Advertisement
2004ರಲ್ಲಿ ಈ ದಿನಾಚರಣೆಯನ್ನು ಆರಂಭಿಸಲಾಯಿತು. ಸುರಕ್ಷಿತ ರಕ್ತದ ಮಹಣ್ತೀದ ಅರಿವು ಮೂಡಿಸುವುದಕ್ಕಾಗಿ ಜತೆಗೆ ಇನ್ನೊಬ್ಬರ ಜೀವ ಉಳಿಸುವುದಕ್ಕಾಗಿ ರಕ್ತದಾನ ಮಾಡುವ ರಕ್ತದಾನಿಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಆಚರಣೆಯನ್ನು ಆರಂಭಿಸಲಾಯಿತು.
ವಾರ್ಷಿಕವಾಗಿ ನಮ್ಮ ದೇಶದಲ್ಲಿ ಒಟ್ಟು ಎಷ್ಟು ರಕ್ತದ ಅಗತ್ಯವಿದೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಈ ಪ್ರಶ್ನೆಗೆ ಈ ವಿಶ್ಲೇಷಣಾತ್ಮಕ ವಿವರಣೆ ಉತ್ತರವಾಗಿದೆ. ಲಭ್ಯ ದತ್ತಾಂಶಗಳ ಪ್ರಕಾರ ನಮ್ಮ ದೇಶದಲ್ಲಿ ವಾರ್ಷಿಕ ರಕ್ತದ ಅಗತ್ಯವು 12.8 ಮಿಲಿಯನ್ ಯೂನಿಟ್ ಆಗಿದೆ. ಈ ಲೆಕ್ಕಾಚಾರವನ್ನು ವಿಶ್ವ ಆರೋಗ್ಯ ಸಂಸ್ಥೆಯ ನಿಯಮದ ಆಧಾರದಲ್ಲಿ ನಿರ್ದಿಷ್ಟಪಡಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಒಂದು ದೇಶದಲ್ಲಿ ವಾರ್ಷಿಕ ರಕ್ತದ ಆವಶ್ಯಕತೆಯು ಆ ದೇಶದ ಒಟ್ಟು ಜನಸಂಖ್ಯೆಯ ಶೇ. 1ರಷ್ಟು ಇರುತ್ತದೆ ಎಂದು ಅಂದಾಜಿಸುತ್ತದೆ. 2015-16ನೇ ಸಾಲಿನಲ್ಲಿ ರಾಷ್ಟ್ರೀಯ ಏಯ್ಡ್ಸ್ ನಿಯಂತ್ರಣ ಸಂಸ್ಥೆ ಸಹಕರಿತ ರಕ್ತ ನಿಧಿಗಳು 63.8 ಲಕ್ಷ ಯೂನಿಟ್ ರಕ್ತವನ್ನು ಸಂಗ್ರಹಿಸಿದ್ದವು. ಈ ಸಂಗ್ರಹ ರಕ್ತದಲ್ಲಿ ಶೇ. 79 ರಷ್ಟು ರಕ್ತವು ಸ್ವಯಂಪ್ರೇರಿತ ದಾನಿಗಳು ನೀಡಿದ್ದಾಗಿದೆ ಎಂಬುದು ಉಲ್ಲೇಖಾರ್ಹ. ಈ ಅಂಕಿಅಂಶಗಳಿಂದ ರಕ್ತದ ಬೇಡಿಕೆ ಮತ್ತು ಪೂರೈಕೆ ನಡುವೆ ಭಾರೀ ಅಂತರವಿರುವುದು ವೇದ್ಯವಾಗುತ್ತದೆ. ರಕ್ತದ ಅನಿವಾರ್ಯತೆ ಬಗ್ಗೆ ಜಾಗೃತಿ ಮೂಡಿಸುವುದರಿಂದ ಮತ್ತು ಜನರನ್ನು ರಕ್ತದಾನಿಗಳಾಗಲು ಪ್ರೇರೇಪಿಸುವುದರಿಂದ ಈ ಅಂತರವನ್ನು ಕಡಿಮೆ ಮಾಡುವುದು ಸಾಧ್ಯವಾಗಿದೆ.
