Advertisement

Non CRZ Sand: ವೇ ಬ್ರಿಜ್‌ ಇಲ್ಲದೆ ನಾನ್‌ ಸಿಆರ್‌ಝಡ್‌ ಮರಳಿಗೂ ದಿಗ್ಬಂಧನ!

12:04 PM Oct 21, 2023 | Team Udayavani |

ಮಂಗಳೂರು: ಸಿಆರ್‌ಝಡ್‌ ವಲಯದಲ್ಲಿ ಇನ್ನೂ ಹೊಸದಾಗಿ ಇ.ಸಿ. (ಪರಿಸರ ಅನುಮೋದನೆ) ಸಿಗದಿರುವುದು, ನಾನ್‌ ಸಿಆರ್‌ಝಡ್‌ ವಲಯದಲ್ಲಿ ಪರವಾನಿಗೆ ತಡೆ ಹಿಡಿದಿರುವ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ಮರಳಿನ ಅಭಾವ ಸೃಷ್ಟಿ ಜನರಿಗೆ ಬಿಸಿ ಮುಟ್ಟಿಸತೊಡಗಿದೆ.

Advertisement

ಸಾಮಾನ್ಯವಾಗಿ ಯಾವ ಮರಳೂ ಇಲ್ಲದಿರುವಾಗ ನಾನ್‌ ಸಿಆರ್‌ಝಡ್‌ ಮರಳು ಸಿಗುತ್ತಿತ್ತು. ಗುಣಮಟ್ಟ ಸಾಧಾರಣ ಹಾಗೂ ತುಸು ದುಬಾರಿಯಾದರೂ ಈ ಮರಳನ್ನು ಗುತ್ತಿಗೆದಾರರು ಬಳಸಿಕೊಳ್ಳುತ್ತಿದ್ದರು. ಜನರ ನಿರ್ಮಾಣ ಕಾರ್ಯಗಳು ನಡೆ
ಯುತ್ತಿದ್ದವು. ಆದರೆ ಈ ಬಾರಿ ನಾನ್‌ ಸಿಆರ್‌ಝಡ್‌ ಮರಳು ತೆಗೆಯುವವರಿಗೂ ಪರವಾನಿಗೆ ನೀಡಲಾಗುತ್ತಿಲ್ಲ.

ನಾನ್‌ ಸಿಆರ್‌ಝಡ್‌ ಭಾಗದಲ್ಲಿ ಮರಳು ಬ್ಲಾಕ್‌ ಗುತ್ತಿಗೆ ಪಡೆದಿರುವವರು ಟನ್‌ ಗಟ್ಟಲೆ ಮರಳು ಸಂಗ್ರಹ ಮಾಡಿರಿಸಿಕೊಂಡಿದ್ದಾರೆ. ಆದರೆ ಗುತ್ತಿಗೆದಾರರು ವೇ ಬ್ರಿಜ್‌ ಅಳವಡಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಇಂಟಿಗ್ರೇಟೆಡ್‌ ಲೀಸ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ (ಐಎಲ್‌ಎಂಎಸ್‌) ವೆಬ್‌ಸೈಟ್‌ನಲ್ಲಿ ಕೊಡಬೇಕಾದ ಪರ್ಮಿಟ್‌ ಅನ್ನು ಬ್ಲಾಕ್‌ ಮಾಡಲಾಗಿದೆ. ಹಾಗಾಗಿ ಯಾವುದೇ ಮರಳು ಸಾಗಾಟ ಸಾಧ್ಯವಿಲ್ಲ. ಕಳೆದ ಒಂದು ವಾರದಿಂದ ಜಿಲ್ಲೆಯ ಎಲ್ಲೆಡೆ ಇದೇ ಸ್ಥಿತಿ ಇದೆ.

ವೇ ಬ್ರಿಜ್‌ ಕಡ್ಡಾಯ ಹಿಂದೆಯೇ ಇತ್ತು
ಅಧಿಕಾರಿಗಳು ಹೇಳುವ ಪ್ರಕಾರ ಮರಳು ಗುತ್ತಿಗೆದಾರರಿಗೆ ವಹಿಸಿದ ಷರತ್ತಿನಲ್ಲೇ ವೇ ಬ್ರಿಜ್‌ ಕಡ್ಡಾಯಗೊಳಿಸಲಾಗಿತ್ತು. ಆದರೆ ಅವರು ಅದನ್ನು ಅಳವಡಿಸಿಕೊಂಡಿರಲಿಲ್ಲ. ಷರತ್ತು ಇದ್ದುದು ನಿಜ, ಆದರೆ ಉತ್ತರ ಕನ್ನಡದಂತಹ ಕಡೆ ದೊಡ್ಡ 10 ಚಕ್ರದ ಲಾರಿಗಳಿಗೆ ಇದು ಸಮರ್ಪಕವಿತ್ತು, ನಮ್ಮದು ಇಲ್ಲಿ 6 ಚಕ್ರದ ಗಾಡಿಗಳು, ಹಾಗಾಗಿ ನಾವು ಅಳವಡಿಸಿಕೊಂಡಿರಲಿಲ್ಲ, ಆದರೆ ಅಳವಡಿಸುವುದಕ್ಕೆ ಸಿದ್ಧರಿದ್ದೇವೆ, ಸಮಯಾವಕಾಶ ನೀಡಿ ಎನ್ನುವುದು ನಮ್ಮ ಬೇಡಿಕೆ ಎನ್ನುತ್ತಾರೆ ಗುತ್ತಿಗೆದಾರರಲ್ಲೊಬ್ಬರಾದ ಪ್ರವೀಣ್‌ ಆಳ್ವ.

ತತ್‌ಕ್ಷಣಕ್ಕೆ ವೇ ಬ್ರಿಜ್‌ ಅಳವಡಿಸುವುದು ಕಷ್ಟ, ಅದಕ್ಕೆ ಪಿಲ್ಲರ್‌ ಹಾಕಿ, ಅಳವಡಿಸಲು ಸಮಯ ತಗಲುತ್ತದೆ. ನದಿಯ ಬದಿಯಲ್ಲಿ ಮಳೆಗಾಲದಲ್ಲಿ ವೇ ಬ್ರಿಜ್‌ ಅಪಾಯಕಾರಿ, ಈ ವಿಚಾರಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ. ಆದರೆ ಅಧಿಕಾರಿಗಳು ಏಕಾಏಕಿ ಪರ್ಮಿಟ್‌ ತಡೆಹಿಡಿದಿದ್ದಾರೆ ಎನ್ನುತ್ತಾರೆ ಇನ್ನೋರ್ವ ಗುತ್ತಿಗೆದಾರ.

Advertisement

ಸಿಆರ್‌ಝಡ್‌ನ‌ಲ್ಲೂ ವಿಳಂಬ
ಸಿಆರ್‌ಝಡ್‌ ವಲಯದಲ್ಲಿ ಬೆಥಮೆಟ್ರಿ ಸರ್ವೆ ನಡೆಸಿ, ವರದಿ ಸಹಿತ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ರಾಜ್ಯ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರಕ್ಕೆ ಕಳುಹಿಸಿದೆ. ಇದು ನಡೆದು ಒಂದು ತಿಂಗಳಾದರೂ ಇನ್ನೂ ಅನುಮೋದನೆ ಸಿಕ್ಕಿಲ್ಲ.
ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳು ಚುರುಕಿನಿಂದ ಸಾಗುವುದಕ್ಕೆ ಈ ಅಭಾವ ಸಮಸ್ಯೆ ತಂದೊಡ್ಡಿದೆ. ಕಾಮಗಾರಿ ನಡೆಸಲು ಗುತ್ತಿಗೆದಾರರು ಸಂಗ್ರಹಿಸಿರಿಸಿಕೊಂಡಿದ್ದ ಮರಳು ಪೂರ್ಣ ಖಾಲಿಯಾಗಿದೆ. ಕೆಲವರು ಎಂಸ್ಯಾಂಡ್‌ ಅಥವಾ ಕ್ವಾರಿ ಡಸ್ಟ್‌ ತಂದು ನಿರ್ಮಾಣ ಕಾಮಗಾರಿ ನಡೆಸುತ್ತಿದ್ದಾರೆ, ಆದರೆ ಇದರಲ್ಲಿ ಗುಣಮಟ್ಟ ಕಡಿಮೆ ಎಂಬ ದೂರುಗಳು ಕೇಳಿಬಂದಿವೆ.

ಮಲೇಷ್ಯಾ ಮರಳೂ ದುಬಾರಿ
ನವಮಂಗಳೂರು ಬಂದರಿನ ಯಾರ್ಡ್‌ ನಲ್ಲಿ ಮಲೇಷ್ಯಾದಿಂದ ಆಮದಾಗಿರುವ ಮರಳು ಸಾಕಷ್ಟಿದೆ. ಆದರೆ ಅದು ದುಬಾರಿ ಎಂಬ ಕಾರಣಕ್ಕೆ ಯಾರೂ ಕೊಂಡೊಯ್ಯುತ್ತಿಲ್ಲ. ಸ್ಥಳೀಯ ಮರಳು ಒಂದು ಲೋಡ್‌ಗೆ 10 ಸಾವಿರ ರೂ. ಇದ್ದರೆ ಮಲೇಷ್ಯಾ ಮರಳಿಗೆ 20 ಸಾವಿರ ರೂ. ತೆರಬೇಕಾಗುತ್ತದೆ.

ವೇ ಬ್ರಿಜ್‌ ಇಲ್ಲದ ಕಾರಣ ನಾನ್‌ ಸಿಆರ್‌ಝಡ್‌ ಗುತ್ತಿಗೆ ದಾರರ ಮರಳು ಸಾಗಾಟಕ್ಕೆ ಪರ್ಮಿಟ್‌ ತಡೆಹಿಡಿದಿದ್ದೇವೆ. ಅದನ್ನು ಅಳವಡಿಸುವುದು ಕಡ್ಡಾಯ. ಸಿಆರ್‌ಝಡ್‌ ಮರಳಿನ ಕುರಿತು ಪ್ರಸ್ತಾವನೆಯನ್ನು ರಾಜ್ಯ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರಕ್ಕೆ ಕಳುಹಿಸಿ ದ್ದೇವೆ. ಅನುಮೋದನೆ ಸಿಗಬೇಕಷ್ಟೇ.
– ದ್ವಿತೀಯಾ, ಉಪ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ದ.ಕ. ಜಿಲ್ಲೆ

ಮರಳು ಸಂಗ್ರಹ ಬರಿದಾಗಿದೆ. ಅಧಿಕಾರಿಗಳಿಗೆ ನಮ್ಮ ಸಮಸ್ಯೆ ತಿಳಿಸಿದ್ದೇವೆ. ಇನ್ನು ನಮ್ಮ ಕೆಲಸಗಳನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಬಂದಿದೆ. ಆದಷ್ಟೂ ಬೇಗನೆ ಮರಳು ಲಭ್ಯವಾಗುವಂತೆ ಮಾಡಬೇಕಿದೆ.
– ಮಹಾಬಲ ಕೊಟ್ಟಾರಿ, ಅಧ್ಯಕ್ಷರು, ಸಿವಿಲ್‌ ಕಾಂಟ್ರಾಕ್ಟರ್ ಅಸೋಸಿಯೇಶನ್‌, ದ.ಕ.

– ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next