ಧಾರವಾಡ : ನಕಲಿ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಬಳಸಿಕೊಂಡು ತಮ್ಮನ್ನು ಹಣಕ್ಕಾಗಿ ಪೀಡಿಸಲಾಗುತ್ತಿದ್ದು, ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿರುವುದಾಗಿ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಪುತ್ರ ನವೀನ ಕೋನರಡ್ಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೆ.18ಕ್ಕೆ ನನ್ನ ಮೊಬೈಲ್‌ಗೆ ವಿಡಿಯೋಕಾಲ್ ಒಂದು ಬಂದಿತ್ತು. 12 ಸೆಕೆಂಡ್ ನ ಈ ಕಾಲ್ ನಲ್ಲಿ ಆ ಕಡೆಯಿಂದ ಮಾತನಾಡುವವರು ಯಾರು ಎಂಬುದೇ ಗೊತ್ತಾಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ನನಗೆ ಮರಳಿ ಮೊಬೈಲ್ ಸ್ಕ್ರೀನ್ ಶಾಟ್‌ನ ಚಿತ್ರವೊಂದನ್ನು ಹರಿಬಿಟ್ಟರು.
ಇದರಲ್ಲಿ ನನ್ನ ಮುಖ ಮತ್ತು ಜೊತೆಗೆ ನಗ್ನ ಚಿತ್ರವಿರುವ ಹುಡುಗಿಯ ಫೋಟೊವಿತ್ತು. ಕೂಡಲೇ ನಾನು ಗಾಬರಿಯಾಗಿ ನನ್ನ ತಂದೆಗೆ ತಿಳಿಸಿದೆ. ಅವರು ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿದರು ಎಂದರು.
ಈ ಮಧ್ಯೆ ಇದನ್ನು ಬಹಿರಂಗೊಳಿಸಬಾರದು ಎಂದರೆ ಕೂಡಲೇ ತಮ್ಮ ಅಕೌಂಟ್‌ಗೆ ಹಣ ಹಾಕುವಂತೆ ಪೀಡಿಸಿದರು. ನಾನು ಕೂಡ ದೂರು ನೀಡುವ ಮುಂಚೆ ಇದು ಬಹಿರಂಗಗೊಳ್ಳಬಾರದು ಎನ್ನುವ ಉದ್ದೇಶದಿಂದ ಅವರಿಗೆ 13 ಸಾವಿರ ರೂ ಹಣವನ್ನು ಪೇಟಿಎಮ್ ಮೂಲಕ ರವಾನಿಸಿದೆ.
ನಂತರ ಪೊಲೀಸರಿಗೆ ದೂರು ನೀಡಿದೆ. ಅವರೆಲ್ಲ ಹಣ ವರ್ಗಾವಣೆಯಾದ ಅಕೌಂಟ್ ಮೂಲಕ ಅವರನ್ನು ಪತ್ತೆ ಹಚ್ಚಲಾಗಿದೆ. ಅವರು ರಾಜಾಸ್ತಾನ ಮೂಲದವರು ಎಂದು ಪೊಲೀಸರು ಹೇಳಿದ್ದಾರೆ ಎಂದರು. ಧಾರವಾಡದ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ನವೀನ ಕೋನರಡ್ಡಿ, ನಾನು ಯಾವುದೇ ತಪ್ಪು ಮಾಡಿಲ್ಲ. ಆದರೂ ಹಣಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಈ ರೀತಿ ಪೀಡಿಸುವ ದಂಧೆಕೋರರ ಕರಾಳ ಮುಖ ಎಲ್ಲರಿಗೂ ಗೊತ್ತಾಗಲಿ ಎಂದು ನಾನೇ ಖುದ್ದು ದೂರು ನೀಡಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ದೂರು ದಾಖಲಿಸಿದೆ ಎಂದರು.