Related Articles
ರಕ್ತದಾನ ಇನ್ನೊಬ್ಬರ ಜೀವ ಉಳಿಸುವ ಉದಾತ್ತ ಕಾರ್ಯವಾಗಿದೆ, ಮಾತ್ರವಲ್ಲದೆ ಇದರಿಂದ ರಕ್ತದಾನಿಗೂ ಹಲವಾರು ಲಾಭಗಳಿವೆ. ಇನ್ನೊಬ್ಬರ ಜೀವವನ್ನು ಉಳಿಸಿದ ತೃಪ್ತಭಾವವೂ ರಕ್ತದಾನಿಯ ಮೇಲೆ ಬಹಳಷ್ಟು ಸಕಾರಾತ್ಮಕ ಪ್ರಭಾವ ಬೀರುತ್ತದೆ. ರಕ್ತದಾನವು ದಾನಿಯ ಆರೋಗ್ಯವನ್ನು ಕಾಪಿಟ್ಟುಕೊಳ್ಳುವುದರೊಂದಿಗೆ ಮಾನಸಿಕವಾಗಿ ಸಕಾರಾತ್ಮಕ ಭಾವನೆ ಭರಿಸುತ್ತದೆ.
Advertisement
ಈ ತಪ್ಪು ಅಭಿಪ್ರಾಯಗಳನ್ನು ಬಿಟ್ಟುಬಿಡಿ ರಕ್ತದಾನ ಮಾಡಿದರೆ ವ್ಯಕ್ತಿ ದುರ್ಬಲನಾಗುತ್ತಾನೆ: ಈ ಅಭಿಪ್ರಾಯ ತಪ್ಪಾಗಿದೆ. ರಕ್ತದಾನ ಮಾಡಿದ ಬಳಿಕ ಒಂದಿನಿತು ವಿಶ್ರಾಂತಿ ಪಡೆದುಕೊಂಡು ದಾನಿಯು ತನ್ನ ದೈನಂದಿನ ಕೆಲಸಕಾರ್ಯವನ್ನು ನಿರಾತಂಕವಾಗಿ ನಡೆಸಬಹುದಾಗಿದೆ. ರಕ್ತದಾನ ಮಾಡುವಾಗ ಎಚ್‌ಐವಿ/ಏಯ್ಡ್ಸ್ ರಕ್ತಕ್ಕೆ ಸೇರ್ಪಡೆಯಾಗುತ್ತದೆ: ಇದು ಶುದ್ಧ ಸುಳ್ಳು. ಸ್ಟೆರಿಲೈಸ್ಡ್ ನೀಡ್‌ಲ್‌ಗಳನ್ನು ರಕ್ತ ಪಡೆದುಕೊಳ್ಳಲು ಬಳಸಲಾಗುತ್ತದೆ. ಇವು ಸಂಪೂರ್ಣ ಸುರಕ್ಷಿತವಾಗಿವೆ. ರಕ್ತ ನೀಡುವಾಗ ನೋವಾಗುತ್ತದೆ: ರಕ್ತ ಪಡೆಯಲು ನೀಡಲ್ ಚುಚ್ಚುವಾಗ ಸೊಳ್ಳೆ ಕಡಿದಷ್ಟು ನೋವಾಗುವುದು ಬಿಟ್ಟರೆ ಬೇರೇನೂ ನೋವಾಗದು. ದೇಹದ ತೂಕವನ್ನು ಪ್ರಭಾವಿಸುತ್ತದೆ: ರಕ್ತದಾನದಿಂದ ದೇಹದ ತೂಕದ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲ. ತುಂಬಾ ಸಮಯ ಪೋಲಾಗುತ್ತದೆ: ಕೇವಲ 30 ನಿಮಿಷದೊಳಗೆ ರಕ್ತದಾನ ಪ್ರಕ್ರಿಯೆ ಮುಗಿಯುತ್ತದೆ. ರಕ್ತದಾನಕ್ಕೆ ಯಾರೂ ಆಹ್ವಾನಿಸಿಲ್ಲ: ರಕ್ತದಾನಕ್ಕಾಗಿ ಯಾವಾಗಲೂ ತನಗೆ ಆಹ್ವಾನವಿದೆ ಎಂದು ಭಾವಿಸಿದಾಗ ಈ ತಪ್ಪು ಅಭಿಪ್ರಾಯ ದೂರವಾಗುತ್ತದೆ. ನಿರಂತರ ಜಾಗೃತಿ ಮೂಡಿಸುವುದರಿಂದ ಈ ರೀತಿಯ ತಪ್ಪು ಅಭಿಪ್ರಾಯಗಳನ್ನು ದೂರ ಮಾಡುವುದು ಸಾಧ್ಯವಿದೆ. ” ತುರ್ತು ಸಂದರ್ಭದಲ್ಲಿ ರಕ್ತದಾನ’ಕ್ಕೆ ಈ ವರ್ಷದ ಪ್ರಚಾರಾಂದೋಲನವಾಗಿದೆ. ಗಂಭೀರ ಅಥವಾ ತುರ್ತು ಪರಿಸ್ಥಿತಿಯಲ್ಲಿ “ನಾನೇನು ಮಾಡಬೇಕು? ನಾನು ಹೇಗೆ ಸಹಾಯ ಮಾಡಲಿ?’ ಎಂಬುದು ಮಾನವೀಯತೆ ಉಳ್ಳವರ ಸಹಜ ಸ್ಪಂದನೆಯಾಗಿರುತ್ತದೆ. ಆದ್ದರಿಂದ ಈ ಸಾಲಿನ ಪ್ರಚಾರಾಂದೋಲನದ ಧ್ಯೇಯ ವಾಕ್ಯ “ನೀನೇನು ಮಾಡಬಹುದು?’ “ರಕ್ತದಾನ ಮಾಡು. ಈಗಲೇ ಮಾಡು. ಯಾವಾಗಲೂ ಮಾಡು’ ಆಗಿದೆ. ರಕ್ತದಾನ ಯಾಕೆ ಮಾಡಬೇಕು?
ರಕ್ತದಾನ ಜೀವನ್ಮರಣದ ನಡುವೆ ಹೋರಾಡುವ ವ್ಯಕ್ತಿಯ ಜೀವ ಉಳಿಸುವ ಒಂದು ಮಹತ್ಕಾರ್ಯವಾಗಿದೆ.
ಮಾನವನ ರಕ್ತಕ್ಕೆ ಯಾವುದೇ ಪರ್ಯಾಯ ಇಲ್ಲ.
ರಕ್ತದಾನ ಮಾಡುವುದರಿಂದ ನೀವು ನಿಮ್ಮ ಸಾಮಾನ್ಯ ಆರೋಗ್ಯ ಮತ್ತು ರಕ್ತದ ಗುಂಪಿನ ಬಗ್ಗೆ ತಿಳಿದುಕೊಳ್ಳುತ್ತೀರಿ.
ಇದೊಂದು ಜೀವ ಉಳಿಸುವ ಸರಳ ವಿಧಾನ ಯಾರು ರಕ್ತದಾನ ಮಾಡಬಹುದು?
ಉತ್ತಮ ಸಾಮಾನ್ಯ ಆರೋಗ್ಯವಂತರು (ರಕ್ತ ನಿಧಿಯ ವೈದ್ಯರು ಇದನ್ನು ಪರೀಕ್ಷಿಸುತ್ತಾರೆ.)
