Advertisement

ರಕ್ತದಾನ ಜಾಗೃತಿ: ರಾಜ್ಯದಲ್ಲೇ ವಿನೂತನ ಸಾಧನೆ!

03:13 PM Sep 24, 2018 | Team Udayavani |

ಬೆಳಗಾವಿ: ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಉಳಿದ ಜಿಲ್ಲೆಗಳಿಗೆ ಮಾದರಿಯಾಗುತ್ತಿರುವ ಬೆಳಗಾವಿ ಜಿಪಂ ಗ್ರಾಪಂಗಳಲ್ಲಿ ರಕ್ತದಾನ ಶಿಬಿರ ನಡೆಸಿ ಜಾಗೃತಿ ಮೂಡಿಸುವ ಮೂಲಕ ರಾಜ್ಯದಲ್ಲೇ ವಿನೂತನ ಸಾಧನೆ ಮಾಡಿದೆ. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಮಚಂದ್ರನ್‌ ಅವರ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ರಕ್ತದಾನ ಶಿಬಿರ ನಡೆಸಿ ಅಲ್ಲಿನ ಜನರಿಗೆ ರಕ್ತದಾನ ಮಹತ್ವ ತಿಳಿಸುವುದಲ್ಲದೇ ಅವರಿಂದ ರಕ್ತ ಸಂಗ್ರಹಿಸಿ ಮುಂದೆ ಅಗತ್ಯ ಇರುವವರಿಗೆ ಈ ರಕ್ತ ನೀಡುವುದು ಅಭಿಯಾನದ ಮುಖ್ಯ ಉದ್ದೇಶವಾಗಿತ್ತು.

Advertisement

126 ಗ್ರಾಪಂಗಳಲ್ಲಿ ಶಿಬಿರ ಆಯೋಜನೆ: ಕಳೆದ ವರ್ಷ ಏ.14 ರಂದು ಅಂಬೇಡ್ಕರ್‌ ದಿನಾಚರಣೆ ಸಂದರ್ಭದಲ್ಲಿ ಆರಂಭಿಸಲಾದ ಈ ರಕ್ತದಾನ ಶಿಬಿರ ಇದುವರೆಗೆ ಜಿಲ್ಲೆಯ 126 ಗ್ರಾಮ ಪಂಚಾಯತ್‌ಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಈ ಶಿಬಿರಗಳಿಂದ ಜಿಲ್ಲೆಯಲ್ಲಿ 18 ತಿಂಗಳಲ್ಲಿ 6,162 ಕ್ಕೂ ಹೆಚ್ಚು ಯುನಿಟ್‌ ರಕ್ತ ಸಂಗ್ರಹ ಮಾಡಿ ಅನೇಕ ಜನರಿಗೆ ಇದರ ಪ್ರಯೋಜನ ಕಲ್ಪಿಸಲಾಗಿದೆ.

ಜಿಲ್ಲಾ ಆಸ್ಪತ್ರೆ, 139 ಪ್ರಾಥಮಿಕ ಆರೋಗ್ಯ ಕೇಂದ್ರ, 10 ಸಮುದಾಯ ಆರೋಗ್ಯ ಕೇಂದ್ರ, 9 ತಾಲೂಕು ಆಸ್ಪತ್ರೆ, 12 ನಗರ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗಳಿದ್ದು ಚಿಕಿತ್ಸೆಗೆ ಪ್ರತಿ ವರ್ಷ ಸಹಸ್ರಾರು ರೋಗಿಗಳು ಬರುತ್ತಾರೆ. ಈ ರೋಗಿಗಳಿಗೆ ರಕ್ತದ ಕೊರತೆ ಉಂಟಾಗಬಾರದು ಎಂಬ ಉದ್ದೇಶದಿಂದ ಈ ರಕ್ತದಾನ ಶಿಬಿರ ಅಭಿಯಾನ ನಡೆಸಲಾಗುತ್ತಿದೆ. ಇದರ ಮೂಲಕ ಗ್ರಾಮೀಣ ಜನರಲ್ಲಿ ರಕ್ತದಾನ ಮಹತ್ವ ತಿಳಿಸಿಕೊಟ್ಟಂತಾಗುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. 

ರಕ್ತದಾನ ಎಲ್ಲ ಭಾಷೆ, ಜಾತಿ ಮೊದಲಾದ ವಿವಾದಗಳಿಂದ ಹೊರತಾಗಿದೆ. ಇಲ್ಲಿ ನಿಜವಾದ ಮಾನವೀಯತೆ ವ್ಯಕ್ತವಾಗುತ್ತದೆ. ಸಮಾಜದಲ್ಲಿ ಒಳ್ಳೆಯತನ ಹಾಗೂ ಮಾನವೀಯತೆ ಇದೆ ಎಂಬುದಕ್ಕೆ ಈ ರಕ್ತದಾನವೇ ಸಾಕ್ಷಿ. ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಕಾರ್ಯಕ್ರಮಗಳಿಂದ ಸಂಬಂಧಗಳು ಬೆಳೆಯುತ್ತವೆ. ರಕ್ತದಾನಿಗಳ ಪರಿಚಯವಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಹೆಚ್ಚು ಸ್ಪಂದನೆ ಸಿಕ್ಕಿದೆ ಎಂದು ಜಿಪಂ ಸಿಇಒ ರಾಮಚಂದ್ರನ್‌ ಹೇಳಿದ್ದಾರೆ.

