬೋರಿವಲಿ, ನ್ಯಾಯವಾದಿ ರಶ್ಮೀ ಸುತವಳೆ ಮತ್ತಿತರರು ಉಪಸ್ಥಿತರಿದ್ದರು.

ನವಜೀವನ್‌ ಬ್ಲಿಡ್‌ ಬ್ಯಾಂಕ್‌ ಬೋರಿವಲಿ ಪಶ್ಚಿಮ ಇದರ ಡಾ| ಜೀನಲ್‌ ಪೋಂಡ ಮತ್ತು ವೈದ್ಯರು ರಕ್ತ ಸಂಗ್ರಹಣೆ ನಡೆಸಿತು.

ಸಂಸದ ಗೋಪಾಲ್‌ ಶೆಟ್ಟಿ ಅವರು ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರ ವಿತರಿಸಿದರು. ಈ ಸಂದರ್ಭ ಕ್ರೀಡಾಪಟು ಸಂದೀಪ್‌ ಯಾದವ್‌ ಇವರ ಸಾಧನೆಯನ್ನು ಗುರುತಿಸಿ ಸತ್ಕರಿಸಿ ಅಭಿನಂದಿಸಿದರು. ಎರ್ಮಾಳ್‌ ಹರೀಶ್‌ ಶೆಟ್ಟಿ ಸ್ವಾಗತಿಸಿ ಸಂಘಟಕರು, ವಿವಿಧ ಸಂಸ್ಥೆಗಳ ಮುಖ್ಯಸ್ಥರನ್ನು ಗೌರವಿಸಿದರು. ಮಹೇಶ್‌ ರಾವ್‌ ಕಾರ್ಯಕ್ರಮ ನಿರೂಪಿಸಿದರು. ಬಾಳ ಪಾಟ್ಕರ್‌ ವಂದಿಸಿದರು.

 

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next