18ರಿಂದ 60 ವರ್ಷದೊಳಗಿನ ಎಲ್ಲರೂ ರಕ್ತದಾನ ಮಾಡಬಹುದು.
50ಕೆಜಿಗಿಂತ ಹೆಚ್ಚು ದೇಹದ ತೂಕವನ್ನು ಹೊಂದಿರುವವರು ರಕ್ತದಾನ ಮಾಡಬಹುದು.
ಹಿಮೋಗ್ಲೋಬಿನ್ ಪ್ರಮಾಣ 12.5 ಗ್ರಾಂ % ಗಿಂತ ಹೆಚ್ಚಿರಬೇಕು. ಯಾರು ರಕ್ತದಾನ ಮಾಡಬಾರದು
ರಕ್ತದಾನ ಮಾಡುವ 72 ಗಂಟೆಗಳ ಮೊದಲು ಪೇಯ್ನ ಕಿಲ್ಲರ್ ಅಥವಾ ಆ್ಯಂಟಿ ಬಯೋಟಿಕ್ಸ್‌ಗಳನ್ನು ತೆಗೆದುಕೊಂಡವರು. ಗರ್ಭಿಣಿಯರು ಮತ್ತು ಮಕ್ಕಳಿಗೆ ಹಾಲೂಡಿಸುವವರು. ಮುಟ್ಟಿನ ಸಮಯದಲ್ಲಿ. ಜ್ವರ ಅಥವಾ ಯಾವುದೇ ರೀತಿಯ ಕಾಯಿಲೆ ಇದ್ದಾಗ (ರಕ್ತ ನಿಧಿಯ ವೈದ್ಯರ ವರದಿ ಆಧರಿಸಿ) ರಕ್ತದಾನದ 24 ಗಂಟೆ ಮೊದಲು ಆಲ್ಕೋಹಾಲ್ ಸೇವಿಸಿದ್ದರೆ. ರಕ್ತದಾನ ಮಾಡಿದ ಬಳಿಕದ ಕಾಳಜಿ
ರಕ್ತದಾನದ ಬಳಿಕ ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಸ್ವಲ್ಪ ಲಘು ಆಹಾರವನ್ನು ಸೇವಿಸಬೇಕು. ಮುಂದಿನ 24 ಗಂಟೆಗಳಲ್ಲಿ ಅತೀ ಹೆಚ್ಚು ದ್ರವಾಹಾರ ಸೇವಿಸಬೇಕು. ಹೆಚ್ಚು ಒತ್ತಡ ಉಂಟುಮಾಡುವ ವ್ಯಾಯಾಮ ಮತ್ತು ಆಟ ಆಡುವುದನ್ನು ಒಂದು ದಿನದ ಮಟ್ಟಿಗೆ ನಿಲ್ಲಿಸುವುದು ಒಳ್ಳೆಯದು. ತಲೆಸುತ್ತು ಬಂದಂತಾದರೆ ಒಂದಿನಿತು ಮಲಗಿ ಕಾಲುಗಳನ್ನು ಮೇಲಕ್ಕಿಟ್ಟರೆ 10-15 ನಿಮಿಷದೊಳಗೆ ನೀವು ಸಾಮಾನ್ಯ ಸ್ಥಿತಿಗೆ ಬರುವಿರಿ. 2008ರ ರಕ್ತ ಸುರಕ್ಷತಾ ಸರ್ವೆಯ ಅಂಕಿಅಂಶಗಳು ಹೇಳುವಂತೆ ಭಾರತ ಸಹಿತ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಒಟ್ಟು ದಾನವಾಗಿ ಸ್ವೀಕರಿಸಿದ ರಕ್ತದ ಪ್ರಮಾಣದಲ್ಲಿ ಅರ್ಧಕ್ಕಿಂತ ಹೆಚ್ಚಿನ ಪಾಲು ಯುವ ಜನತೆ ನೀಡಿದ ರಕ್ತವಾಗಿರುತ್ತದೆ. ನಮ್ಮದು ಯುವ ಭಾರತವಾಗಿದೆ. ಇಲ್ಲಿನ ಯುವಶಕ್ತಿ ಪುಟಿಯುವ ಚೈತನ್ಯದೊಂದಿಗೆ ರಕ್ತದಾನ ಮಾಡುವ ಸಾಮರ್ಥ್ಯವನ್ನು ಹೊಂದಿರುವಂಥದ್ದಾಗಿದೆ. ಆದ್ದರಿಂದ ನಮ್ಮ ದೇಶದಲ್ಲಿ ಯುವಕರು ರಕ್ತದ ಅಗತ್ಯಕ್ಕೆ ತಕ್ಕಂತೆ ರಕ್ತದಾನ ಮಾಡಿದರೆ ರಕ್ತದ ಕೊರತೆ ನಿವಾರಣೆಯಾಗಲಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ. ಯುವಕರಲ್ಲಿ ರಕ್ತದಾನದ ಮಹಣ್ತೀವನ್ನು ಹೆಚ್ಚಿಸುವುದು ಅತ್ಯಂತ ಅಗತ್ಯವಾಗಿದೆ. ಶಿಕ್ಷಿತ ಹಾಗೂ ಜವಾಬ್ದಾರಿಯುತ ಸಮಾಜದಲ್ಲಿ ಬದುಕುತ್ತಿರುವ ನಾವು ರಕ್ತದಾನಕ್ಕೆ ಮುಂದಾಗಿ ಜೀವ ಉಳಿಸುವ ಮಹತ್ಕಾರ್ಯದ ಸಂಭ್ರಮವನ್ನು ಆನಂದಿಸಬೇಕಿದೆ. ನಿಮಗಿದು ತಿಳಿದಿದೆಯೇ?
ನಿಮ್ಮ ದೇಹದಲ್ಲಿ ಅಂದಾಜು 5 ಲೀಟರ್ ರಕ್ತ ಇದೆ. ಇದರ ಶೇ. 8ರಷ್ಟು ಪ್ರಮಾಣದ ರಕ್ತವನ್ನು ನೀವು ಯಾವುದೇ ಕ್ಷಿಷ್ಟತೆಗಳನ್ನು ಎದುರಿಸದೆ ದಾನ ಮಾಡಬಹುದಾಗಿದೆ. ರಕ್ತದಾನ ಮಾಡಿದ 48 ಗಂಟೆಗಳೊಳಗೆ ನಷ್ಟವಾದ ಪ್ಲಾಸ್ಮಾವನ್ನು ಹಾಗೂ 56 ದಿನಗಳೊಳಗೆ ನಷ್ಟವಾದ ರಕ್ತ ಕಣಗಳನ್ನು ದೇಹವು ಮರುಪೂರಣಮಾಡುತ್ತದೆ. ಪ್ರತಿ 3 ತಿಂಗಳಿಗೊಮ್ಮೆ ವ್ಯಕ್ತಿಯು ರಕ್ತದಾನ ಮಾಡಬಹುದಾಗಿದೆ. ರಕ್ತದಾನದಿಂದ ಯಾವುದೇ ಶಾರೀರಿಕ ದೌರ್ಬಲ್ಯ ಉಂಟಾಗುವುದಿಲ್ಲ. ನಿಮ್ಮಿಂದ ಪಡೆದ ರಕ್ತವನ್ನು ಎಚ್‌ಐವಿ, ಹ್ಯಾಪಟೈಟಿಸ್ ಬಿ, ಹ್ಯಾಪಟೈಟಿಸ್ ಸಿ, ಮಲೇರಿಯಾ ಮತ್ತು ಸಿಫಿಲಿಸ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಡಾ| ಮನೀಶ್ ರತೂರಿ, ಅಸಿಸ್ಟೆಂಟ್ ಪ್ರೊಫೆಸರ್, ರಕ್ತನಿಧಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಣಿಪಾಲ.