Advertisement

ರಕ್ತ ನಗರಿ

08:46 AM Oct 01, 2019 | Suhan S |

ಹುಬ್ಬಳ್ಳಿ: ವ್ಯಾಪಾರ-ವಹಿವಾಟಿನಿಂದ ಛೋಟಾ ಮುಂಬೈ ಎಂದೇ ಕರೆಯಿಸಿಕೊಳ್ಳುವ ಹುಬ್ಬಳ್ಳಿ ಪಾತಕಿಗಳ ಹೀನ ಕೃತ್ಯದಿಂದ ಕುಖ್ಯಾತಿ ಗಳಿಸುತ್ತಿದೆ. ಅಪರಾಧ ಜಗತ್ತು ದಿನೇ ದಿನೇ ನಾಗರಿಕ ಸಮಾಜದೊಂದಿಗೆಮುಖಾಮುಖೀಯಾಗುತ್ತಲೇ ಇದೆ.

Advertisement

ಕಳೆದೊಂದು ವರ್ಷದ ಈಚೆಗೆ ಚಾಕು ಇರಿತ, ಕೊಲೆ ಪ್ರಕರಣ ಸುದ್ದಿಗಳು ಸಾಮಾನ್ಯ ಎನ್ನುವಂತಾಗಿದ್ದು, ರಾಜ್ಯದ ಜನರು “ಹುಬ್ಬಳ್ಳಿ ಅಷ್ಟೊಂದು ಕೆಟ್ಟೋಗಿದೆಯಾ’ ಎಂದು ಹುಬ್ಬೇರಿಸುವಂತೆ ಮಾಡಿದೆ. ಅವಳಿನಗರದಲ್ಲಿ ವಾರಕ್ಕೆ ಒಂದು ಎರಡು ಚೂರಿ ಇರಿತ ಪ್ರಕರಣಗಳು ವರದಿಯಾಗುತ್ತಿದ್ದು, ಜನಜೀವನದ ಮೇಲೆ ಗಾಢ ಪರಿಣಾಮ ಬೀರುತ್ತಿದೆ. ವಾರದಲ್ಲಿ ನಡೆದ ಎರಡು ಶೂಟೌಟ್‌ ಪ್ರಕರಣಗಳೂ ತಲ್ಲಣ ಸೃಷ್ಟಿಸಿವೆ. ಕ್ರೈಂ ರೇಟ್‌ ಹಿಂದಿನ ವರ್ಷಗಳಷ್ಟೇ ಇದ್ದರೂ ಅಪರಾಧ ಕೃತ್ಯಗಳ ಸ್ವರೂಪ ಬದಲಾಗಿರುವುದು ಆತಂಕಕ್ಕೆ ಎಡೆಮಾಡಿದೆ.

ತಲೆನೋವಾಗಿದ್ದೆಲ್ಲಿ?: ಬೈಕ್‌ ಪಾರ್ಕ್‌ ಮಾಡುವಾಗ ಗಾಡಿ ತಾಗಿತೆಂದು, ಮೆರವಣಿಗೆಯಲ್ಲಿ ಹೇಳಿದ ಡಿಜೆ ಹಾಡು ಹಚ್ಚಲಿಲ್ಲವೆಂದು, ಕಾಲು ಮೆಟ್ಟಿದ್ದಾನೆಂದು, ಬೈಕ್‌ ವೇಗವಾಗಿ ಓಡಿಸಿದ್ದನ್ನು ಪ್ರಶ್ನಿಸಿದನೆಂದು, ಪ್ರೇಯಸಿಯೊಂದಿಗಿನ ಏಕಾಂತದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್‌

ಮಾಡುತ್ತಿದ್ದನೆಂದು…ಹೀಗೆ ಚಿಲ್ಲರೆ ವಿಷಯಗಳಿಗೂ ಚಾಕು ಇರಿಯುವ ಘಟನೆಗಳು ಆತಂಕ ಸೃಷ್ಟಿಸುತ್ತಿವೆ. ಒಂದೆಡೆ ಪೊಲೀಸರು ರೌಡಿಶೀಟರ್‌ಗಳ ಮನೆ ಮೇಲೆ ನಿರಂತರ ದಾಳಿ ಮುಂದುವರಿಸಿದ್ದರೆ, ಇನ್ನೊಂದೆಡೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಯುವಕರ, ಪುಂಡ ಪೋಕರಿಗಳ ಆಕ್ರಮಣಕಾರಿ ಮನೋಭಾವ ಸಭ್ಯ ಜನರನ್ನು, ಹಿರಿಯ ನಾಗರಿಕರನ್ನು ಆತಂಕಕ್ಕೆ ದೂಡಿದೆ. ರಾತ್ರಿ ವೇಳೆ ಕೆಲವೊಂದು ಓಣಿಗಳಲ್ಲಿ ಒಂಟಿಯಾಗಿ ಸಂಚರಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ನಡೆದಿದ್ದೇ ದಾರಿ ಎಂಬ ಮನೋಸ್ಥಿತಿಯಲ್ಲಿರುವ, ಹಾಡಹಗಲೇ ಮದ್ಯ ಸೇವಿಸಿ ರಣಕೇಕೆ ಹಾಕುವ ಕೆಲ ಯುವಕರನ್ನು ಪ್ರಶ್ನಿಸಲಾಗದ ವಾತಾವರಣವಿದೆ.

Advertisement

ವದಂತಿ ಹಾವಳಿ: ಈ ನಡುವೆ ವದಂತಿಗಳ ಹರಡುವಿಕೆಯೂ ಎರ್ರಾಬಿರ್ರಿ ಸಾಗಿದೆ. ಅಲ್ಲಿ ಕೊಲೆಯಾಗಿದೆ, ಇರಿತವಾಗಿದೆ, ಇಲ್ಲಿ ಯುವತಿಯ ಅಪಹರಣವಾಗಿದೆ..ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಡುತ್ತಿವೆ. ಈ ನಿಟ್ಟಿನಲ್ಲಿ ಸಮಾಜವೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ. ವರ್ಷದಲ್ಲಿ ಒಂಭತ್ತು ಕೊಲೆ: ಅವಳಿನಗರದಲ್ಲಿ 2019ರಲ್ಲಿ ಈವರೆಗೆ 9 ಕೊಲೆ ಪ್ರಕರಣಗಳು ನಡೆದಿವೆ. ಅದರಲ್ಲಿ 5 ಪ್ರಕರಣಗಳಲ್ಲಿ ಚಾಕು-ಚೂರಿ ಇರಿತದಿಂದಲೇ ಸಾವಾಗಿದೆ. ವೈಯಕ್ತಿಕ ವಿಚಾರಗಳಿಗೆ ಹತ್ಯೆಗಳಾದರೂ ನಾಗರಿಕ ಸಮಾಜ ಗಂಭೀರವಾಗಿ ಯೋಚಿಸಬೇಕಿದೆ. ರೌಡಿಶೀಟರ್‌ಗಳಿಡಿೆ ಮಾತ್ರವಲ್ಲದೆ ಗಲ್ಲಿಗಳಲ್ಲಿ ಹವಾ ಸೃಷ್ಟಿಸಿಕೊಳ್ಳಲು ಬಾಲಬಿಚ್ಚುವವರಿಗೂ ಬಿಸಿ ಮುಟ್ಟಿಸುವ ಕೆಲಸ ಪೊಲೀಸರಿಂದ ತತ್‌ಕ್ಷಣವೇ ಆಗಬೇಕಿದೆ.

ಹಳೇ ಪಿಟಿಷನ್‌ಗಳ ಮರುಪರಿಶೀಲನೆ; ಬಡ್ಡಿಕುಳಗಳಿಗೆ ಕಡಿವಾಣ : ನಾನು ಬರುವುದಕ್ಕಿಂತ ಮುಂಚಿನ, ವರ್ಷದಷ್ಟು ಹಳೆಯ ಪಿಟಿಷನ್‌ಗಳನ್ನು ರೀ ವಿಸಿಟ್‌ ಮಾಡುತ್ತಿದ್ದೇನೆ. ಹಲವಾರು ಮೀಟರ್‌ ಬಡ್ಡಿ ಕೇಸ್‌ಗಳಲ್ಲಿ ಹಿಂದೆ ಸೂಕ್ತ ಕ್ರಮವಾಗಿಲ್ಲ. ಕೆಲವರು ನನ್ನನ್ನು ಭೇಟಿಯಾಗಿ ವರ್ಷದ ಹಿಂದೆ ಅರ್ಜಿ ನೀಡಿದ್ದೆ, 20 ಸಲ ಓಡಾಡಿದರೂ ಕೆಲಸವಾಗಿಲ್ಲ, ಕ್ರಮವಾಗಿಲ್ಲ ಎಂದು  ನೊಂದುಕೊಂಡು ಹೇಳಿದ್ದಾರೆ. ಇದರ ಬಗ್ಗೆ ಕೂಡ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಸೂಚನೆ ನೀಡಿದ್ದೇನೆ. ಹಿಂದಿನ ಪಾಪಗಳನ್ನು ಕ್ಷಮಿಸಲು ನಾನು ಬಂದಿಲ್ಲ. ಹಳೆಯ ಪ್ರಕರಣಗಳನ್ನೂ ಸರಿಪಡಿಸಲಾಗುವುದು. ಕ್ರಮ ವಹಿಸಲಾಗುವುದು. ಸೋಶಿಯಲ್‌ ಮೀಡಿಯಾ ಸೆಲ್‌ ಸೆಟ್‌ಅಪ್‌ ಮಾಡಲೂ ಚಿಂತನೆ ನಡೆಸಿದ್ದೇನೆ. ಸಮಸ್ಯೆಗಳಿದ್ದರೆ ನಮ್ಮ ಬಳಿ ಬನ್ನಿ. ದೂ: 9480802001ನ್ನು ಎಸ್‌ಎಂಎಸ್‌ ಮೂಲಕ ಸಂಪರ್ಕಿಸಿ ಎಂದು ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ತಿಳಿಸಿದರು.

ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪಾಲಕರ ಪಾತ್ರವೇನು? :  ಪಾಲಕರ ಗಮನಕ್ಕಿಲ್ಲದಂತೆ ಮಕ್ಕಳು ಅಕ್ರಮ ಚಟುವಟಿಕೆಗಳತ್ತ, ಕೆಟ್ಟ ಹವ್ಯಾಸಗಳತ್ತ ವಾಲುತ್ತಿದ್ದಾರೆ. ಕೇವಲ ಪ್ರೊಗ್ರೆಸ್‌ ಕಾರ್ಡ್‌ ನೋಡದೆ ನಿತ್ಯದ ಚಟುವಟಿಕೆಗಳತ್ತ ಪಾಲಕರು ನಿಗಾ ವಹಿಸಬೇಕು. ತಂದೆ-ತಾಯಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡರೆ ಮಕ್ಕಳು ಅಡ್ಡದಾರಿ ಹಿಡಿಯುವುದು ನಿಶ್ಚಿತ. ಅವರ ಆಸಕ್ತಿ, ಖನ್ನತೆ, ಮಾನಸಿಕ ತೊಳಲಾಟ-ಗೊಂದಲಗಳ ಬಗ್ಗೆ ಕಾಲಕಾಲಕ್ಕೆ ಪಾಲಕರು ಮೌಲ್ಯಮಾಪನ ಮಾಡುತ್ತಿರಬೇಕು. ಸಂಸ್ಕಾರದ ಬೇರು ಗಟ್ಟಿಯಾಗಿದ್ದರೆ ಗಿಡವೂ ಗಟ್ಟಿಯಾಗಿರುತ್ತದೆ. ಮಕ್ಕಳಿಗಾಗಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕು. ಅವರ ಗೆಳೆತನದತ್ತ ಲಕ್ಷ್ಯ  ವಹಿಸಬೇಕು. ಸಾಹಿತ್ಯಾಸಕ್ತಿ, ಕಾನೂನಿನ ಅರಿವು ಮೂಡಿಸಬೇಕು. ಅಪರಾಧ ಕೃತ್ಯಗಳಿಂದ ಅನುಭವಿಸುವ ಶಿಕ್ಷೆ, ಕಳೆದುಕೊಳ್ಳುವ ಅಮೂಲ್ಯ ಭವಿಷ್ಯದ ಬಗ್ಗೆ ತಿಳಿವಳಿಕೆ ನೀಡಬೇಕು. ಸದಭಿರುಚಿಯ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರೇರೇಪಿಸಬೇಕು. ನೀತಿ ಕಥೆಗಳನ್ನು ಹೇಳಬೇಕು.

