ಮಂಡ್ಯ: ಪ್ರಸ್ತುತ ದಿನಗಳಲ್ಲಿ ಬೇಡಿಕೆ ಪ್ರಮಾಣದಷ್ಟು ರಕ್ತ ಸಿಗುತ್ತಿಲ್ಲ. ಆದರೂ ರಕ್ತ ಸಂಗ್ರಹದಲ್ಲಿ ಮಂಡ್ಯ ಜಿಲ್ಲೆ ಇಡೀ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ಹೇಳಿದರು.
ಕನ್ನಡ ಸೇನೆ ಕರ್ನಾಟಕ ವತಿಯಿಂದ ನಗರದ ಗಾಂಧಿ ಭವನದಲ್ಲಿ ನಡೆದ ನೇತ್ರದಾನ ನೋಂದಣಿ ಹಾಗೂ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ನಡೆಯುವಷ್ಟು ರಕ್ತದಾನ ಶಿಬಿರಗಳು ರಾಜ್ಯದ ಯಾವ ಜಿಲ್ಲೆಗಳಲ್ಲೂ ನಡೆಯುವುದಿಲ್ಲ. ಇದರಿಂದ ರಾಜ್ಯದಲ್ಲೇ ಅತಿ ಹೆಚ್ಚು ರಕ್ತ ಮಂಡ್ಯ ಜಿಲ್ಲೆಯಲ್ಲಿ ಸಂಗ್ರಹವಾಗುತ್ತಿದೆ. ಇಲ್ಲಿ ಸಂಗ್ರಹವಾಗುವ ರಕ್ತವನ್ನು ನಮ್ಮಲ್ಲಿ ಉಪಯೋಗಿಸಿಕೊಂಡು ಬೇರೆ ಜಿಲ್ಲೆಗೂ ನೀಡುತ್ತಿದ್ದೇವೆ ಎಂದು ವಿವರಿಸಿದರು.
ನಮ್ಮಲ್ಲಿ ಎರಡು ಸಾವಿರದಿಂದ ಮೂರು ಸಾವಿರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟು ಮಂದಿಗೆ ಹೆಚ್ಚಿನ ಪ್ರಮಾಣದ ರಕ್ತದ ಅಗತ್ಯತೆ ಇದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ರಕ್ತವನ್ನು ಪೂರೈಕೆ ಮಾಡುವುದು ಕಷ್ಟದ ಕೆಲಸವೇ ಸರಿ. ಆದರೂ ಮಿಮ್ಸ್ ರಕ್ತಕ್ಕೆ ಕೊರತೆಯಾಗದಂತೆ ಸಮರ್ಥವಾಗಿ ನಿಭಾಯಿಸುತ್ತಿರುವುದಕ್ಕೆ ಇಲ್ಲಿನ ಸಂಘ-ಸಂಸ್ಥೆಗಳ ಸಹಕಾರವೇ ಕಾರಣ ಎಂದು ಹೇಳಿದರು.
ಶಿಬಿರಗಳಿಂದಾಗಿ ಬಡ ರೋಗಿಗಳಿಗೆ ಹೆಚ್ಚಿನ ಅನುಕೂಲ ವಾಗುತ್ತದೆ. ಇದ ರೊಂದಿಗೆ ಕನ್ನಡ ಸೇನೆ ನೇತ್ರದಾನ ನೋಂದಣಿ ಅಭಿಯಾನ ಅರಂಭಿಸಿರುವು ದರಿಂದ ಹಲವು ಮಂದಿ ಅಂಧರಿಗೂ ಕಣ್ಣುಗಳನ್ನು ನೀಡುವಂತಹ ಕ್ರಮ ಶ್ಲಾಘನೀಯ ಎಂದು ಹೇಳಿದರು.
ಕನ್ನಡ ಸೇನೆ ರಾಜ್ಯಾಧ್ಯಕ್ಷ ಕುಮಾರ್ ಮಾತನಾಡಿ, ರಕ್ತಕ್ಕಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನು ಕಂಡು ನಮ್ಮ ಸಂಘಟನೆ ವತಿಯಿಂದ ರಕ್ತದಾನ ಶಿಬಿರ ನಡೆಸಿ ರಕ್ತ ಸಂಗ್ರಹಿಸಲು ಶ್ರಮಿಸುತ್ತಿದ್ದೇವೆ ಎಂದು ವಿವರಿಸಿದರು.
ಸಮಾರಂಭದಲ್ಲಿ ಮಾಜಿ ಸಂಸದ ಜಿ. ಮಾದೇಗೌಡ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಸಲಹಾ ಸಮಿತಿ ಸದಸ್ಯ ಚಂದನ್‌ಗೌಡ, ನಗರಸಭಾ ಸದಸ್ಯರಾದ ಸೌಭಾಗ್ಯ ಶಿವಲಿಂಗು, ಪವಿತ್ರಾ ಮೊದಲಾದವರು ಭಾಗವಹಿಸಿದ್ದರು