Advertisement
ಇಂದು (ಜೂನ್ 14) ರಕ್ತದ ಗುಂಪುಗಳನ್ನು ವಿಭಾಗಿಸಿ ಹೆಸರಿಸಿದ ವೈದ್ಯ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೈನರ್ ಅವರ ಜನ್ಮದಿನ. ಅವರ ಸ್ಮರಣಾರ್ಥ ಈ ದಿನವನ್ನು ವಿಶ್ವ ರಕ್ತದಾನಿಗಳ ದಿನ ಎಂದು ಆಚರಿಸಲಾಗುತ್ತದೆ. ರಕ್ತದಾನದ ಮಹತ್ವದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ, ರಕ್ತದಾನಕ್ಕೆ ಪ್ರೇರಣೆ ನೀಡುವ ಮತ್ತು ರಕ್ತದಾನಿಗಳನ್ನು ಗೌರವಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು 2004ರ ಜೂನ್ 14ರಂದು ಮೊದಲ ಬಾರಿಗೆ ವಿಶ್ವ ರಕ್ತದಾನ ದಿನವನ್ನು ಆಚರಿಸುವ ನಿರ್ಣಯ ಕೈಗೊಂಡಿತು. 2005ರಿಂದ ಪ್ರತೀ ವರ್ಷ ಜಗತ್ತಿನಾದ್ಯಂತ ವಿವಿಧ ಕಾರ್ಯಕ್ರಮಗಳೊಂದಿಗೆ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಪರೋಪಕಾರಾಯ ದುಹಂತಿ ಗಾವ| ಪರೋಪಕಾರಾಯ ಇದಂ ಶರೀರಂ|” ಶುಭಾಷಿತ ವಚನೋಕ್ತಿಯ ಸಾಲುಗಳ ಆಶಯದಂತೆ ಉಪಕಾರವೆಂದರೆ ಫಲ ನೀಡುವ ವೃಕ್ಷದಂತೆ, ಹರಿಯುವ ನದಿಯಂತೆ, ಗೋವಿನಂತೆ, ಪರೋಪಕಾರಕ್ಕಾಗಿ ಶರೀರ. ಈ ಹಿತನುಡಿಗಳನ್ನು ಜಗತ್ತಿನಾದ್ಯಂತ ಗರಿಷ್ಠ ಪ್ರಮಾಣದಲ್ಲಿ ನಡೆಸಿಕೊಡುವ ಸಾಧಕರು ರಕ್ತದಾನಿಗಳು.
Related Articles
Advertisement
1868ರ ಜೂನ್ 14ರಂದು ಜನಿಸಿದ ಕಾರ್ಲ್ ಲ್ಯಾಂಡ್ ಸ್ಟೈನರ್ ವಿಯನ್ನಾ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ವಿಜ್ಞಾನದ ವಿದ್ಯಾರ್ಜನೆ ಮಾಡಿದರು. ವೈದ್ಯಕೀಯ ವಿಜ್ಞಾನಿಯಾಗಿ, ಶರೀರ ಶಾಸ್ತ್ರಜ್ಞರಾಗಿ, ಚಿಕಿತ್ಸಕರಾಗಿ, ಸಂಶೋಧಕರಾಗಿ ಬಹು ಮುಖ ಸೇವೆಗೈದ ಪರೋಪಕಾರಿ ಮಹಾ ಪುರುಷ. 1937ರಲ್ಲಿ ಲ್ಯಾಂಡ್‌ಸ್ಟೈನರ್ ಮತ್ತು ಅಲೆಕ್ಸಾಂಡರ್ ವಿನಿಕ್ ಅವರು ಪಾಲ್ಗೊಂಡು ರಕ್ತದ ರೀಹಸ್ ಫ್ಯಾಕ್ಟರ್ (R.H. Factor) ಅನ್ನು ಕಂಡು ಹಿಡಿದರು. ಎ, ಬಿ, ಎಬಿ, ಒ ಇತ್ಯಾದಿಯಾಗಿ ರಕ್ತದ ಗುಂಪುಗಳನ್ನು ಹೆಸರಿಸಿದ ಲ್ಯಾಂಡ್‌ಸ್ಟೈನರ್ ಜಾಗತಿಕವಾಗಿ ಕೊಡುಗೆ ನೀಡಿದ ಆರೋಗ್ಯ ವಿಜ್ಞಾನಿ. 1943ರ ಜೂನ್ 26ರಂದು ಅಮೆರಿಕದ ನ್ಯೂಯಾರ್ಕ್‌ನಲ್ಲಿ ತಮ್ಮ 75ರ ಹರೆಯದಲ್ಲಿ ಅವರು ದಿವಂಗತರಾದರು.