ಆಯುಕ್ತರು ಏನಂತಾರೆ?: ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ, ಆತಂಕಕಾರಿ ವಾತಾವರಣ ನಿರ್ಮಾಣವಾಗಿದೆ ಎಂದು ಜನರಲ್ಲಿ ಆತಂಕ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಕ್ರೈಂ ರೇಟ್‌ ಕಳೆದ ವರ್ಷ ಯಾವ ಪ್ರಮಾಣದಲ್ಲಿತ್ತೋ ಅಷ್ಟೇ ಪ್ರಮಾಣದಲ್ಲಿದೆ. ಪ್ರಸ್ತುತ ನಡೆದಿರುವ ಚಾಕು ಇರಿತ ಪ್ರಕರಣಗಳೆಲ್ಲ ವೈಯಕ್ತಿಕ ಹಾಗೂ ಕ್ಷುಲ್ಲಕ ಕಾರಣಕ್ಕೆ ನಡೆದಿವೆ. ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ನಾಗರಿಕ ಸಮಾಜಕ್ಕೆ ಆತಂಕ ಒಡ್ಡುವ ಯಾರೇ ಇದ್ದರೂ ಕಠಿಣ ಕ್ರಮಕೈಗೊಳ್ಳಲಾಗುವುದು. ಮಾನಸಿಕ ತಜ್ಞರು, ಸಮಾಜದ ಮುಖಂಡರು, ಮೂಜಗು ಅವರನ್ನು ಭೇಟಿ ಮಾಡಿದ್ದೇನೆ. ಸಮಾಜ ಸರಿದಾರಿಗೆ ತರುವ ಜವಾಬ್ದಾರಿ ಹೊರಲು ಮನವಿ ಮಾಡಿದ್ದೇನೆ. ಗಲ್ಲಿ ಗಲ್ಲಿಗೆ ಪೊಲೀಸ್‌ ಹಾಕಲು ಆಗಲ್ಲ. ಘಟನೆಗಳಾಗುತೆ. ಎಲ್ಲ ಕೇಸ್‌ಗಳನ್ನು ಸಮರ್ಥವಾಗಿ ನಿರ್ವಹಿಸಲಾಗಿದೆ.

ಯುವಕರಿಗೆ ಕಿವಿಮಾತು: ಚಿಕ್ಕ ವಯಸ್ಸಿನಲ್ಲಿ ಹಿಂಸೆಗೆ ಇಳಿಯುತ್ತಿರುವುದು ಆತಂಕಕಾರಿ ಬೆಳವಣಿಗೆ. ನಿಮ್ಮ ಕೆಲಸ, ಶಿಕ್ಷಣದ ಬಗ್ಗೆ ಗಮನ ಕೊಡಿ, ಆಕ್ರಮಣಕಾರಿ ಮನೋಭಾವ ನಿಯಂತ್ರಿಸಿಕೊಳ್ಳಿ, ಕಾನೂನನ್ನು ಕೈಗೆತ್ತಿಕೊಳ್ಳಬೇಡಿ ಎಂದು ಒಬ್ಬ ನಾಗರಿಕನಾಗಿ ಕೇಳಿಕೊಳ್ಳುತ್ತೇನೆ. ಗೆರೆ ಮೀರಿದರೆ ಆಯುಕ್ತನಾಗಿ ಶಿಸ್ತುಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ನೀವು ಸರಿಯಾಗಿದ್ದರೆ ನಮ್ಮ ಬಳಿ ಬನ್ನಿ. ಸಮಸ್ಯೆಗಳಿಗೆ ಧನಾತ್ಮಕವಾಗಿ ಸ್ಪಂದಿಸಲಾಗುವುದು. ಆರ್‌.ದಿಲೀಪ್‌, ಹು-ಧಾ ಪೊಲೀಸ್‌ ಆಯುಕ್ತರು