ದೇಶದ ಯಾವುದೇ ಭಾಗದಲ್ಲಿ ಗ್ರಾಪಂಗಳಿಂದ ಇಂತಹ ಕಾರ್ಯಕ್ರಮ ನಡೆದ ಉದಾಹರಣೆಗಳಿಲ್ಲ. ರಾಜ್ಯದಲ್ಲಿ ಯಾವ ಜಿಲ್ಲಾ ಪಂಚಾಯತ್‌ಗಳಲ್ಲೂ ಈ ರೀತಿ ಕಾರ್ಯಕ್ರಮ ಮಾಡಿಲ್ಲ ಇದಕ್ಕೆ ಜನರ ಸಹಕಾರ ಮುಖ್ಯ. ಈ ಕಾರ್ಯಕ್ರಮ ಆರಂಭ ಮಾಡಿದಾಗಿನಿಂದ ಜಿಲ್ಲೆಯ ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಹೆಚ್ಚಾಗಿದೆ. ಜಿಲ್ಲೆಯ 506 ಗ್ರಾಪಂಗಳ ಪೈಕಿ ಇದುವರೆಗೆ 126 ಗ್ರಾಪಂಗಳಲ್ಲಿ ಹಮ್ಮಿಕೊಂಡಿರುವ ಈ ರಕ್ತ ಸಂಗ್ರಹ ಅಭಿಯಾನಕ್ಕೆ ಎರಡು ವರ್ಷದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. 18 ತಿಂಗಳಲ್ಲಿ 126 ಶಿಬಿರಗಳನ್ನು ನಡೆಸಿ 6162 ಯುನಿಟ್‌ ( 350 ಮಿಲೀ) ರಕ್ತ ಸಂಗ್ರಹಿಸಲಾಗಿದೆ. ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎನ್ನುತ್ತಾರೆ ಸಿಇಒ ರಾಮಚಂದ್ರನ್‌.

Advertisement

ಶಿಬಿರವೊಂದರಲ್ಲಿ ಸುಮಾರು 50 ರಿಂದ 100 ಯುನಿಟ್‌ಗಳವರೆಗೆ ರಕ್ತ ಸಂಗ್ರಹಿಸಲಾಗುತ್ತದೆ. ಎಲ್ಲ ತಾಲೂಕುಗಳಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ. ಸಂಗ್ರಹಿಸಿದ ರಕ್ತವನ್ನು ಜಿಲ್ಲಾಸ್ಪತ್ರೆ ಮತ್ತು ಬೆಂಗಳೂರಿನ ನಿಮಾನ್ಸ್‌ನಲ್ಲಿ ಪರೀಕ್ಷೆ ಮಾಡಿಸಿ ಎಚ್‌ಐವಿ, ಮಲೇರಿಯಾ, ಕಾಮಾಲೆ ಮೊದಲಾದ ರೋಗಗಳ ತಪಾಸಣೆ ಮಾಡಿದ ನಂತರವೇ ತಾಲೂಕು ಸಂಗ್ರಹಣಾ ಕೇಂದ್ರಗಳಿಗೆ ಕಳಿಸಿ ಅಲ್ಲಿ ಅಗತ್ಯಕ್ಕೆ ಅನುಗುಣವಾಗಿ ಆಸ್ಪತ್ರೆಗಳಿಗೆ ಪೂರೈಸಲಾಗುತ್ತದೆ ಎಂದು ಹೇಳುತ್ತಾರೆ ಕಾರ್ಯಕ್ರಮದ ಉಸ್ತುವಾರಿ ವಹಿಸಿರುವ ಜಿಲ್ಲಾ ಎಚ್‌ಐವಿ ಮತ್ತು ಏಡ್ಸ್‌ ನಿಯಂತ್ರಣಾ ಕಾರ್ಯಕ್ರಮ ಅಧಿಕಾರಿ ಡಾ| ಶೈಲಜಾ ತಮ್ಮಣ್ಣವರ.