ತಮ್ಮ ಜೀವಿತದ ಬಹುಭಾಗವನ್ನು ಸಾರ್ವತ್ರಿಕ ಆರೋಗ್ಯ ಕ್ಷೇತ್ರದಲ್ಲಿ ವಿನಿಯೋಗಿಸಿಕೊಂಡ ಅವರಿಗೆ ಅನೇಕ ಗೌರವಗಳು ಅರ್ಹವಾಗಿ ಪ್ರದಾನವಾಗಿವೆ. 1938ರಲ್ಲಿ ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದಿಂದ ಲ್ಯಾಂಡ್‌ಸ್ಟೈನರ್ ಅವರ ಔಷಧೀಯ ಚಿಕಿತ್ಸಾ ಸಾಧನೆಗೆ (Therapetic) ಪ್ರಶಸ್ತಿ, 1946ರಲ್ಲಿ ಮರಣೋತ್ತರವಾಗಿ ಜಾಗತಿಕವಾದ ಲಷ್ಕರ್ ಪ್ರಶಸ್ತಿ ನೀಡಲಾಗಿದೆ. ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಅವರು ಕೈಗೊಂಡ ಶ್ರೇಷ್ಠ ಸಾಧನೆಯನ್ನು ಗಮನಿಸಿ 1930ನೆಯ ಇಸವಿಯಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿ ಪ್ರದಾನ ಮಾಡಲಾಯಿತು.ರಕ್ತದಾನ ಎನ್ನುವುದು ಅತ್ಯಂತ ಪವಿತ್ರವಾದ ದಾನ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೂಬ್ಬ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ಆ ಕಾರಣದಿಂದಲೇ ರಕ್ತದಾನವನ್ನು ಜೀವದಾನ ಎಂದು ಕರೆಯಲಾಗುತ್ತದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯ ವಿಲ್ಲದಿರುವುದರಿಂದ ರಕ್ತಕ್ಕೆ ಪರ್ಯಾಯವಿಲ್ಲ. ರಕ್ತವನ್ನು ಇನ್ನೊಬ್ಬ ವ್ಯಕ್ತಿಯ ದೇಹದಿಂದ ಮಾತ್ರ ಸಂಗ್ರಹಿಸಲು ಸಾಧ್ಯ. ಹೀಗೆ ಸಂಗ್ರಹಿಸಿದ ರಕ್ತವು 35ರಿಂದ 40 ದಿನಗಳ ವರೆಗೆ ಮಾತ್ರ ತನ್ನ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ. ರಕ್ತ ನಮ್ಮ ದೇಹದ ಅತೀ ಅಮೂಲ್ಯವಾದ ದ್ರವ್ಯ. ರಕ್ತದ ಅಗತ್ಯದ ಮತ್ತು ತುರ್ತು ಚಿಕಿತ್ಸೆಯ ಸಮಯದಲ್ಲಿ ರಕ್ತದಾನಿಗಳ ರಕ್ತವನ್ನೇ ರೋಗಿಗಳು ಅವಲಂಬಿಸಿರುತ್ತಾರೆ. ಅಪಘಾತ ಸಂಭವಿಸಿ ಗಾಯಗೊಂಡವರ ಚಿಕಿತ್ಸೆಯ ಸಂದರ್ಭದಲ್ಲಿ, ತುರ್ತು ಶಸ್ತ್ರಚಿಕಿತ್ಸೆ, ಚಿಕಿತ್ಸೆಯ ಸಮಯದಲ್ಲಿ, ರಕ್ತದ ಕ್ಯಾನ್ಸರ್ ರೋಗಿಗಳಿಗೆ, ಗರ್ಭಿಣಿಯರಿಗೆ ಹೆರಿಗೆಯ ಸಮಯದಲ್ಲಿ ಹೆಚ್ಚಾಗಿ ರಕ್ತದ ಆವಶ್ಯಕತೆ ಇರುತ್ತದೆ. ಇದಲ್ಲದೆ ಕೆಲವೊಂದು ಗಂಭೀರ ಕಾಯಿಲೆಗಳಿರುವ ವ್ಯಕ್ತಿಗಳಿಗೆ ಜೀವನ ಪರ್ಯಂತ ರಕ್ತ ವರ್ಗಾವಣೆಯ ಆವಶ್ಯಕತೆ ಇರುತ್ತದೆ. ಆಸ್ಪತ್ರೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ರಕ್ತ ನಿಧಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಕ್ತ ಸಂಗ್ರಹ ಇಲ್ಲದಿರುವಾಗ ಸ್ವಯಂಪ್ರೇರಿತ ರಕ್ತದಾನ ವ್ಯಕ್ತಿಯ ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ರಕ್ತದಾನ, ಬಹಳ ಪವಿತ್ರವಾದ ಕಾರ್ಯವಾಗಿದ್ದು ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಕನಿಷ್ಠ ಒಂದು ಬಾರಿಯಾದರೂ ರಕ್ತದಾನ ಮಾಡಲೇಬೇಕು. ರಕ್ತದಾನ ಮಾಡುವುದು ಪ್ರತೀ ಆರೋಗ್ಯವಂತ ವ್ಯಕ್ತಿಯ ಕರ್ತವ್ಯ ಎಂದು ಭಾವಿಸಿ, ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ರೋಗಗ್ರಸ್ಥರು ಮತ್ತು ಗಾಯಗೊಂಡವರ ಪ್ರಾಣ ಉಳಿಸಲು ಸಾಧ್ಯ. ಆರೋಗ್ಯವಂತರಾದ ಯುವಕ, ಯುವತಿಯರು, ಕಾಲೇಜು ವಿದ್ಯಾರ್ಥಿಗಳು ವಿವಿಧ ಉದ್ಯೋಗಿಗಳು, ಗೃಹಿಣಿಯರು, ಪುರುಷರು, ಪ್ರತಿಫಲಾಪೇಕ್ಷೆ ಇಲ್ಲದೆ ಅಗತ್ಯವಿದ್ದಾಗ ರಕ್ತದಾನ ಮಾಡುತ್ತಾರೆ. ವೈದ್ಯರ ನಿರ್ದೇಶನ, ರಕ್ತ ಪರೀಕ್ಷಕರ ಮತ್ತು ಪ್ರಯೋಗಾಲಯ ತಂತ್ರಜ್ಞರ ನಿರ್ಣಯದಂತೆ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ರಕ್ತದಾನ ಮಾಡಬಹುದು. ರಕ್ತದ ಗುಣಮಟ್ಟ ಮತ್ತು ಹಿಮೋಗ್ಲೋಬಿನ್ ಪ್ರಮಾಣವೂ ಸೂಚಿತ ಕ್ರಮಾಂಕದಲ್ಲಿರಬೇಕು ಎನ್ನುವುದು ಗಮನಾರ್ಹ ವಿಚಾರ. ರಕ್ತ ಪೂರೈಕೆ ಮತ್ತು ವರ್ಗಾವಣೆಯಲ್ಲಿ ಅಪೇಕ್ಷಿತ ವ್ಯಕ್ತಿಗೆ ಅಥವಾ ರೋಗಿಗೆ ಆಯಾ ಗುಂಪಿನ ಸಾಮ್ಯತೆಯ ರಕ್ತ ಆವಶ್ಯಕ. ರಕ್ತದಾನ ಮಾಡಲು ಮತ್ತು ರಕ್ತದಾನ ಮಾಡಿದ ಬಳಿಕ ಸುಧಾರಿಸಿಕೊಳ್ಳಲು 20 ನಿಮಿಷ ಸಾಕಾಗುತ್ತದೆ. ಮನುಷ್ಯನ ದೇಹದಲ್ಲಿ 5 ರಿಂದ 6 ಲೀಟರ್‌ನಷ್ಟು ರಕ್ತ ಇರುತ್ತದೆ. ರಕ್ತದಾನ ಮಾಡುವಾಗ ಕೇವಲ 350 ಎಂಎಲ್ ರಕ್ತವನ್ನು ಮಾತ್ರ ತೆಗೆಯಲಾಗುತ್ತದೆ. ಸ್ವಯಂಪ್ರೇರಣೆಯಿಂದ 18 ವರ್ಷ ಪೂರೈಸಿದ ಮತ್ತು 60 ವರ್ಷದ ಒಳಗಿನ ಆರೋಗ್ಯವಂತ ಜನರು ನಿಸ್ವಾರ್ಥದಿಂದ ರಕ್ತದಾನ ಮಾಡಿ ಧನ್ಯರಾಗುತ್ತಿರುವುದು ಶ್ಲಾಘನೀಯ. ಜಾತಿ ಮತಗಳ ತಾರತಮ್ಯವಿಲ್ಲದೆ, ಲಿಂಗ ಭೇದವಿಲ್ಲದೆ ನಡೆಯುವ ರಕ್ತದಾನ ಸಮನ್ವಯ ಚಿಂತನೆಯ ಸಾಮರಸ್ಯದ ಮಾನವೀಯತೆಯ ಮಹಾಕಾರ್ಯ. ಅರ್ಬುದ ರೋಗ, ಹೃದಯ ಸಂಬಂಧಿ ಕಾಯಿಲೆ, ಲಿವರ್‌ಗೆ ಸಂಬಂಧಿಸಿದ ಕಾಯಿಲೆ ಇರುವವರು, ಮಧುಮೇಹ, ಮೂತ್ರಪಿಂಡದ ಕಾಯಿಲೆ ಇರುವವರು ರಕ್ತದಾನ ಮಾಡಬಾರದು.
ವಿವಿಧ ಆಸ್ಪತ್ರೆಗಳಲ್ಲಿ ರಕ್ತನಿಧಿ (Blood Bank)ಗಳಲ್ಲಿ ರಕ್ತದಾನ ದಿನಾಚರಣೆ ಮಾಡುತ್ತಾರೆ. ಸ್ವಯಂ ಸೇವಾ ಸಂಘಟನೆಗಳು, ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ರಕ್ತದಾನದ ಮುಖೇನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಹಲವಾರು ಕಡೆಗಳಲ್ಲಿ ಆಗಾಗ ಅಥವಾ ಪ್ರತೀ ಮೂರು ತಿಂಗಳುಗಳಿಗೊಮ್ಮೆ, ಆರು ತಿಂಗಳುಗಳಿಗೊಮ್ಮೆ ರಕ್ತದಾನ ಶಿಬಿರ ನಡೆಯುತ್ತಿರುವುದು ಉಲ್ಲೇಖಾರ್ಹ. ರಕ್ತನಿಧಿಗಳಲ್ಲಿ ನಿಯಮಾನುಸಾರ ರಕ್ತದಾನ ಮತ್ತು ರಕ್ತ ಪೂರೈಕೆ ಕಾರ್ಯ ಸೇವಾವಾರಿಧಿಯಾಗಿ ಜರಗುತ್ತಿದೆ. ಇವೆಲ್ಲದರ ಹೊರ ತಾಗಿಯೂ ರಕ್ತದಾನದ ಬಗೆಗೆ ಇನ್ನೂ ಜನರಲ್ಲಿ ಒಂದು ತೆರನಾದ ಅವ್ಯಕ್ತವಾದ ಭಯ, ತಪ್ಪು ಕಲ್ಪನೆಗಳಿವೆ. ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆಗಳಾಗಿದ್ದರೂ ಜನರಲ್ಲಿನ ಈ ಭಯವನ್ನು ಹೋಗಲಾಡಿಸಿ ರಕ್ತದಾನದ ಬಗೆಗೆ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕು. ಈ ದಿಸೆಯಲ್ಲಿ ಆರೋಗ್ಯ ಇಲಾಖೆ ಯೊಂದಿಗೆ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಬೇಕು. ರಕ್ತ ನೀಡುವಿಕೆ ಮತ್ತು ರಕ್ತ ಹಂಚುವಿಕೆಯ ಧ್ಯೆಯೋದ್ದೇಶವನ್ನು ಪ್ರೋತ್ಸಾಹಿಸುತ್ತಾ ಈ ವರ್ಷದ ರಕ್ತದಾನ ದಿನಾಚರಣೆ ನಡೆಯುತ್ತಿದೆ. ಆರೋಗ್ಯ ವೃದ್ಧಿಗೆ ಪೂರಕವಾದ ರಕ್ತದಾನ ವಿಶ್ವತೋಮುಖವಾಗಿ ಗೌರವಾರ್ಹವಾಗಿದೆ. – ಎಲ್.ಎನ್.ಭಟ್, ಮಳಿ