 ಮನೋತಜ್ಞರು ಏನಂತಾರೆ?: ಪ್ರಮುಖವಾಗಿ ಮೂರು ಕಾರಣಗಳಿಂದ ಅಪರಾಧ ಚಟುವಟಿಕೆಗಳ ಪ್ರಮಾಣ ಹೆಚ್ಚುತ್ತಿದೆ. ಮೌಲ್ಯಗಳ ಕುಸಿತದಿಂದ ಆರೋಗ್ಯವಂತ ಸಮಾಜ ಹದಗೆಡುತ್ತಿದೆ. ಇಂದಿನ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕಾದ ಜರೂರತ್ತಿದೆ. ಈ ನಿಟ್ಟಿನಲ್ಲಿ ಪಾಲಕರು-ಶಿಕ್ಷಕರು ಹೆಚ್ಚಿನ ಒತ್ತು ನೀಡಬೇಕಿದೆ. ಇನ್ನು, ದುಶ್ಚಟಗಳು ಹಾಗೂ ಅಪರಾಧ ನಾಣ್ಯದ ಮುಖವಿದ್ದಂತೆ. ಯುವಕರು ಹೆಚ್ಚಿನ ಪ್ರಮಾಣದಲ್ಲಿ ದುಶ್ಚಟಗಳ ದಾಸರಾಗುತ್ತಿರುವುದು ಕಳವಳಕಾರಿ. ಹೆಚ್ಚಿನ ಅಪರಾಧ ಕೃತ್ಯಗಳು ಅಮಲಿನ ಗುಂಗಿನಲ್ಲೇ ನಡೆದುಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ಮಕ್ಕಳು ದುಶ್ಚಟಗಳಿಂದ ಮುಕ್ತರಾಗಲು ಅಗತ್ಯ ತಿಳಿವಳಿಕೆ ನೀಡಬೇಕಿದೆ. ಜಾಗೃತಿ ಕಾರ್ಯವಾಗಬೇಕಿದೆ. ಮೂರನೇಯದಾಗಿ ಪ್ರತಿಯೊಬ್ಬರಲ್ಲೂ ಉತ್ತಮ ಸಮಾಜ ನಿರ್ಮಾಣದಲ್ಲಿ ಭಾಗಿದಾರರಾಗಬೇಕೆಂಬ ಪ್ರಜ್ಞೆ ಮೂಡಬೇಕಿದೆ. ವೈಯಕ್ತಿಕ ಜವಾಬ್ದಾರಿಗಳನ್ನು ಅರಿತು ನಿಭಾಯಿಸಿದರೆ ತನ್ನಿಂದತಾನೇ ಅಪರಾಧ ಪ್ರಮಾಣ ತಗ್ಗಲಿದೆ. ಅಲ್ಲದೆ, ಯಾವುದೇ ವಿದ್ಯಮಾನಕ್ಕೆ ತತ್‌ಕ್ಷಣದ ಪ್ರತಿಕ್ರಿಯೆ ನೀಡುವ ಬದಲು ಸಮಸ್ಯೆಗೆ ದೀರ್ಘ‌ಕಾಲೀನ ಪರಿಹಾರೋಪಾಯಗಳತ್ತ ಕಾರ್ಯವಾಗಬೇಕಿದೆ. ಸದಾ ಮನಸ್ಸಿನಲ್ಲಿ ಜಾಗೃತಿ, ಸಕಾರಾತ್ಮಕ ಚಿಂತನೆ ಹುಟ್ಟಬೇಕು. ಯುವಕರಲ್ಲಿ ಧನಾತ್ಮಕ ಚಿಂತನೆಗಳನ್ನು ಬೇರೂರಿಸಲು ಚಳವಳಿಯೇ ನಡೆಯಬೇಕಾದ ಜರೂರತ್ತಿದೆ.- ಡಾ| ಆದಿತ್ಯ ಪಾಂಡುರಂಗಿ ಮನೋವೈದ್ಯರು

 

-ದೀಪಕ್‌ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next