ಪ್ರತಿ ತಿಂಗಳು ಆರೋಗ್ಯ ಇಲಾಖೆ ಹಾಗೂ ಜಿಪಂ ಅಧಿಕಾರಿಗಳ ಸಭೆ ನಡೆಸುವ ಸಿಇಒ ರಾಮಚಂದ್ರನ್‌ ಜಿಲ್ಲೆಯ ಎಲ್ಲ ತಾಲೂಕಿನ ಒಂದು ಗ್ರಾಪಂ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ರೀತಿ ಆಯ್ಕೆಯಾದ ಗ್ರಾಪಂ ಅಧ್ಯಕ್ಷ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಗೆ ರಕ್ತದಾನ ಶಿಬಿರದ ಮಾಹಿತಿ ನೀಡಿ ದಿನಾಂಕ ಗೊತ್ತು ಪಡಿಸಲಾಗುತ್ತದೆ. ನಂತರ ಗ್ರಾಪಂ ಕಚೇರಿ, ಸಮುದಾಯ ಭವನ ಇಲ್ಲವೇ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಶಿಬಿರ ನಡೆಸಿ ಅಲ್ಲಿ ರಕ್ತ ಸಂಗ್ರಹಿಸಿ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಲಾಗುತ್ತದೆ.

ಆರಂಭದಲ್ಲೇ ಯಶಸ್ಸು: ಬೆಳಗಾವಿ ನಗರದಲ್ಲಿ 2017ರ ಏಪ್ರಿಲ್‌ 14 ರಂದು ಸಾಂಕೇತಿಕವಾಗಿ ಮಾಡಿದಾಗ 26 ಯುನಿಟ್‌ ರಕ್ತ ಸಂಗ್ರಹಿಸಲಾಗಿತ್ತು. ನಗರ ಪ್ರದೇಶದ ರಕ್ತದಾನ ಶಿಬಿರಗಳನ್ನು ಗ್ರಾಮ ಮಟ್ಟಕ್ಕೆ ಒಯ್ಯಬೇಕು ಎಂಬ ವಿಚಾರಕ್ಕೆ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಮಚಂದ್ರನ್‌ ಕೈಜೋಡಿಸಿದರು. ಅವರ ಆಸಕ್ತಿಯ ಫಲವಾಗಿ ಕಳೆದ ವರ್ಷ ಮೂರು ತಿಂಗಳಲ್ಲೇ 888 ಯುನಿಟ್‌ ರಕ್ತ ಸಂಗ್ರಹಿಸಲಾಗಿದೆ. ಒಂದೇ ವರ್ಷದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಜನರ ಸಹಕಾರ ಸಿಕ್ಕಿದೆ ಎನ್ನುತ್ತಾರೆ ಡಾ. ಶೈಲಜಾ ತಮ್ಮಣ್ಣವರ.

ಗ್ರಾಮ ಪಂಚಾಯತ್‌ಗಳಲ್ಲಿ ಕೈಗೊಂಡಿರುವ ಈ ರಕ್ತದಾನ ಶಿಬಿರಕ್ಕೆ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಉತ್ತಮ ಸ್ಪಂದನೆ ದೊರಕುತ್ತಿದೆ. ಅನೇಕ ಕಡೆ ಜನರೇ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದೆ ಬರುತ್ತಿದ್ದಾರೆ. ಗ್ರಾಪಂ ಸದಸ್ಯರು ಹಾಗೂ ಪಿಡಿಒಗಳ ಸಹಕಾರ ಉತ್ತಮವಾಗಿದೆ. ಎಲ್ಲಿಯೂ ನಮಗೆ ಸಮಸ್ಯೆಯಾಗಿಲ್ಲ. ಹೀಗಾಗಿ ಒಂದೊಂದು ಶಿಬಿರದಲ್ಲಿ 50 ರಿಂದ 200 ಯುನಿಟ್‌ ಗಳವರೆಗೆ ರಕ್ತ ಸಂಗ್ರಹಿಸುತ್ತಿದ್ದೇವೆ. 
 ಡಾ| ಅಪ್ಪಾಸಾಹೇಬ ನರಟ್ಟಿ ,
 ಜಿಲ್ಲಾ ಆರೋಗ್ಯಾಧಿಕಾರಿ

ಹೆರಿಗೆ ಸಮಯದಲ್ಲಿ ಉಂಟಾಗುವ ರಕ್ತಸ್ರಾವ, ಅಪಘಾತ ಸಂಭವಿಸಿದಾಗ ಶಸ್ತ್ರಚಿಕಿತ್ಸೆ ನಡೆಸುವಾಗ ರಕ್ತದ ಕೊರತೆ ಕಂಡು ಬರುತ್ತದೆ. ಇದರಿಂದ ಅನೇಕರು ಸಾಯುತ್ತಿದ್ದಾರೆ. ಎಲ್ಲಿಯೂ ರಕ್ತದ ಕೊರತೆ ಕಾಣಬಾರದು ಎಂಬುದು ಈ ಕಾರ್ಯಕ್ರಮದ ಮೂಲ ಉದ್ದೇಶ. ಇದರ ಜೊತೆಗೆ ಗ್ರಾಮೀಣ ಪ್ರದೇಶದ ಜನರಲ್ಲಿ ರಕ್ತದಾನ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ಗುರಿಯೊಂದಿಗೆ ಗ್ರಾಪಂಗಳಲ್ಲಿ ಈ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ.
ರಾಮಚಂದ್ರನ್‌ ಜಿಪಂ ಸಿಇಒ

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next